ಮುಂಬೈ: ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ (Palash Muchhal) ಜೊತೆಗಿನ ಮದುವೆ ಮುಂದೂಡಿಕೆ ಕುರಿತು ಕೆಲ ದಿನಗಳಿಂದ ಹರಿದಾಡುತ್ತಿದ್ದ ನಾನಾ ವದಂತಿಗಳಿಗೆ ಟೀಂ ಇಂಡಿಯಾ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ (Smriti Mandhana) ತೆರೆ ಎಳೆದಿದ್ದಾರೆ.
ಮದುವೆಯನ್ನ (Wedding) ರದ್ದುಗೊಳಿಸಿರುವುದಾಗಿ ಖುದ್ದು ಸ್ಮೃತಿ ಅವ್ರೇ ತಮ್ಮ ಇನ್‌ಸ್ಟಾ (Instagram) ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಎಲ್ಲಾ ವದಂತಿಗಳಿಗೆ ಫುಲ್‌ಸ್ಟಾಪ್ ಇಟ್ಟಿದ್ದಾರೆ. ಅಲ್ಲದೇ ಈ ಹೇಳಿಕೆಯೊಂದಿಗೆ ಈ ವಿಷಯ ಕೊನೆಗೊಳಿಸಲು ಬಯಸುತ್ತೇನೆ ಅಂತಲೂ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
Smriti Mandhana’s Instagram story. pic.twitter.com/dBB0LZCTlp
— Mufaddal Vohra (@mufaddal_vohra) December 7, 2025
ಸ್ಮೃತಿ ಇನ್‌ಸ್ಟಾ ಪೋಸ್ಟ್‌ನಲ್ಲಿ ಏನಿದೆ?
ಕಳೆದ ಕೆಲ ವಾರಗಳಿಂದ ನನ್ನ ಜೀವನದ ಬಗ್ಗೆ ಸಾಕಷ್ಟು ಊಹಾಪೋಹಗಳು ಹಬ್ಬಿವೆ. ಹಾಗಾಗಿ ಈ ಸಮಯದಲ್ಲಿ ನಾನು ಮಾತನಾಡುವುದು ಮುಖ್ಯ ಅಂತ ಭಾವಿಸಿ ಮಾತನಾಡ್ತಿದ್ದೇನೆ. ನಾನು ತುಂಬಾ ಖಾಸಗಿ ವ್ಯಕ್ತಿ, ಅದನ್ನ ಹಾಗೆಯೇ ಇಡಲು ಬಯಸುತ್ತೇನೆ. ಆದರೆ ಮದುವೆಯನ್ನ ರದ್ದುಗೊಳಿಸಲಾಗಿದೆ ಎಂಬುದನ್ನ ಸ್ಪಷ್ಟಪಡಿಸಬೇಕಾಗಿದೆ.
ಈ ವಿಷಯವನ್ನು ಇಲ್ಲಿಗೆ ಮುಗಿಸಲು ನಾನು ಬಯಸುತ್ತೇನೆ, ನೀವೂ ಕೂಡ ಈ ವಿಷಯವನ್ನ ಇಲ್ಲಿಗೆ ಬಿಡಬೇಕೆಂದು ಮನವಿ ಮಾಡ್ತೇನೆ. ದಯವಿಟ್ಟು ಈ ಸಮಯದಲ್ಲಿ ಎರಡೂ ಕುಟುಂಬಗಳ ಗೌಪ್ಯತೆ ಗೌರವಿಸಿ. ನಮ್ಮದೇ ಹಾದಿಯಲ್ಲಿ ಮುಂದುವರಿಯಲು ನಮಗೆ ಅವಕಾಶ ಮಾಡಿಕೊಡಿ ಅಂತ ವಿನಂತಿಸಿಕೊಳ್ಳುತ್ತೇನೆ.
ನಮ್ಮೆಲ್ಲರನ್ನೂ ಮತ್ತು ನನ್ನನ್ನು ಮುನ್ನಡೆಸುವ ಒಂದು ಉನ್ನತ ಉದ್ದೇಶವಿದೆ ಎಂದು ನಾನು ನಂಬುತ್ತೇನೆ. ಅದು ಯಾವಾಗಲೂ ನನ್ನ ದೇಶವನ್ನು ಉನ್ನತ ಮಟ್ಟದಲ್ಲಿ ಪ್ರತಿನಿಧಿಸುತ್ತಿದೆ. ಸಾಧ್ಯವಾದಷ್ಟು ಕಾಲ ಭಾರತಕ್ಕಾಗಿ ಆಟವಾಡುವುದನ್ನ ಮತ್ತು ಟ್ರೋಫಿಗಳನ್ನು ಗೆಲ್ಲುವುದನ್ನು ಮುಂದುವರಿಸಬೇಕೆಂದು ನಾನು ಭಾವಿಸುತ್ತೇನೆ. ಅದರ ಕಡೆಗೆಯೇ ನನ್ನ ಗಮನ ಶಾಶ್ವತವಾಗಿರುತ್ತದೆ. ನಿಮ್ಮೆಲ್ಲರ ಬೆಂಬಲಕ್ಕೆ ಧನ್ಯವಾದಗಳು. ಇದು ಮುಂದುವರಿಯುವ ಸಮಯ ಅಂತ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಹಿಂದೆ ನಡೆದಿದ್ದು…
ಎಲ್ಲವೂ ಅಂದುಕೊಂಡಂತೆ ನಡೆದಿದ್ರೆ ಕಳೆದ ನ.23ರಂದು ಸ್ಮೃತಿ-ಪಲಾಶ್ ಮುಚ್ಚಲ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದರು. ಆದ್ರೆ ಅಲ್ಲಿ ಆಗಿದ್ದೇ ಬೇರೆ. ಮದುವೆಗೆ ಕೆಲ ಗಂಟೆಗಳು ಬಾಕಿಯಿರುವಾಗಲೇ ಮಂಧಾನ ತಂದೆಗೆ ಲಘು ಹೃದಯಾಘಾತವಾಗಿತ್ತು. ಅವರು ಸಂಪೂರ್ಣ ಗುಣಮುಖರಾಗುವವರೆಗೆ ಮದುವೆ ಸಮಾರಂಭ ಮುಂದೂಡಲು ಸ್ಮೃತಿ ನಿರ್ಧರಿಸಿದ್ದರು. ಈ ಬೆನ್ನಲ್ಲೇ ಸ್ಮೃತಿ ಮಂಧಾನ ತನ್ನ ಇನ್‌ಸ್ಟಾಗ್ರಾಂ ಖಾತೆಯಿಂದ ಪಲಾಶ್ ಹಾಗೂ ವಿವಾಹಕ್ಕೆ ಸಂಬಂಧಿಸಿದ ಎಲ್ಲಾ ಫೋಟೋ ಹಾಗೂ ವಿಡಿಯೋಗಳನ್ನು ಡಿಲೀಟ್ ಮಾಡಿದ್ರು.
ಇದರ ಮಧ್ಯೆ ಸ್ಮೃತಿ ಜೊತೆ ಮದುವೆ ನಿಶ್ಚಯವಾಗಿದ್ದರೂ ಪಲಾಶ್ ಮುಚ್ಚಲ್ ಬೇರೊಬ್ಬ ಯುವತಿ ಜೊತೆ ಚಾಟ್ ಮಾಡಿದ್ದಾರೆ ಎನ್ನಲಾದ ಸ್ಕ್ರೀನ್‌ಶಾಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಬಳಿಕ ಪಲಾಶ್ ತನ್ನ ಎಕ್ಸ್ ಗರ್ಲ್‌ಫ್ರೆಂಡ್ ಪ್ಲಾಸ್ಟಿಕ್ ಸರ್ಜನ್ ಬಿರ್ವಾ ಶಾ ಅವರಿಗೆ ಪ್ರಪೋಸ್ ಮಾಡಿದ್ದ ಫೋಟೋಗಳು ಹಾಗೂ ಆಕೆಯೊಂದಿಗೆ ರೊಮ್ಯಾಂಟಿಕ್ ಮೂಡ್‌ನಲ್ಲಿದ್ದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಬಳಿಕ ಮದುವೆ ರದ್ದಾಗಿದೆ ಎಂಬ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಲೇ ಇತ್ತು. ಇದೀಗ ಈ ಎಲ್ಲ ವದಂತಿಗಳಿಗೆ ಖುದ್ದು ಸ್ಮೃತಿ ಮಂಧಾನ ಅವರೇ ತೆರೆ ಎಳೆದಿದ್ದಾರೆ.




