ಬೆಳಗಾವಿ: ರಾಜ್ಯ ಸರ್ಕಾರದ ಅತಿ ಗಣ್ಯ ವ್ಯಕ್ತಿಗಳು ತುರ್ತು ಹಾಗೂ ವಿಶೇಷ ಸಂದರ್ಭಗಳಲ್ಲಿ ಪ್ರಯಾಣಿಸಲು ಅತ್ಯುತ್ತಮ ಗುಣಮಟ್ಟದ ಹೆಲಿಕಾಪ್ಟರ್, ವಿಶೇಷ ವಿಮಾನದ ಸೇವೆಯನ್ನು ಬಾಡಿಗೆ ಆಧಾರದಲ್ಲಿ ಪಡೆಯಲು ತೀರ್ಮಾನಿಸಲಾಗಿದೆ. ಹೆಲಿಕಾಪ್ಟರ್ (Helicopter), ವಿಶೇಷ ವಿಮಾನ (Special Flight) ಖರೀದಿ ಮಾಡಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ತಿಳಿಸಿದರು.
ಹೆಲಿಕಾಪ್ಟರ್, ವಿಶೇಷ ವಿಮಾನ ಸೇವೆ ಸಂಬಂಧ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಸಮಿತಿಯು ಬೆಳಗಾವಿ (Belagavi) ಸುವರ್ಣಸೌಧದಲ್ಲಿ ಮಂಗಳವಾರ ಸಭೆ ಸೇರಿ ಸಮಾಲೋಚನೆ ನಡೆಸಿತು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೆಲಿಕಾಪ್ಟರ್ ಸೇವೆ ಒದಗಿಸುವಂತೆ ನಾವು ಹೆಚ್‌ಎಎಲ್‌ಗೆ ಕೇಳಿದ್ದೆವು. ಅವರು ಇನ್ನೂ ತಡವಾಗುತ್ತದೆ ಎಂದು ಹೇಳಿದರು. ಹೆಚ್‌ಎಎಲ್‌ನಲ್ಲೇ ಹೆಲಿಕಾಪ್ಟರ್ ತಯಾರು ಮಾಡಲಾಗುತ್ತಿದೆ. ಏರ್ ಶೋ ವೇಳೆ ನಾನು, ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ನೋಡಿದ್ದೆವು. ಅಲ್ಲಿನ ಹೆಲಿಕಾಪ್ಟರ್ ಚೆನ್ನಾಗಿತ್ತು. ಅವರೇ ನಿರ್ವಹಣೆ ಮಾಡುತ್ತಾರೆ. ಹೀಗಾಗಿ ಅವರ ಸೇವೆಗೆ ಮನವಿ ಮಾಡಿದ್ದೆವು. ಸೇವೆ ಒದಗಿಸುವುದು ತಡವಾಗುವ ಕಾರಣ ಅವರೇ ಒಂದು ಸಂಸ್ಥೆಯನ್ನು ಶಿಫಾರಸು ಮಾಡಿದ್ದಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಮೆಕ್ಕೆ ಜೋಳಕ್ಕೆ ಬೆಂಬಲ ಬೆಲೆ, ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿ ಚಿತ್ರದುರ್ಗ ರೈತರ ಪ್ರತಿಭಟನೆ
ಇದಕ್ಕೆ ಟೆಂಡರ್ ಕರೆಯಲಾಗಿದ್ದು, ಕೆಲವರು ಭಾಗಿಯಾಗಿದ್ದಾರೆ. ಹೀಗಾಗಿ ಸಂಪುಟ ಉಪಸಮಿತಿ ಸದಸ್ಯರಾದ ಸಚಿವರಾದ ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ, ಬೈರತಿ ಸುರೇಶ್ ಹಾಗೂ ಅಧಿಕಾರಿಗಳು ಸಭೆ ನಡೆಸಿ ಚರ್ಚೆ ಮಾಡಿದ್ದೇವೆ. ಮುಂದಿನ ಸೋಮವಾರ ಅಥವಾ ಮಂಗಳವಾರ ಮತ್ತೊಂದು ಸಭೆ ಮಾಡುತ್ತೇವೆ. ಇದಕ್ಕೆ ತಾಂತ್ರಿಕವಾಗಿ ಪರಿಣಿತಿ ಹೊಂದಿರುವವರು ಬೇಕು. ಬೇರೆ ಸರ್ಕಾರಗಳಿಗೆ ಉತ್ತಮ ಸೇವೆ ನೀಡಿರುವಂತಹವರನ್ನು ನಾವು ಪರಿಗಣಿಸುತ್ತೇವೆ. ನಮಗೆ ಸುರಕ್ಷತೆ ಹಾಗೂ ಸರ್ಕಾರದ ಹಣ ಎರಡೂ ಮುಖ್ಯ ಎಂದು ತಿಳಿಸಿದರು. ಇದನ್ನೂ ಓದಿ: ಮನೆಗೆ ಮದ್ಯ – ಸದನದಲ್ಲಿ ಸ್ವಾರಸ್ಯಕರ ಚರ್ಚೆ
ಸಭೆಯಲ್ಲಿ ಸಚಿವರು ತಮ್ಮ ಅನುಭವಗಳ ಆಧಾರದ ಮೇಲೆ ಸಲಹೆ ನೀಡಿದ್ದಾರೆ. ಹೀಗಾಗಿ ಖರೀದಿ ಮಾಡದಿರಲು ತೀರ್ಮಾನಿಸಲಾಗಿದ್ದು, ಗಂಟೆಗಳ ಲೆಕ್ಕದಲ್ಲಿ ಬಾಡಿಗೆಗೆ ಪಡೆಯಲಾಗುವುದು ಎಂದರು. ಇದನ್ನೂ ಓದಿ: ಮೆಕ್ಕೆಜೋಳದ ರಾಶಿಗೆ ಬೆಂಕಿ – ಲಕ್ಷಾಂತರ ರೂ. ಬೆಳೆ ಹಾನಿ

