ಕೋಲ್ಕತ್ತಾ: ಇಲ್ಲಿನ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಮೆಸ್ಸಿ (Lionel Messi) ಕಾರ್ಯಕ್ರಮದಲ್ಲಿ ಉಂಟಾದ ಅವ್ಯವಸ್ಥೆಗೆ ಸಂಬಂಧಿಸಿದಂತೆ ಕಾರ್ಯಕ್ರಮ ಆಯೋಜಕ ಸತಾದೃ ದತ್ತಾ (Satadru Dutta) ಅವರನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ.
ಕಾರ್ಯಕ್ರಮದ ವೇಳೆ ಉಂಟಾದ ಅವ್ಯವಸ್ಥೆ ಬಳಿಕ ಆಯೋಜಕ ಸತಾದೃ ದತ್ತಾ ಅವರನ್ನು ಪೊಲೀಸರು ವಶಕ್ಕೆ ಪಡೆದು, ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಬಳಿಕ ಅರೆಸ್ಟ್ ಮಾಡಲಾಗಿದೆ. ಸದ್ಯ ಕ್ರೀಡಾಂಗಣದ ಅವ್ಯವಸ್ಥೆಯ ಬಗ್ಗೆ ಪ್ರಾಥಮಿಕ ತನಿಖೆ ನಡೆಯುತ್ತಿದ್ದು, ಪರಿಸ್ಥಿತಿ ಈಗ ನಿಯಂತ್ರಣಕ್ಕೆ ಬಂದಿದೆ ಹಾಗೂ ಟಿಕೆಟ್ ಮರುಪಾವತಿಗೆ ಸೂಚನೆ ನೀಡಲಾಗಿದೆ. ಇನ್ನೂ ಈ ಸಂಬಂಧ ತನಿಖೆಗಾಗಿ ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ಆಶಿಮ್ ಕುಮಾರ್ ರೇ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚಿಸಿದೆ ಎಂದು ಎಡಿಜಿ ಮತ್ತು ಐಜಿಪಿ ಜಾವೇದ್ ಶಮೀಮ್ ಹೇಳಿದ್ದಾರೆ. ಇದನ್ನೂ ಓದಿ: ಮೆಸ್ಸಿ ಕಾರ್ಯಕ್ರಮದಲ್ಲಿ ದಾಂಧಲೆ – ಮಮತಾ ಬ್ಯಾನರ್ಜಿ ಕ್ಷಮೆಯಾಚನೆ
ಇನ್ನೂ ಈ ಸಂಬಂಧ ಸಿಎಂ ಮಮತಾ ಬ್ಯಾನರ್ಜಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಕಾರ್ಯಕ್ರಮದಲ್ಲಿನ ನಿರ್ವಹಣೆಯಲ್ಲಿನ ತೊಂದರೆಯಿಂದಾಗಿ ಆಘಾತಕ್ಕೊಳಗಾಗಿದ್ದೇನೆ. ಈ ದುರದೃಷ್ಟಕರ ಘಟನೆಗಾಗಿ ಲಿಯೋನೆಲ್ ಮೆಸ್ಸಿ ಮತ್ತು ಎಲ್ಲಾ ಕ್ರೀಡಾ ಪ್ರೇಮಿಗಳು, ಅವರ ಅಭಿಮಾನಿಗಳಿಗೆ ನಾನು ಕ್ಷಮೆಯಾಚಿಸುತ್ತೇನೆ ಎಂದು ತಿಳಿಸಿದ್ದಾರೆ.
ಮೆಸ್ಸಿ G.O.A.T ಟೂರ್ ಭಾಗವಾಗಿ ಇಂದು ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮದ ವೀಕ್ಷಣೆಗೆ 5,000 ರೂ. ನಿಂದ ಹಿಡಿದು 25,000 ರೂ. ಟಿಕೆಟ್ ದರ ನಿಗದಿಯಾಗಿತ್ತು. ಟಿಕೆಟ್ ಬೆಲೆ ದುಬಾರಿಯಾಗಿದ್ದರೂ ಮೆಸ್ಸಿ ನೋಡಲೆಂದು ಅಭಿಮಾನಿಗಳು ಸ್ಟೇಡಿಯಂಗೆ ಆಗಮಿಸಿದ್ದರು. ಆದರೆ ಕಾರ್ಯಕ್ರಮ ಕೇವಲ 10 ನಿಮಿಷದಲ್ಲಿ ಕೊನೆಗೊಂಡಿತು. ಇದಕ್ಕೆ ಸಿಟ್ಟಾದ ಅಭಿಮಾನಿಗಳು ಚೇರ್‌ಗಳನ್ನು ಕಿತ್ತೆಸೆದಿದ್ದಾರೆ. ನೀರಿನ ಬಾಟಲಿಗಳನ್ನು ಮೈದಾನಕ್ಕೆ ಎಸೆದು ಆಕ್ರೋಶ ಹೊರಹಾಕಿದ್ದಾರೆ.
ನಿಗದಿ ಪ್ರಕಾರ ಮೆಸ್ಸಿ ಮೈದಾನದ ಸುತ್ತಲೂ ಒಂದು ಸುತ್ತು ಪ್ರದಕ್ಷಿಣೆ ಬರಬೇಕಿತ್ತು. ಆದರೆ ಕಾರ್ಯಕ್ರಮದಲ್ಲಿನ ಅವ್ಯವಸ್ಥೆಯಿಂದ 10 ನಿಮಿಷದಲ್ಲೇ ಮೈದಾನ ತೊರೆದರು. ಮೈದಾನ ತೊರೆದ ಬೆನ್ನಲ್ಲೇ ಸಿಟ್ಟಾದ ಅಭಿಮಾನಿಗಳು ನಾವು ಮೆಸ್ಸಿಯ ಮುಖವನ್ನು ನೋಡಿಲ್ಲ. 10 ನಿಮಿಷದ ಕಾರ್ಯಕ್ರಮಕ್ಕೆ ದುಬಾರಿ ಬೆಲೆ ಯಾಕೆ ಎಂದು ಪ್ರಶ್ನಿಸಿದ್ದಾರೆ. ಮೆಸ್ಸಿಯನ್ನು ನಾವು ನೋಡಲೇ ಇಲ್ಲ. ಕೇವಲ ರಾಜಕಾರಣಿಗಳು ಮಾತ್ರ ಮೆಸ್ಸಿ ಜೊತೆ ಫೋಟೋ, ಹ್ಯಾಂಡ್ ಶೇಕ್ ಮಾಡಿದ್ದಾರೆ. ಬಹಳ ಕೆಟ್ಟದ್ದಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು ಎಂದಿದ್ದಾರೆ.ಇದನ್ನೂ ಓದಿ: ಕೋಲ್ಕತ್ತಾದ ಮೆಸ್ಸಿ ಕಾರ್ಯಕ್ರಮದಲ್ಲಿ ದಾಂಧಲೆ – ಚೇರ್, ಬಾಟಲ್ ಎಸೆದು ಅಕ್ರೋಶ

