– ಮಂಡ್ಯದಿಂದ ಕೃಷಿ ಮೇಳಕ್ಕೆ ಬರಲು ಪ್ರತಿ 15 ನಿಮಿಷಕ್ಕೊಂದು ಬಸ್ ವ್ಯವಸ್ಥೆ
ಮಂಡ್ಯ: ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ವತಿಯಿಂದ ಮಂಡ್ಯದ ವಿಸಿ ಫಾರಂ ಆವರಣದಲ್ಲಿ ಡಿ.5 ರಿಂದ 7ರ ವರೆಗೆ ನಡೆಯಲಿರುವ ಕೃಷಿ ಮೇಳ 2025ಕ್ಕೆ (Krishi Mela 2025) ಶುಕ್ರವಾರ (ಡಿ.5) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಚಾಲನೆ ನೀಡಲಿದ್ದಾರೆ.
ಹೆಲಿಕಾಪ್ಟರ್ ಮೂಲಕ ಮಂಡ್ಯಕ್ಕೆ (Mandya) ಆಗಮಿಸಲಿರುವ ಸಿದ್ದರಾಮಯ್ಯ ಅವರು, ಮಧ್ಯಾಹ್ನ 12 ಗಂಟೆ ಹೊತ್ತಿಗೆ ಕೃಷಿ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಸಿಎಂಗೆ ಕೃಷಿ ಸಚಿವ ಚಲುವರಾಯಸ್ವಾಮಿ (N ChaluvarayaSwamy) ಹಾಗೂ ಸ್ಥಳೀಯ ಶಾಸಕರು ಸಾಥ್ ನೀಡಲಿದ್ದಾರೆ. ಒಟ್ಟು 350 ಸ್ಟಾಲ್‌ಗಳು ಮೇಳದಲ್ಲಿ ಇರಲಿದ್ದು, ರೈತರಿಗೆ ಉಪಯುಕ್ತ ಮಾಹಿತಿ ನೀಡಲಾಗುತ್ತದೆ. ಹೊಸ ತಳಿಗಳ ಮಾಹಿತಿ, ಕೃಷಿ ಆಧುನಿಕ ತಂತ್ರಜ್ಞಾನಗಳ ಬಗ್ಗೆ ಪ್ರಾತ್ಯಕ್ಷಿಕೆ ಸೇರಿ ಹತ್ತು ಹಲವು ವಿಶೇಷತೆಗಳು ಮೇಳದಲ್ಲಿ ಇರಲಿವೆ. ಬೆಂಗಳೂರು ಜಿಕೆವಿಕೆ ಮೈದಾನದಲ್ಲಿ ನಂತರ ನಡೆಯುತ್ತಿರುವ 2ನೇ ಅತಿದೊಡ್ಡ ಕೃಷಿ ಮೇಳ ಇದಾಗಿದೆ.
45 ತಳಿಯ ಭತ್ತ ಅಭಿವೃದ್ಧಿ
ಮಂಡ್ಯ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯಕ್ಕೆ ತನ್ನದೇ ಆದ ಪ್ರಾತಿನಿಧ್ಯ ಇದೆ. ಈವರೆಗೆ ಮಂಡ್ಯ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದಿಂದ ಭತ್ತದಲ್ಲಿ 45 ತಳಿಗಳು, 3 ಹೈಬ್ರೀಡ್ ಗಳು, 50 ತಾಂತ್ರಿಕತೆಗಳು, ರಾಗಿಯಲ್ಲಿ 37 ತಳಿಗಳು, ಕಬ್ಬಿನಲ್ಲಿ 17 ತಳಿಗಳು ಮತ್ತು 20 ತಂತ್ರಜ್ಞಾನಗಳು, ಮುಸುಕಿನ ಜೋಳದಲ್ಲಿ ನಾಲ್ಕು ತಳಿಗಳು ಮೇವಿನ ಬೆಳೆಗಳಲ್ಲಿ ನಾಲ್ಕು ತಳಿಗಳು, ಸೂರ್ಯಕಾಂತಿ ಸಂಕಿರಣ ತಿಳಿ (ಕೆ.ಬಿ.ಎಸ್.ಹೆಚ್-88) ಚಾಮರಾಜನಗರ ಕಪ್ಪು ಅರಿಶಿಣದ ತಳಿ, ಅರಿಶಿಣದ ತಳಿಯನ್ನು ಅಭಿವೃದ್ಧಿ ಪಡಿಸಲಾಗಿದೆ.
ರೈತರು ಜೈವಿಕ ಗೊಬ್ಬರಕ್ಕೆ ಹೆಚ್ಚಿನ ಒತ್ತು ನೀಡಬೇಕು ಜೈವಿಕ ಗೊಬ್ಬರ ಬಳಸುವುದರಿಂದ ಭೂಮಿಯ ಫಲವತ್ತತೆ ಹೆಚ್ಚುತ್ತದೆ. ರೈತರು ಬಹು ಬೆಳೆ ಕೃಷಿಯನ್ನ ಹೆಚ್ಚು ಮಾಡಬೇಕು. ಬಹುಬೆಳೆ ಕೃಷಿಯಲ್ಲಿ ಶ್ರಮ ಮತ್ತು ಜವಾಬ್ದಾರಿ ಎರಡು ಹೆಚ್ಚಿರುತ್ತದೆ ಜೊತೆಗೆ ಆದಾಯವು ಸಹ ಹೆಚ್ಚು ಲಭಿಸುತ್ತದೆ.
ಕೃಷಿ ಮೇಳ 2025 ರಲ್ಲಿ ನವೀನ ಕೃಷಿ ತಂತ್ರಜ್ಞಾನಗಳ ಪ್ರದರ್ಶನ, ವಸ್ತು ಪ್ರದರ್ಶನ, ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಪದ್ಧತಿ ಪ್ರಾತ್ಯಕ್ಷಿಕೆಗಳು, ಪಶು ಸಂಗೋಪನೆ ತಾಂತ್ರಿಕತೆಗಳು, ಮೀನು ಕೃಷಿ, ಸಸ್ಯಕ್ಷೇತ್ರ ನಿರ್ವಹಣೆಯಲ್ಲಿ ಪ್ರಮುಖವಾಗಿ ದೇಸಿ ಮತ್ತು ವಿದೇಶಿ ತಳಿಗಳ ಬಗ್ಗೆ ಮಾಹಿತಿ ಮತ್ತು ಮಾರಾಟ ಮಾಡಲಾಗುವುದು, ನಮ್ಮ ಜಿಲ್ಲೆಯಲ್ಲಿ ನೀರಿನ ಪ್ರಮಾಣ ಹೆಚ್ಚಿದೆ ಕೃಷಿ ಹೊಂಡ ನಿರ್ಮಾಣ ಮಾಡಿ ಮೀನು ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
ಬಾಹುಬಲಿ ಕಬ್ಬಿನ ತಳಿ ಫೇಮಸ್
ನಮ್ಮ ಕೇಂದ್ರದಲ್ಲಿ ಅಭಿವೃದ್ಧಿ ಪಡಿಸಿದ ತಳಿಗಳನ್ನು ರಾಷ್ಟ್ರಮಟ್ಟದಲ್ಲಿ ಬಿಡುಗಡೆಗೊಳಿಸಲಾಗಿದೆ. ದೇಶದ ಪ್ರಥಮ ಹೈಬ್ರಿಡ್ ಬತ್ತದ ತಳಿಗೆ – (ಕೆ.ಆರ್.ಹೆಚ್-2) ಇಂದಿಗೂ ದೇಶದಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ಇದೆ. ವಿ.ಸಿ ಫಾರಂ ನಿಂದಲೇ ಅಭಿವೃದ್ಧಿ ಪಡಿಸಿದ ಕಬ್ಬಿನ ತಳಿಯಾದ (ವಿ.ಸಿ.ಎಫ್-0517) ಅನ್ನು ಬಾಹುಬಲಿ ಎಂದು ಕರೆಯಲಾಗುತ್ತದೆ. ಸದರಿ ಕಬ್ಬಿನ ತಳಿಯೂ ಹೆಚ್ಚಿನ ಸಕ್ಕರೆ ಅಂಶ ಹೊಂದಿದ್ದು ರೈತರಿಗೆ ಹೆಚ್ಚು ಇಳುವರಿ ನೀಡಿ ಆದಾಯ ಹೆಚ್ಚಿಸುತ್ತಿದೆ. ಕರ್ನಾಟಕದಲ್ಲಿ ಅಲ್ಲದೇ ನೆರೆ ರಾಜ್ಯಗಳಲ್ಲೂ ಸದರಿ ಕಬ್ಬಿನ ತಳಿಯ ಬೇಡಿಕೆ ಹೆಚ್ಚಿದೆ.
ಸಿಎಂ, ಹೆಚ್‌ಡಿಕೆ ಸೇರಿ ಗಣ್ಯರು ಭಾಗಿ
5 ಜಿಲ್ಲೆಗಳ ರೈತರನ್ನು ಒಳಗೊಂಡಂತೆ ಮಂಡ್ಯ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯ ಆಯೋಜಿಸಿರುವ ʻಕೃಷಿ ಮೇಳ 2025ʼ ಅನ್ನು ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದಾರೆ ಹಾಗೂ ಕೃಷಿ ಮೇಳದ ಎರಡನೇ ದಿನದಂದು ಉಕ್ಕು ಮತ್ತು ಬೃಹತ್ ಕೈಗಾರಿಕೆಗಳ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ ಅವರು ಭಾಗವಹಿಸಲಿದ್ದಾರೆ. ಮೂರನೇ ದಿನದಂದು ಜೆಎಸ್‌ಎಸ್ ಮಠದ ಸ್ವಾಮಿಗಳು ಭಾಗವಹಿಸಲಿದ್ದಾರೆ.
ಮೇಳದಲ್ಲಿ ಹೈಟೆಕ್ ತೋಟಗಾರಿಕೆ ಪ್ರಾತ್ಯಕ್ಷಿಕೆ ಸುಧಾರಿತ ಮೇವಿನ ತಳಿಗಳು ಮತ್ತು ತಾಂತ್ರಿಕತೆಗಳು, ಸಿರಿಧಾನ್ಯಗಳ ಮೇಳ, ಫಲಪುಷ್ಪ ಪ್ರದರ್ಶನ, ರಾಸಾಯನಿಕ ಮುಕ್ತ ಬೆಲ್ಲ ತಯಾರಿಕೆ, ದೇಶಿ ರಾಸುಗಳ ಪ್ರದರ್ಶನ, ಔಷಧಿ ಸಸ್ಯಗಳ ಪ್ರಾತ್ಯಕ್ಷಿಕೆ, ಜೈವಿಕ ಇಂಧನದ ತಂತ್ರಜ್ಞಾನಗಳು, ಮಾರುಕಟ್ಟೆಯ ತಂತ್ರಗಳು, ಕೃಷಿ ಅರಣ್ಯ, ಕೃಷಿ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆಗಳ, ಕೃಷಿ ಹವಾಮಾನ ನಿರ್ವಹಣೆ, ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಮತ್ತು ಸಿರಿಧಾನ್ಯಗಳ ಮೌಲ್ಯವರ್ಧನೆಗೆ ಹೆಚ್ಚಿನ ಒತ್ತು ನೀಡಲಾಗುವುದು.
ಕೃಷಿಯಲ್ಲಿ ಬಂಡವಾಳ ಹೂಡಿಕೆ ಟ್ರಿಕ್ಸ್
ಸದರಿ ಮೇಳದಲ್ಲಿ ವಿಸ್ಮಯಕಾರಿ ಕ್ರೀಟ ಪ್ರಪಂಚ, ಜೇನು ಕೃಷಿ, ಹೈಟೆಕ್ ನರ್ಸರಿ ಪ್ರದರ್ಶನ ಮತ್ತು ಮಾರಾಟ ರೈತರು ಬೆಳೆದ ಉತ್ಪನ್ನ ಮತ್ತು ಕೈಗೊಂಡ ಮೌಲ್ಯವರ್ಧನೆಯನ್ನು ನೇರ ಗ್ರಾಹಕರಿಗೆ ಮಾರಾಟ ಮಾಡಲು ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗುತ್ತದೆ. ಕೃಷಿ ಯಾಂತ್ರಿಕೀಕರಣ ಪ್ರದರ್ಶನ ಮತ್ತು ಮಾರಾಟ ಸಹ ನಡೆಯುತ್ತದೆ. ದೇಶಿಯ ಔಷಧಿ ಗಿಡಗಳನ್ನು ರೈತರೊಂದಿಗೆ ಒಡಂಬಡಿಕೆ ಮಾಡಿಕೊಂಡು ಅವುಗಳ ಅಭಿವೃದ್ಧಿ ಪಡಿಸಿ ರೈತರಿಗೆ ಮಾರಾಟಕ್ಕೆ ಸಹಾಯ ಮಾಡಲಾಗುವುದು. ಯುವಕರು ಕೃಷಿಯ ಕಡೆ ಹೆಚ್ಚು ಹೊತ್ತು ನೀಡಬೇಕು. ಕೆಲಸವನ್ನರಸಿ ನೆರೆ ರಾಜ್ಯ, ಜಿಲ್ಲೆಗಳಿಗೆ ಹೋಗುವುದನ್ನು ಬಿಟ್ಟು ಕೃಷಿಯಲ್ಲಿ ಬಂಡವಾಳ ಹೂಡಿ ಆದಾಯ ಗಳಿಸಬಹುದು.
ಸಾಧಕರಿಗೆ ಸನ್ಮಾನ
ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸಮ್ಮಾನ ಮಾಡಲಾಗುವುದು ಐದು ಜಿಲ್ಲೆಗಳಿಂದ ಒಟ್ಟು ಹತ್ತು ಜನ ಜಿಲ್ಲಾಮಟ್ಟದ ಪ್ರಗತಿಪರ ರೈತರಿಗೆ ಪ್ರಶಸ್ತಿ ಮತ್ತು 55 ಯುವ ರೈತರಿಗೆ ತಾಲ್ಲೂಕು ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕೃಷಿ ಮೇಳದಲ್ಲಿ 350 ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಕೃಷಿ ಮೇಳಕ್ಕೆ ಬರೋದು ಹೇಗೆ?
ಇನ್ನೂ ನೆರೆಯ ಜಿಲ್ಲೆಗಳಿಂದ ಕೃಷಿ ಮೇಳಕ್ಕೆ ಬರುವ ಆಸಕ್ತ ರೈತರಿಗೆ ಆಯಾ ಐದು ಜಿಲ್ಲೆಯ ತಾಲೂಕು ಕೇಂದ್ರಗಳಿಂದ ವಾಹನ ವ್ಯವಸ್ಥೆ ಕಲ್ಪಿಸಲು ಮಾತನಾಡಲಾಗಿದೆ. ಮಂಡ್ಯದಿಂದ ವಿಸಿ ಫಾರ್ಮ್ ಗೆ ಬರಲು ಪ್ರತಿ 15 ನಿಮಿಷಕ್ಕೆ ಒಂದು ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಟ್ರಾಫಿಕ್ ನಿರ್ವಹಣೆ ಮಾಡಲು ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.




