ನವದೆಹಲಿ: ಸಕ್ಕರೆ ಉದ್ಯಮಕ್ಕೆ ಸಂಬಂಧಿಸಿದಂತೆ ಕಬ್ಬಿನ ರಿಕವರಿ ದರವನ್ನು ಇಳಿಕೆ ಮಾಡುವುದು, ಕಬ್ಬು ಕಟಾವು ಮತ್ತು ಸಾರಿಗೆ ಹೊರತುಪಡಿಸಿ ಎಫ್‌ಆರ್‌ಪಿ ದರ ನಿಗಧಿ ಮಾಡುವುದು, ಸಕ್ಕರೆಯ ಎಂಎಸ್‌ಪಿ ದರವನ್ನು ಹೆಚ್ಚಿಗೆ ಮಾಡುವುದು ಹಾಗೂ ಕರ್ನಾಟಕಕ್ಕೆ ಎಥೆನಾಲ್ ಮಾರಾಟಕ್ಕೆ ಹೆಚ್ಚಿನ ಅವಕಾಶ ನೀಡಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ (Iranna Kadadi) ಆಗ್ರಹಿಸಿದರು. ಸಂಸತ್ತಿನ ಚಳಿಗಾಲ ಅಧಿವೇಶನದ ಶೂನ್ಯ ವೇಳೆಯಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
ದೇಶದ ಕೃಷಿ ಆಧಾರಿತ ಪ್ರಮುಖ ವಲಯದಲ್ಲಿ ಸಕ್ಕರೆ ಉದ್ಯಮವು ಒಂದು ದೊಡ್ಡ ಉದ್ಯಮವಾಗಿದೆ. ಇದು ಕೋಟ್ಯಂತರ ಜನ ರೈತರು, ಕಾರ್ಮಿಕರು, ವ್ಯಾಪಾರಿಗಳು ಮತ್ತು ಉದ್ಯಮಿಗಳು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ತಮ್ಮ ಜೀವನೋಪಾಯವನ್ನು ಇದರಲ್ಲಿ ಕಂಡುಕೊಂಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ 81 ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ರೈತರ ಕಠಿಣ ಪರಿಶ್ರಮದ ಫಲವಾಗಿ ದೇಶದ ಸಕ್ಕರೆ ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯವು ಮೂರನೇ ಸ್ಥಾನದಲ್ಲಿದೆ. ದೇಶದ ಒಟ್ಟು ಸಕ್ಕರೆ ಉತ್ಪಾದನೆಯಲ್ಲಿ ಶೇಕಡಾ 16% ರಷ್ಟು ಕರ್ನಾಟಕದಲ್ಲಿಯೇ ಉತ್ಪಾದನೆಯಾಗುತ್ತದೆ. ರಾಜ್ಯದಲ್ಲಿ ಸುಮಾರು 7.5 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದ್ದು, ಇದರಿಂದ ಸುಮಾರು 45 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಸಕ್ಕರೆ ಉತ್ಪಾದಿಸಲಾಗುತ್ತದೆ. ಸುಮಾರು 270 ಕೋಟಿ ಲೀಟರ್ ಎಥೆನಾಲ್ ಉತ್ಪಾದಿಸುವುದರ ಜೊತೆಗೆ ಬಹಳ ದೊಡ್ಡ ಪ್ರಮಾಣದಲ್ಲಿ ಬೆಲ್ಲ ಉತ್ಪಾದನೆ ಕೂಡಾ ಮಾಡಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಭಾರತ-ರಷ್ಯಾ ನಡುವೆ ಆರ್ಥಿಕ ಬಲ ಹೆಚ್ಚಿಸಲು `ವಿಷನ್ 2030′; ಮೋದಿ- ಪುಟಿನ್ ಮಧ್ಯೆ ದ್ವಿಪಕ್ಷಿಯ ಒಪ್ಪಂದ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರೈತರ ಕಲ್ಯಾಣಕ್ಕೆ ಬದ್ಧವಾಗಿದೆ. ರೈತರ ಕಠಿಣ ಪರಿಶ್ರಮಕ್ಕೆ ತಕ್ಕ ಆದಾಯ ನೀಡುವ ಹಿನ್ನೆಲೆಯಲ್ಲಿ ಸುಮಾರು 23 ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಲಾಗಿದೆ. ಜೊತೆಗೆ ಕಬ್ಬಿನ ಬೆಳೆಗೂ ಕೂಡ ಪ್ರತಿ ಟನ್‌ಗೆ 3,550 ರೂ. ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್.ಆರ್.ಪಿ) ಘೋಷಿಸಿರುವುದನ್ನು ಸ್ವಾಗತಿಸಿದರು.
ಪ್ರತಿಬಾರಿ ಎಫ್‌ಆರ್‌ಪಿ ದರ ನಿಗದಿ ಮಾಡುವಾಗ ಕಬ್ಬಿನ ರಿಕವರಿ ಪ್ರಮಾಣವನ್ನು 9.5% ರಿಂದ 10.25% ಕ್ಕೆ ಏರಿಕೆ ಮಾಡಲಾಗಿದೆ. ಆದರೆ, ಕರ್ನಾಟಕ ರಾಜ್ಯದ ಕಬ್ಬು ಬೆಳೆಯ ಸರಾಸರಿ ರಿಕವರಿ 9.5% ಆಗಿದೆ. 10.25% ಕ್ಕೆ ಹೆಚ್ಚಿಸಿರುವ ರಿಕವರಿ ಪ್ರಮಾಣವನ್ನು ಮರುಪರೀಶೀಲಿಸಿ 9.5% ಕ್ಕೆ ಇಳಿಕೆ ಮಾಡಲು ವಿನಂತಿಸಿದರು. ಇದನ್ನೂ ಓದಿ: ರಷ್ಯಾ ನಾಗರಿಕರಿಗೆ 30 ದಿನಗಳ ಉಚಿತ E-ಟೂರಿಸ್ಟ್ ವೀಸಾ ನೀಡಲು ಭಾರತ ಅಸ್ತು
ಎಫ್‌ಆರ್‌ಪಿ ದರ ನಿಗದಿ ಮಾಡುವಾಗ ಕಬ್ಬು ಕಟಾವು ಮತ್ತು ಸಾರಿಗೆ ವೆಚ್ಚ ಸೇರಿಸಿ ದರ ನಿಗದಿ ಮಾಡಿರುವುದು ವೈಜ್ಞಾನಿಕವಲ್ಲದ ಕಾರಣ ಕಬ್ಬು ಕಟಾವು ಮತ್ತು ಸಾರಿಗೆ ಹೊರತುಪಡಿಸಿ ಎಫ್‌ಆರ್‌ಪಿ ದರ ನಿಗದಿ ಮಾಡುವುದು ತೀರಾ ಅಗತ್ಯವಾಗಿದೆ ಎಂದು ತಿಳಿಸಿದರು.
2019 ರಿಂದ ಸಕ್ಕರೆಯ ಎಂಎಸ್‌ಪಿ ದರ ಪ್ರತಿ ಕೆಜಿಗೆ ಕೇವಲ 31 ರೂ. ಮಾತ್ರ ಇದ್ದು, ಅದನ್ನು ಹೆಚ್ಚಿಗೆ ಮಾಡಿರುವುದಿಲ್ಲ. ಈ ಕಾರಣದಿಂದ ಸಕ್ಕರೆ ಕಾರ್ಖಾನೆಗಳು ರೈತರ ಕಬ್ಬಿಗೆ ಹೆಚ್ಚಿನ ದರ ನೀಡಲು ಹಿಂದೇಟು ಹಾಕುತ್ತಿವೆ. ಆದರೆ, ಈಗಾಗಲೇ ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ಸುಮಾರು 40 ರೂ.ನಂತೆ ಸಕ್ಕರೆ ಮಾರಾಟವಾಗುವ ಕಾರಣ ಸಕ್ಕರೆಯ ಎಂಎಸ್‌ಪಿ ದರವನ್ನು ಹೆಚ್ಚಿಗೆ ಮಾಡುವುದು ಅನಿವಾರ್ಯವಾಗಿದೆ. ಇದರಿಂದ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಉದ್ಯಮಕ್ಕೆ ಹೆಚ್ಚು ಸಹಾಯವಾಗಲಿದೆ. ಕರ್ನಾಟಕ ರಾಜ್ಯದಲ್ಲಿ 270 ಕೋಟಿ ಲೀಟರ್ ಎಥೆನಾಲ್ ಉತ್ಪಾದನೆ ಆಗುತ್ತಿದ್ದು, ಕರ್ನಾಟಕ ರಾಜ್ಯಕ್ಕೂ ಕೂಡಾ ಎಥೆನಾಲ್ ಮಾರಾಟಕ್ಕೆ ಹೆಚ್ಚಿನ ಅವಕಾಶ ನೀಡಬೇಕು. ಇದರಿಂದಾಗಿ ಕೋಟ್ಯಂತರ ರೈತರು, ಕಾರ್ಮಿಕರು, ಉದ್ಯಮಿಗಳು, ವ್ಯಾಪಾರಸ್ಥರು ಇದರ ಲಾಭವನ್ನು ಪಡೆಯಲಿಕ್ಕೆ ಸಾಧ್ಯವಿದೆ. ಹೀಗಾಗಿ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕಬ್ಬು ಬೆಳೆಗಾರರ ಸಹಾಯಕ್ಕೆ ಬರಬೇಕಾಗಿ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.

