ನವದೆಹಲಿ: 2023ರ ಚುನಾವಣೆ ವೇಳೆ ಚಿತ್ತಾಪುರ (Chittapura) ಕ್ಷೇತ್ರದಲ್ಲಿ ಅಕ್ರಮ ನಡೆಸಲಾಗಿದೆ ಎಂಬ ಆರೋಪದ ಪ್ರಕರಣದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹಾಗೂ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ (Supreme Court) ನೋಟಿಸ್ ಜಾರಿ ಮಾಡಿದೆ.
ಹೈಕೋರ್ಟ್ ಆದೇಶ ಪ್ರಶ್ನಿಸಿ ಅಶ್ವತ್ಥರಾಮ್ ರಾಥೋಡ್ ಎಂಬುವವರು ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ್ ಹಾಗೂ ಸತೀಶ್ ಚಂದ್ರ ಶರ್ಮಾ ಅವರ ಪೀಠವು ಸೋಮವಾರ (ಡಿ.8) ವಿಚಾರಣೆ ನಡೆಸಿತು.ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ ಸುಪ್ರೀಂ ಕೋರ್ಟ್ ನೋಟಿಸ್
ಸುಳ್ಳು ಜಾತಿ ಪ್ರಮಾಣಪತ್ರ ಹಾಗೂ ಶೈಕ್ಷಣಿಕ ದಾಖಲೆಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವುದಲ್ಲದೇ, ಉಚಿತ ಗ್ಯಾರಂಟಿಗಳ ಮೂಲಕ ಮತದಾರರಿಗೆ ಆಮಿಷವೊಡ್ಡಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿರುವ ಪ್ರಿಯಾಂಕ್ ಖರ್ಗೆ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಪ್ರಿಯಾಂಕ್ ಅವರು ಪರಿಶಿಷ್ಟ ಜಾತಿ ಪ್ರಮಾಣ ಪತ್ರದ ಬದಲು ಗ್ರಾಮ ಪಂಚಾಯಿತಿ ಚುನಾವಣೆಗೆ ಸಲ್ಲಿಸಲಾಗುವ ಜಾತಿ ಮತ್ತು ಆದಾಯ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಅದೂ ಸಹ 2021ರ ಪ್ರಮಾಣ ಪತ್ರವಾಗಿದೆ. ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದಂತೆಯೂ ಅಸಮರ್ಪಕ ಮತ್ತು ನಕಲಿ ದಾಖಲೆಗಳನ್ನು ಸಲ್ಲಿಸಿದ್ದಾರೆ. ಇದಲ್ಲದೆ, ಕಾಂಗ್ರೆಸ್‌ನಿಂದ ಗ್ಯಾರಂಟಿ ಯೋಜನೆಗಳ ಮೂಲಕ ಮತದಾರರಿಗೆ ಆಮಿಷ ಒಡ್ಡಿದ್ದು, ಇದು ಲಂಚ ಹಾಗೂ ಭ್ರಷ್ಟಾಚಾರಕ್ಕೆ ಸಮ ಎಂದು ದೂರಿದ್ದಾರೆ.ಇದನ್ನೂ ಓದಿ: ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ, ಯಾವುದೇ ಬದಲಾವಣೆ ಇಲ್ಲ: ಮತ್ತೆ ತಂದೆಯ ಪರ ಯತೀಂದ್ರ ಬ್ಯಾಟಿಂಗ್

