ಕೊಪ್ಪಳ: ಫೋಟೋಶೂಟ್‌ಗೆ ಹೋಗಿದ್ದ ಭಾವಿ ದಂಪತಿ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಗಂಗಾವತಿ (Gangavathi) ತಾಲೂಕಿನ ಚಿಕ್ಕಬೆಣಕಲ್ ಗ್ರಾಮದ ಬಳಿ ನಡೆದಿದೆ.
ಕೊಪ್ಪಳ ತಾಲೂಕಿನ ಹನುಮನಹಟ್ಟಿ ಗ್ರಾಮದ ಕರಿಯಪ್ಪ ಮಡಿವಾಳ ಹಾಗೂ ಕಾರಟಗಿ ತಾಲೂಕಿನ ಮುಷ್ಟೂರು ಗ್ರಾಮದ ಕವಿತಾ ಮೃತರು. ಈ ಜೋಡಿಯ ಮದುವೆಯನ್ನು ಇದೇ ತಿಂಗಳ 20ರಂದು ನಿಶ್ಚಯಿಸಲಾಗಿತ್ತು. ಮದುವೆ ಹಿನ್ನೆಲೆ ಇಬ್ಬರು ಪ್ರೀ-ವೆಡ್ಡಿಂಗ್ ಶೂಟ್‌ಗಾಗಿ ತೆರಳಿದ್ದರು.ಇದನ್ನೂ ಓದಿ: ಕೊಪ್ಪಳ: ಪ್ರೀ ವೆಡ್ಡಿಂಗ್ ಶೂಟ್‌ಗೆ ಹೋಗಿ ಜೋಡಿ ಅಪಘಾತದಲ್ಲಿ ದಾರುಣ ಸಾವು
ಮುನಿರಾಬಾದ್‌ನ ಪಂಪಾವನ, ಕೂಕನಪಳ್ಳಿಯ ಬೂದೇಶ್ವರ ದೇವಸ್ಥಾನ ಬಳಿ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಬಳಿಕ ಮೃತ ಕರಿಯಪ್ಪ, ಕವಿತಾಳನ್ನು ಬೈಕ್ ಮೇಲೆ ಮುಷ್ಟೂರಿಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಚಿಕ್ಕಬೆಣಕಲ್ ಗ್ರಾಮದ ಬಳಿ ಲಾರಿಯನ್ನು ಓವರ್ ಟೆಕ್ ಮಾಡುವಾಗ ಎದುರಿಗೆ ಬಂದ ಲಾರಿಯೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಕವಿತಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕರಿಯಪ್ಪ ಆಸ್ಪತ್ರೆಗೆ ಸಾಗಿಸುವ ಮಾರ್ಗಮದ್ಯೆ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಗಂಗಾವತಿ ಗ್ರಾಮೀಣ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಈ ಸಂಬಂಧ ಪ್ರಕರಣ ದಾಖಲು ಮಾಡಿ, ತನಿಖೆ ಆರಂಭಿಸಿದ್ದಾರೆ.
ಇನ್ನು ಕರಿಯಪ್ಪನ ಜೊತೆಗೆ ಆತನ ಅಣ್ಣ ರಮೇಶ್‌ನದ್ದು ಕೂಡ ವಿವಾಹ ನಿಶ್ಚಿತವಾಗಿತ್ತು. ಹೀಗಾಗಿ ಸಹೋದರರಿಬ್ಬರೂ ಸಹ ಫೋಟೋಶೂಟ್‌ಗೆ ತೆರಳಿದ್ದರು. ಫೋಟೋಶೂಟ್ ಬಳಿಕ ರಮೇಶ್ ಊರಿಗೆ ತೆರಳಿದರೆ, ಕರಿಯಪ್ಪ, ತನ್ನ ಭಾವಿ ಪತ್ನಿಯನ್ನು ಊರಿಗೆ ಬಿಡಲು ಹೊರಟಾಗ ಈ ದುರ್ಘಟನೆ ಸಂಭವಿಸಿದೆ. ಕರಿಯಪ್ಪ ಹಾಗೂ ಕವಿತಾ ಮನೆಯವರಿಬ್ಬರು ಮದುವೆಗೆ ಎಲ್ಲ ತಯಾರಿ ಮಾಡಿಕೊಂಡಿದ್ದರು. ಆದರೆ ವಿಧಿಯಾಟ ಮಾತ್ರ ಇಬ್ಬರನ್ನು ಹಸೆಮಣೆಗೆ ಏರಿಸುವ ಬದಲು ಮಸಣವನ್ನು ಸೇರಿಸಿದೆ.ಇದನ್ನೂ ಓದಿ: ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ, ಯಾವುದೇ ಬದಲಾವಣೆ ಇಲ್ಲ: ಮತ್ತೆ ತಂದೆಯ ಪರ ಯತೀಂದ್ರ ಬ್ಯಾಟಿಂಗ್

