ಬೆಳಗಾವಿ: ಸುಮಾರು ನಾಲ್ಕು ಸಾವಿರಕ್ಕಿಂತ ಹೆಚ್ಚಿನ ಮರಗಳನ್ನು ಬೆಳೆಸುವ ಮೂಲಕ ಸಾಲುಮರದ ತಿಮ್ಮಕ್ಕ ಎಂದೇ ಸುಪ್ರಸಿದ್ಧರಾಗಿದ್ದ ಪದ್ಮಶ್ರೀ ಹಾಗೂ ನಾಡೋಜ ಪ್ರಶಸ್ತಿ ಪುರಸ್ಕೃತ ಶತಾಯುಷಿ ಸಾಲುಮರದ ತಿಮ್ಮಕ್ಕ (Salumarada Timmakka) ಅವರ ನಿಧನಕ್ಕೆ ಮೇಲ್ಮನೆಯಲ್ಲಿ ಸಂತಾಪ ಸಲ್ಲಿಸಲಾಯಿತು.
ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಅವರು ಸಂತಾಪ ಸೂಚನೆ ನಿರ್ಣಯ ಮಂಡಿಸಿದರು. ಮೃತರ ಗೌರವಾರ್ಥ ಎಲ್ಲ ಸದಸ್ಯರು ಎದ್ದು ನಿಂತು ಒಂದು ನಿಮಿಷ ಮೌನಾಚರಿಸಿದರು.ಇದನ್ನೂ ಓದಿ: ವೃಕ್ಷಮಾತೆ ಶತಾಯುಷಿ ಸಾಲುಮರದ ತಿಮ್ಮಕ್ಕ ವಿಧಿವಶ
1911ರ ಜೂ.30ರಂದು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಜನಿಸಿದ್ದ ತಿಮ್ಮಕ್ಕನವರು 2025ರ ನ.14ರಂದು ನಿಧನರಾದರು. ತಿಮ್ಮಕ್ಕನವರು ತಮಗೆ ತಾಯಿಯಾಗುವ ಭಾಗ್ಯವಿಲ್ಲವೆಂದು ತಿಳಿದ ಮೇಲೆ ಕುದೂರು-ಹುಲಿಕಲ್ ರಸ್ತೆ ಬದಿಯಲ್ಲಿ ಆಲದ ಮರಗಳ ಸಸಿಗಳನ್ನು ನೆಟ್ಟು, ಅವುಗಳನ್ನು ಮಕ್ಕಳಂತೆ ಸಾಕಿ ಪೋಷಣೆ ಮಾಡಿದ್ದರು. ಅವರ ಸ್ಫೂರ್ತಿಯಲ್ಲಿ “ತಿಮ್ಮಕ್ಕ ಮಾತು 284 ಮಕ್ಕಳು” ಎಂಬ ಸಾಕ್ಷ್ಯಚಿತ್ರವನ್ನು ನಿರ್ಮಿಸಲಾಗಿತ್ತು. ಈ ಸಾಕ್ಷ್ಯಚಿತ್ರವು 2000 ಇಸವಿಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು.
ಔಪಚಾರಿಕ ಶಿಕ್ಷಣವನ್ನು ಪಡೆಯದಿದ್ದ ತಿಮ್ಮಕ್ಕನವರು ಕೂಲಿ ಕಾರ್ಮಿಕರಾಗಿ ಕೆಲಸ ಮಾಡಿದ್ದಾರೆ. ಪರಿಸರ ಸಂರಕ್ಷಣೆಗೆ ನೀಡಿರುವ ಕೊಡುಗೆಯನ್ನು ಗುರುತಿಸಿ, ಭಾರತದ ರಾಷ್ಟ್ರೀಯ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕರ್ನಾಟಕದ ಕೇಂದ್ರೀಯ ವಿಶ್ವವಿದ್ಯಾಲಯವು 2020ರಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ಘೋಷಿಸಿದೆ. ಇಂದಿರಾ ಪ್ರಿಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿ, ಕಲ್ಪವಲ್ಲಿ ಪ್ರಶಸ್ತಿ, ಮಹಿಳಾ ರತ್ನ ಪ್ರಶಸ್ತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿಗಳಲ್ಲದೆ ಇತರೆ ಹತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
2016ರಲ್ಲಿ ಬ್ರಿಟಿಷ್ ಬ್ರಾಡ್ ಕಾಸ್ಟಿಂಗ್ ಕಾರ್ಪೊರೇಷನ್ ಸಂಸ್ಥೆಯವರು ವಿಶ್ವದ ಅತ್ಯಂತ ಪ್ರಭಾವಶಾಲಿ ಮತ್ತು ಸ್ಫೂರ್ತಿದಾಯಕ ಮಹಿಳೆಯರಲ್ಲಿ ಒಬ್ಬರೆಂದು ತಿಮ್ಮಕ್ಕನವರನ್ನು ಸೇರ್ಪಡೆ ಮಾಡಿ, ಭಾರತದಲ್ಲಿ ಅನೇಕ ಅರಣೀಕರಣ ಕಾರ್ಯಕ್ರಮಗಳಿಗೆ ಆಹ್ವಾನಿಸಲಾಗುತ್ತಿತ್ತು. ಅವರ ಗ್ರಾಮದಲ್ಲಿ ನಡೆಯುವ ವಾರ್ಷಿಕ ಜಾತ್ರೆಗಾಗಿ ಮಳೆ ನೀರನ್ನು ಸಂಗ್ರಹಿಸಲು ಟ್ಯಾಂಕ್ ನಿರ್ಮಿಸುವಂತಹ ಇತರೆ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ತಿಮ್ಮಕ್ಕನವರ ನಿಧನದಿಂದ ರಾಜ್ಯವು ಹಿರಿಯ ಪರಿಸರ ಸಂರಕ್ಷಕಿಯೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ತಿಳಿಸಿದರು.ಇದನ್ನೂ ಓದಿ: ಜಗತ್ತಲ್ಲಿ ಯಾವ್ದು ಶಾಶ್ವತವಲ್ಲ, ಯಾರಿಗೂ ತೊಂದರೆಯಾಗದಂತೆ ಪ್ರೀತಿಯಿಂದ ಬದುಕಿ – ಕೊನೆಕ್ಷಣದಲ್ಲಿ ರಾಜ್ಯದ ಜನತೆಗೆ ತಿಮ್ಮಕ್ಕನ ಭಾವನಾತ್ಮಕ ಸಂದೇಶ

