ಚಾಮರಾಜನಗರ: ವಿದ್ಯಾಭ್ಯಾಸ ಮಾಡಲು ಕಾಡಿನೊಳಗೆ ಪ್ರತಿ ನಿತ್ಯ 7 ಕಿಮೀ ನಡೆದು ಶಾಲೆಗೆ ಹೋಗುತ್ತಿದ್ದ ಕಾಡಿನ ಮಕ್ಕಳಿಗೆ ಇದೀಗ ಜೀಪ್ ಸೌಲಭ್ಯ ಸಿಕ್ಕಿದೆ.
ಗಡಿ ಜಿಲ್ಲೆ ಚಾಮರಾಜನಗರದ ಹನೂರು ತಾಲೂಕಿನ ಪಚ್ಚೆದೊಡ್ಡಿ ಗ್ರಾಮದ ಶಾಲಾ ಮಕ್ಕಳು ಪ್ರತಿನಿತ್ಯ ಶಾಲೆಗೆ ತೆರಳಬೇಕಾದ್ರೆ ಪ್ರತಿನಿತ್ಯ 7 ಕಿಲೋಮೀಟರ್ ಕಾಲ್ನಡಿಗೆಯಲ್ಲಿಯೇ ಸಾಗಬೇಕಾದ ಅನಿವಾರ್ಯತೆ ಇತ್ತು. ಈ ಬಗ್ಗೆ ಅಲ್ಲಿನ ಶಾಲಾ ಮಕ್ಕಳು ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯಗೂ ಕೂಡ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು. ಈ ಬಗ್ಗೆ ‘ಪಬ್ಲಿಕ್ ಟಿವಿ’ಯು ವಿಸ್ತೃತ ವರದಿ ಬಿತ್ತರಿಸಿ ಶಾಲಾ ಮಕ್ಕಳಿಗೆ ಜೀಪ್ ವ್ಯವಸ್ಥೆ ಮಾಡಲು ಸರ್ಕಾರದ ಗಮನ ಸೆಳೆದಿತ್ತು.
ಇದೀಗ ಪಬ್ಲಿಕ್ ವರದಿ ಬೆನ್ನಲ್ಲೇ ಶಾಲಾ ಮಕ್ಕಳಿಗೆ, ನಿಂತು ಹೋಗಿದ್ದ ಜನ ವನ ಸೇವೆ ಆರಂಭಿಸಲು ಅರಣ್ಯ ಇಲಾಖೆ ಮುಂದಾಗಿದೆ. ಜನ ವನ ವಾಹನವನ್ನು ಅರಣ್ಯ ಇಲಾಖೆಗೆ ಹಿಂತಿರುಗಿಸುವಂತೆ ಡಿಸಿಗೆ ಪತ್ರ ಬರೆಯಲು ಕೂಡ ನಿರ್ಧರಿಸುರುವ ಡಿಸಿಎಫ್ ಭಾಸ್ಕರ್ ನಿನ್ನೆಯೇ ಪಚ್ಚೆದೊಡ್ಡಿ ಗ್ರಾಮಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ ಮಕ್ಕಳಿಗೆ ಜೀಪ್ ಭಾಗ್ಯ ನೀಡಿದ್ದಾರೆ.

