ನವದೆಹಲಿ: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ (IndiGo) ಇಂದು ತನ್ನ ಕಾರ್ಯಾಚರಣೆಯಲ್ಲಿ ಭಾರಿ ಅಡೆತಡೆ ಎದುರಿಸಿದೆ. ದೇಶಾದ್ಯಂತ ವಿವಿಧ ವಿಮಾನ ನಿಲ್ದಾಣಗಳಿಂದ ಸುಮಾರು 200 ವಿಮಾನಗಳ (IndiGo Flights) ಹಾರಾಟ ರದ್ದಾಗಿದ್ದು, ತನ್ನ ಗ್ರಾಹಕರಿಗೆ ಇಂಡಿಗೋ ಏರ್‌ಲೈನ್ ಸಂಸ್ಥೆ ಕ್ಷಮೆ ಕೋರಿದೆ.
ಸಿಬ್ಬಂದಿ ಕೊರತೆ, ತಾಂತ್ರಿಕ ದೋಷ ಹಾಗೂ ವಿಮಾನ ನಿಲ್ದಾಣದಲ್ಲಿ (Delhi Airport) ದಟ್ಟಣೆಯಂತಹ ಸಮಸ್ಯೆಗಳಿಂದ ಇಂದು ದೆಹಲಿಯಲ್ಲಿ 38, ಮುಂಬೈನಲ್ಲಿ 33 ವಿಮಾನಗಳು ಸೇರಿದಂತೆ ದೇಶಾದ್ಯಂತ ಸುಮಾರು 200 ವಿಮಾನಗಳ ಹಾರಾಟ ರದ್ದಾಗಿದೆ ಎಂದು ತಿಳಿದುಬಂದಿದೆ.
#PassengerAdvisory pic.twitter.com/5IqSPS3aWT
— Mumbai Airport (@CSMIA_Official) December 3, 2025
ಇಂಡಿಗೋ ವೆಬ್‌ಸೈಟ್ ಮಾಹಿತಿ ಪ್ರಕಾರ, ಸಂಸ್ಥೆಯು 2,200ಕ್ಕೂ ಹೆಚ್ಚು ದೈನಂದಿನ ವಿಮಾನಗಳನ್ನ ನಿರ್ವಹಿಸುತ್ತದೆ. ಮಂಗಳವಾರ ವಿವಿಧ ಕಾರಣಗಳಿಂದ 1,400ಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿತ್ತು. ಬುಧವಾರ ಕೂಡ ಪ್ರಕ್ಷುಬ್ಧತೆ ಮುಂದುವರಿದಿದ್ದು, ದೆಹಲಿ, ಮುಂಬೈ (Mumbai Airport), ಬೆಂಗಳೂರು ಹಾಗೂ ಹೈದರಾಬಾದ್ ವಿಮಾನ ನಿಲ್ದಾಣಗಳು ಮಧ್ಯಾಹ್ನದ ವೇಳೆಗೆ ಸುಮಾರು 200 ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ. ಇದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದ್ದು, ಇಂಡಿಗೋ ಸಂಸ್ಥೆ ಕ್ಷಮೆಯಾಚಿಸಿದೆ.
1 ತಿಂಗಳಲ್ಲಿ 1,000 ಹೆಚ್ಚು ವಿಮಾನಗಳ ಹಾರಾಟ ರದ್ದು
ಇನ್ನೂ ಸತತ ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿರುವ ಇಂಡಿಗೂ ವಿಮಾನಯಾನ ಸಂಸ್ಥೆ ಕಳೆದ ಒಂದೇ ತಿಂಗಳಲ್ಲಿ 1,232 ವಿಮಾನಗಳ ಹಾರಾಟವನ್ನ ರದ್ದುಗೊಳಿಸಿದೆ.
ಸಿಬ್ಬಂದಿ ಕೊರತೆ
ಕಳೆದ ತಿಂಗಳಷ್ಟೇ ಪರಿಷ್ಕೃತ ವಿಮಾನ ಕರ್ತವ್ಯ ಸಮಯ ಮಿತಿ (ಎಫ್‌ಡಿಟಿಎಲ್) ಮಾನದಂಡಗಳನ್ನ ಪರಿಚಯಿಸಲಾಗಿತ್ತು. ಈ ಬೆಳವಣಿಗೆ ಬಳಿಕ ವಿಶೇಷ ಪೈಲಟ್‌ಗಳ ಕೊರತೆ ಎದುರಿಸಲಾಗುತ್ತಿದೆ. ಜೊತೆಗೆ ಹೊಸ ನಿಯಮಗಳು ಹೆಚ್ಚಿನ ವಿಶ್ರಾಂತಿ ಸಮಯ ಕಡ್ಡಾಯಗೊಳಿಸಿರುವ ಕಾರಣ ಸಿಬ್ಬಂದಿ ಕೊರತೆ ಎದುರಿಸಬೇಕಾಗಿದೆ. ಅಲ್ಲದೇ ಕ್ಯಾಬಿನ್ ಸಿಬ್ಬಂದಿ ಲಭ್ಯವಿಲ್ಲದ ಕಾರಣ ಅನೇಕ ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.


