– ಬೆಳ್ತಂಗಡಿ ನ್ಯಾಯಾಲಯಕ್ಕೆ ಎಸ್‌ಐಟಿ ಪ್ರಾಥಮಿಕ ವರದಿ ಸಲ್ಲಿಕೆ
– ನ್ಯಾಯಾಲಯದ ದಿಕ್ಕು ತಪ್ಪಿಸಿದ 6 ಆರೋಪಿಗಳು
ಬೆಂಗಳೂರು: ಧರ್ಮಸ್ಥಳ(Dharmasthala) ಕ್ಷೇತ್ರದ ವಿರುದ್ಧ ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Thimarodi) ಮನೆಯಲ್ಲೇ ಪಿತೂರಿ ನಡೆಸಲಾಗಿದೆ ಎಂದು ವಿಶೇಷ ತನಿಖಾ ತಂಡ (SIT) ಹೇಳಿದೆ.
ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ತನಿಖೆ ನಡೆಸಿದ ಎಸ್‌ಐಟಿ ನ.20 ರಂದು ಬೆಳ್ತಂಗಡಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ತನಿಖಾ ಪ್ರಾಥಮಿಕ ವರದಿ ಸಲ್ಲಿಸಿತ್ತು. ಈ ತನಿಖಾ ವರದಿಯಲ್ಲಿ 6 ಮಂದಿ ಯಾವ ರೀತಿ ನ್ಯಾಯಾಲಯದ (Court) ದಾರಿ ತಪ್ಪಿಸಿದ್ದಾರೆ ಎಂಬುದನ್ನು ಎಳೆ ಎಳೆಯಾಗಿ ಉಲ್ಲೇಖಿಸಲಾಗಿದೆ.
ಯಾರೆಲ್ಲಾ ಆರೋಪಿಗಳು?
ಎ1 – ಚಿನ್ನಯ್ಯ
ಎ2 – ಮಹೇಶ್ ಶೆಟ್ಟಿ ತಿಮರೋಡಿ
ಎ3 – ಗಿರೀಶ್ ಮಟ್ಟಣ್ಣನವರ್
ಎ4 – ವಿಠಲ ಗೌಡ
ಎ5 – ಜಯಂತ್ ಟಿ
ಎ6 – ಸುಜಾತ ಭಟ್
ತಿಮರೋಡಿ ಪಾತ್ರ ಏನು?
ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲೇ ಒಳಸಂಚು ಮಾಡಿ ಚಿನ್ನಯ್ಯನಿಗೆ ಆಮಿಷವೊಡ್ಡಿ ದೂರು ಕೊಡಿಸಲಾಗಿದೆ. ಯಾವುದೋ ತಲೆಬುರುಡೆಯನ್ನು ಚಿನ್ನಯ್ಯನೇ ಹೂತಿದ್ದ ಬುರುಡೆ ಎಂದು ಬಿಂಬಿಸುವ ಪ್ರಯತ್ನ ಮಾಡಲಾಗಿತ್ತು. ಅನನ್ಯ ಭಟ್ ಪಾತ್ರ ಸೃಷ್ಟಿಯ ಹಿಂದೆ ತಿಮರೋಡಿ ಕೈವಾಡವಿದೆ. ತಿಮರೋಡಿ ಮಾತು ಕೇಳಿ ಮಗಳು ಕಾಣೆಯಾಗಿದ್ದಾಳೆಂದು ಸುಜಾತ ಭಟ್ ದೂರು ನೀಡಿದ್ದರು. ಕಪಟ ಕಾರ್ಯತಂತ್ರದ ರೂವಾರಿಯೇ ತಿಮರೋಡಿ ಎಂದು ಎಸ್‌ಐಟಿ ಉಲ್ಲೇಖಿಸಿದೆ. ಇದನ್ನೂ ಓದಿ: ಹಣ ಪಡೆದು ಬುರುಡೆ ಕಥೆ ಕಟ್ಟಿದ್ದ ಚಿನ್ನಯ್ಯ – ಎಸ್‌ಐಟಿ ವರದಿಯಲ್ಲಿ ಏನಿದೆ?
ಮಟ್ಟಣ್ಣನವರ್ ಸಂಚು ಏನು?
ವಿಠಲ ಗೌಡನ(Vittal Gowda) ಮೂಲಕ ಬಂಗ್ಲೆಗುಡ್ಡದಿಂದ ತಲೆ ಬುರುಡೆ ತರಿಸಿ ಅದನ್ನು ಬೆಂಗಳೂರಿನ ಅಪಾರ್ಟ್ ಮೆಂಟ್‌ನ ಸೆಕ್ಯೂರಿಟಿ ಗಾರ್ಡ್ ರೂಮಿನಲ್ಲಿ ಇಡಲಾಗಿತ್ತು. ಬಳಿಕ ಆ ತಲೆ ಬುರುಡೆಯನ್ನು ಜಯಂತ್‌ಗೆ ಕೊಟ್ಟು ದೆಹಲಿಗೆ ತರಿಸಿಕೊಳ್ಳಲಾಗಿತ್ತು.
ತಲೆ ಬುರುಡೆ ಸಮೇತ ಸುಪ್ರೀಂ ಕೋರ್ಟ್‌ಗೆ ದೂರು ನೀಡಲು ಪ್ರಯತ್ನ ನಡೆಸಲಾಗಿತ್ತು. ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ ಅದೇ ಬುರುಡೆಯನ್ನು ತಿಮರೋಡಿ ಮನೆಗೆ ತರಿಸಲಾಗಿತ್ತು. ಚಿನ್ನಯ್ಯನಿಗೆ ಸುಳ್ಳು ದೂರು ನೀಡುವಂತೆ ಹಣವನ್ನು ನೀಡಲಾಗಿತ್ತು. ಬುರುಡೆಯನ್ನು ತರುವುದು ಮತ್ತು ಹಸಿ ಹಸಿ ಸುಳ್ಳು ದೂರು ಕೊಡಿಸುವುದರಲ್ಲಿ ಗಿರೀಶ್ ಮಟ್ಟಣ್ಣನವರ್ ಪಾತ್ರ ದೊಡ್ಡದು. ಸುಜಾತಾ ಭಟ್ ಮಗಳ ಕಥೆ ಸೃಷ್ಟಿ ಹಿಂದೆಯೂ ಮಟ್ಟಣ್ಣನವರ್ ಕೈವಾಡವಿದೆ.
ಉಳಿದ ಆರೋಪಿಗಳ ಪಾತ್ರ ಏನು?
ಎ4 ವಿಠ್ಠಲ ಗೌಡ, ಎ5 ಜಯಂತ್ ಟಿ ಇಬ್ಬರೂ ಸಂಚಿನ ಭಾಗವೇ ಆಗಿದ್ದಾರೆ. ವಿಠಲ್ ಗೌಡ ಬಂಗ್ಲೆ ಗುಡ್ಡದಿಂದ ತಲೆ ಬುರುಡೆ ತಂದು ಆ ತಲೆ ಬುರುಡೆಯನ್ನು ಗಿರೀಶ್ ಮಟ್ಟಣ್ಣನವರ್‌ಗೆ ನೀಡಿದ ನಂತರ ಒಂದೊಂದೆ ಸಂಚು ರೂಪಿಸಲಾಗುತ್ತದೆ.
ದೂರುದಾರ ಚಿನ್ನಯ್ಯನ್ನನ್ನು ತಿಮರೋಡಿ ಮನೆಗೆ ಕರೆ ತಂದು ಸಭೆ ನಡೆಸಿ ಮುಂದೆ ಯಾವ ರೀತಿ ಈ ಪ್ರಕರಣವನ್ನು ತೆಗೆದುಕೊಂಡು ಹೋಗಬೇಕು ಎನ್ನುವುದರ ಬಗ್ಗೆ ಮಾತನಾಡುತ್ತಾರೆ. ಮಟ್ಟಣ್ಣನವರ್ ಅಣತಿಯಂತೆ ಬುರುಡೆಯನ್ನು ಮನೆಯಲ್ಲಿಟ್ಟ ಬಳಿಕ ರೈಲಿನಲ್ಲಿ ದೆಹಲಿಗೆ ತೆಗೆದುಕೊಂಡು ಹೋಗಲಾಗಿತ್ತು.
ಧರ್ಮಸ್ಥಳದ ವಿರುದ್ಧ ಒಳಸಂಚಿನಲ್ಲಿ ಜಯಂತ್ ನೇರ ಭಾಗಿಯಾಗಿರುವುದು ದೃಢಪಟ್ಟಿದೆ. ಅನನ್ಯ ಭಟ್ ಪಾತ್ರ ಸೃಷ್ಟಿಸಿ ಸುಳ್ಳು ಕಥೆ ಕಟ್ಟಿದ್ದ ಸುಜಾತ ಭಟ್ ಪ್ರಕರಣದಲ್ಲಿ ಆರನೇ ಆರೋಪಿಯಾಗಿದ್ದಾರೆ ಎಂದು ಎಸ್‌ಐಟಿ ತನ್ನ ತನಿಖಾ ವರದಿಯಲ್ಲಿ ಉಲ್ಲೇಖಿಸಿದೆ.
ಚಾರ್ಜ್‌ಶೀಟ್ ಸಲ್ಲಿಕೆಯಾಗಿಲ್ಲ:
ಎಸ್‌ಐಟಿ ಪೂರ್ಣ ಪ್ರಮಾಣದ ಆರೋಪ ಪಟ್ಟಿ ಸಲ್ಲಿಕೆ ಮಾಡಿಲ್ಲ. ಈಗ ಸಲ್ಲಿಕೆ ಮಾಡಿರುವುದು ಕೇವಲ ಪ್ರಾಥಮಿಕ ತನಿಖಾ ವರದಿ ಅಷ್ಟೇ. ತನಿಖೆಗೆ ಉಳಿದ ಆರೋಪಿಗಳು ಅಸಹಕಾರ ನೀಡುತ್ತಿದ್ದಾರೆ. ಕೆಲವೊಂದು ತಾಂತ್ರಿಕ ಸಾಕ್ಷಿಗಳ ವರದಿ ಬರಬೇಕಿದೆ. ತನಿಖೆ ಪೂರ್ಣಗೊಂಡ ನಂತರ ಅಂತಿಮ ವರದಿ ಸಲ್ಲಿಕೆ ಮಾಡಲಾಗುತ್ತದೆ ಎಂದು ಎಸ್‌ಐಟಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದೆ.

