ಮಡಿಕೇರಿ: ಕೊಡಗು (Kodagu) ಜಿಲ್ಲೆಯಾದ್ಯಂತ ಸುಗ್ಗಿ ಹಬ್ಬ ಪುತ್ತರಿ (ಹುತ್ತರಿ) ಸಂಭ್ರಮ ಗರಿಗೆದರಿತು. ಧಾನ್ಯ ಲಕ್ಷ್ಮಿಯನ್ನ ಮನೆ ತುಂಬಿಸಿಕೊಳ್ಳುವ ಹಬ್ಬದಾಚರಣೆ ಹಿನ್ನೆಲೆ ಕೊಡಗು ಜಿಲ್ಲೆಯ ವಿವಿಧೆಡೆ ಸಾಂಸ್ಕೃತಿಕ ವೈಭವ ಮೇಳೈಸಿದೆ, ಅಲ್ಲಲ್ಲಿ ಜನಪದ ಲೋಕವೇ ಸೃಷ್ಟಿಯಾಯಿತು. ಕೊಡವರ ವಿಶೇಷ ವೋಲಗದೊಂದಿಗೆ ಸಂಸ್ಕೃತಿ ಆಚಾರ-ವಿಚಾರಗಳ ʻಆಟ್ ಪಾಟ್ʼ ಕಾರ್ಯಕ್ರಮಗಳಿಗೆ ಮಡಿಕೇರಿ ಕೋಟೆಯ ಆವರಣ ಸಾಕ್ಷಿಯಾಯಿತು.
ಹೌದು. ಕೊಡಗಿನಾದ್ಯಂತ ಹುತ್ತರಿ ಹಬ್ಬವನ್ನ (Huttari Festival) ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ.. ಮಹಿಳೆಯರ ತಳಿಯತಕ್ಕಿ ಬೊಳ್ಚ ದುಡಿಕೊಟ್‌ಪಾಟ್‌ನೊಂದಿಗೆ ಜಾಗಟೆ, ಡೋಲು ಸಹಿತ ಕುಶಾಲ ತೋಪು ಸಿಡಿಸಿ ಪೊಲಿಪೊಲಿ ದೇವಾ ಉದ್ಘೋಷಗಳ ನಡುವೆ ಕದಿರನ್ನು ತೆಗೆದು ತೆನೆಗಳನ್ನ ಮಂಟಪದಲ್ಲಿರಿಸಿ ವಿಶೇಷ ಲಕ್ಷ್ಮಿ ಪೂಜೆ ನೆರವೇರಿಸಲಾಯಿತು. ಇದನ್ನೂ ಓದಿ: ಶಾಲಾ ಪಠ್ಯದಲ್ಲಿ ಭಗವದ್ಗೀತೆ ಬೋಧನೆ; ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ಹೆಚ್‌ಡಿಕೆ ಪತ್ರ

ಕೊಡವರ ಸಾಂಪ್ರದಾಯಿಕ ಮತ್ತು ಶ್ರೇಷ್ಠ ಹಬ್ಬವೆಂದು ಗುರುತಿಸಿಕೊಂಡಿರುವ ಹುತ್ತರಿಯ ಆಚರಣೆಯ ಸಂಭ್ರಮ ಮಡಿಕೇರಿಯ ಕೋಟೆಯ ಆವರಣದಲ್ಲಿ ಮನೆಮಾಡಿತ್ತು. ಇತಿಹಾಸದ ಗತವೈಭವಕ್ಕೆ ಕೋಟೆ ಆವರಣ ಸಾಕ್ಷಿಯಾಯಿತು. ಹಿಂದಿನಿಂದಲೂ ಆಚರಿಸಿಕೊಂಡು ಬಂದ ಕಲೆ ಸಂಸ್ಕ್ರತಿಗಳು ಅನಾವರಣಾಗೊಂಡವು. ಕೊಡಗಿನ ಸುಗ್ಗಿ ಹಬ್ಬ ಹುತ್ತರಿ ಪ್ರಯುಕ್ತ ನಡೆದ ಸಾಂಪ್ರದಾಯಿಕ ಕೋಲಾಟ ನೋಡುಗರ ಮನಸೊರೆಗೊಂಡಿತು. ಇದನ್ನೂ ಓದಿ: ಇಂಡಿಗೋ ವಿಮಾನ ಹಾರಾಟ ವ್ಯತ್ಯಯ – ವೀಡಿಯೋ ಕಾನ್ಫರೆನ್ಸ್‌ನಲ್ಲಿ ಆರತಕ್ಷತೆಗೆ ಭಾಗಿಯಾದ ಟೆಕ್ಕಿಗಳು

ಕೋಲಾಟಕ್ಕೊಂದು ಇತಿಹಾಸ
ಕೊಡಗನ್ನಾಳುತ್ತಿದ್ದ ರಾಜರು ಕೋಟೆಯ ಆವರಣದಲ್ಲಿ ಕೋಲಾಟ ನಡೆಸಲು ಅನುವು ಮಾಡಿಕೊಟ್ಟಿದ್ದರಂತೆ, ಆ ನಂತರದಲ್ಲಿ ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ಕೋಲಾಟಕ್ಕೆ ಕೋಟೆಯ ಹೊರತಾಗಿ ಗದ್ದುಗೆಯ ಬಳಿ ಅವಕಾಶ ಕಲ್ಪಿಸಿಕೊಟ್ಟರಂತೆ. ತದನಂತರದಲ್ಲಿ ಕೆಲ ವರ್ಷಗಳಿಂದೀಚೆಗೆ ಇತ್ತೀಚೆಗೆ ಮತ್ತೆ ಕೋಟೆ ಆವರಣದಲ್ಲಿ ಹುತ್ತರಿ ಕೋಲಾಟ ನಡೆಸುವ ಮೂಲಕ ನಮ್ಮ ಐತಿಹಾಸಿಕ ಕಲೆ ಸಂಸ್ಕ್ರತಿ ಬಿಂಬಿಸಲಾಗುತ್ತಿದೆ. ಅಲ್ಲದೇ ಇತ್ತೀಚಿನ ಯುವ ಪೀಳಿಗೆ ಕೊಡವ ಸಂಸ್ಕೃತಿ ಮರೆಯುತ್ತಿರುವ ಹಿನ್ನೆಲೆ ಯುವ ಸಮೂಹಕ್ಕೆ ಉತ್ಸಾಹ ತುಂಬುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಈ ಬಾರಿಯು ಕೂಡ ಹುತ್ತರಿಯ ಪ್ರಯುಕ್ತ ಸಾಂಪ್ರದಾಯಿಕ ಕೋಲಾಟ, ಕತ್ತಿಯಾಟ ಬೋಳಕಾಟ್ ಪರಿಯ ಕಳಿ ಸೇರಿದಂತೆ ಮತ್ತಿತರ ಸಾಂಸ್ಕ್ರತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು. ಹಲವು ತಂಡಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಕರ್ಷಕ ಸಾಂಪ್ರದಾಯಿಕ ನೃತ್ಯ ಪ್ರದಶಿಸಿದವು. ಅಲ್ಲದೇ ಕಾರ್ಯಕ್ರಮಕ್ಕೆ ಅಗಮಿಸಿದ ನೂರಾರು ಜನರು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸುವ ಮೂಲಕ ಗಮನಸೆಳೆದರು. ಇದನ್ನೂ ಓದಿ: ಇಂಡಿಗೋ ಸಮಸ್ಯೆ – ಬೆಂಗಳೂರು ಏರ್‌ಪೋರ್ಟ್‌ನಲ್ಲಿ ತಂದೆಯ ಅಸ್ಥಿ ಹಿಡಿದು ಮಗಳ ಪರದಾಟ

ಹುತ್ತರಿ ಹಬ್ಬದ ವಿಶೇಷ ಏನು?
ಹುತ್ತರಿ ಕೊಡಗಿನ ಸುಗ್ಗಿ ಹಬ್ಬ. ಬೀಸುವ ಗಾಳಿ, ಮೈನಡುಗಿಸುವ ಚಳಿಯಲ್ಲೂ ಬೆಚ್ಚನೆಯ ಸಂಭ್ರಮ ಉಕ್ಕೇರಿಸುವ ಸಡಗರದ ಹಬ್ಬ. ಬಡವ-ಬಲ್ಲಿದ, ಹಳ್ಳಿ-ಪಟ್ಟಣಗಳ ಹಂಗಿಲ್ಲದ ಮನೆ ಮನೆ ಹಬ್ಬ. ಕೊಡಗಿನ ಪ್ರಮುಖ ಹಬ್ಬ ಪುತ್ತರಿ ಧಾನ್ಯಲಕ್ಷ್ಮಿಯನ್ನ ಮನೆಗೊಯ್ಯೋ ಜಾನಪದೀಯ ವಿಶಿಷ್ಟ ಹಬ್ಬ ನಿಜಕ್ಕೂ ವೈಶಿಷ್ಟ್ಯಪೂರ್ಣ. ಸಾಂಪ್ರದಾಯಿಕ ಉಡುಗೆತೊಟ್ಟ ಕೊಡವರು ದೇವಾಲಯದ ಅವರಣದಲ್ಲಿ ಇರುವ ಭತ್ತದ ತೇನೆಗೆ ನಮಿಸಿ ನೆರೆಕಟ್ಟುತ್ತಾರೆ. ನಂತರ ದುಡಿಕಟ್ಟು ಪಾಟ್ ಸಮೇತ ಕೋವಿಯೊಂದಿಗೆ ಊರಿನ ಮಂದಿಯೆಲ್ಲಾ ಮೆರವಣಿಗೆ ಮೂಲಕ ಗದ್ದೆಗೆ ತೆರಳುತ್ತಾರೆ. ಅಲ್ಲಿ ಸಂಭ್ರಮದಿಂದ ಒಂದು ಸುತ್ತು ಗುಂಡು ಹಾರಿಸಿ ಕದಿರು ಕುಯ್ಯುತ್ತಾರೆ, ಪುಲಿ ಪುಲಿ ದೇವಾ ಪೊಲಿಯೇ ದೇವಾ ಎಂದು ಸಂತಸದಿಂದ ಕೂಗುತ್ತಾ ಧಾನ್ಯಲಕ್ಷ್ಮಿಯನ್ನ ಶಾಸ್ತ್ರೋಕ್ತವಾಗಿ ತೆಗೆದು ಸಾಂಪ್ರದಾಯಿಕ ಹಾಡಿನೊಂದಿಗೆ ಸಾಗುತ್ತಾರೆ..

ಅಧಿಕೃತವಾಗಿ ಕೊಡಗಿನಾದ್ಯಂತ ಪುತ್ತರಿಗೆ ಇಂದು ಚಾಲನೆ ಸಿಕ್ಕಿದೆ. ಕೊಡವರ ಕುಲದೈವ ಇಗ್ಗುತಪ್ಪನ ಸನ್ನಿಧಿಯಲ್ಲಿ ನೆರೆಕಟ್ಟುವ ಮೂಲಕ ಇದಕ್ಕೆ ಚಾಲನೆ ಸಿಗುತ್ತದೆ. ಅಂದ್ರೆ ಪ್ರಕೃತಿಯೊಂದಿಗೆ ಹೊಂದಿಕೊಂಡ ಕೊಡಗಿನ ಜನರ ಆಚಾರದ ಸಂಕೇತವಾಗಿ 5 ಬಗೆಯ ಹಸಿರು ಮರದ ಎಲೆಗಳು, ಉಂಬಳಿ, ಹಲಸು, ಗೇರು, ಮಾವು ಸೇರಿದಂತೆ 5 ಬಗೆಯ ಹಸಿರೆಲೆಗಳನ್ನ ಒಟ್ಟುಗೂಡಿಸಿ ನೆರೆಕಟ್ಟಿ ಗುರುವಿಗೆ-ದೈವಕ್ಕೆ ನಮಿಸಲಾಗುತ್ತೆ. ನಂತರ ಕದಿರು ತೆಗೆಯಲಾಗುತ್ತೆ. ಇದಾದ ನಂತರ ಜಿಲ್ಲೆಯಾದ್ಯಂತ ಇರುವ ಗದ್ದೆಗಳಲ್ಲಿ ಕದಿರು ತೆಗೆಯಲಾಗುತ್ತದೆ. ವಿಶಿಷ್ಟ ಸಂಸ್ಕೃತಿ ಆಚಾರ ವಿಚಾರ.. ಹೀಗೆ ಸಂಭ್ರಮ ಸಡಗರದಿಂದ ಎಲ್ಲರು ಒಂದೆಡೆ ಕಲೆತು ವರ್ಷಪೂರ್ತಿ ಮನೆ ಮಂದಿಗೆಲ್ಲಾ ಅನ್ನನೀಡೋ ಧಾನ್ಯಲಕ್ಷ್ಮಿಯನ್ನ ಪೂಜ್ಯಭಾವನೆಯಿಂದ ಮನೆಗೆ ಬರಮಾಡಿಕೊಳ್ಳಲಾಗುತ್ತೆ.

