ಬಳ್ಳಾರಿ: ತಂದೆ ತಾಯಿ ಇಲ್ಲದಿದ್ದರೂ ಅನಾಥ ಬಾಲಕನಿಗೆ ಓದಿ ಎನಾದ್ರೂ ಸಾಧಿಸಬೇಕು ಅನ್ನೋ ಛಲ. ಹೀಗಾಗಿಯೇ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇಕಡಾ 90 ಅಂಕ ಪಡೆದಿರುವ ಬಾಲಕನಿಗೆ ಇದೀಗ ಪಿಯುಸಿ ವಿದ್ಯಾಭ್ಯಾಸ ಮಾಡೋಕೆ ದಾನಿಗಳ ಆಸರೆ ಬೇಕಿದೆ. ಅನಿಲ್ ಬಾಳಲ್ಲಿ ಬೆಳಕು ಮೂಡಿಸಲು ದಾನಿಗಳು ಮುಂದಾಗಬೇಕಿದೆ.
ಜಿಲ್ಲೆಯ ಹೊಸಪೇಟೆ ತಾಲೂಕಿನ ಕಂಪ್ಲಿ ಪಟ್ಟಣದ ನಿವಾಸಿಯಾಗಿರೋ ಅನಿಲ್ ಇಂದು ನಮ್ಮ ಬೆಳಕು ಕಾರ್ಯಕ್ರಮ ಬಂದಿದ್ದಾನೆ. 8 ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡ ಅನಿಲ್, ಕಳೆದ ವರ್ಷ ತಾಯಿಯನ್ನು ಕೂಡ ಕಳೆದುಕೊಂಡು ಅನಾಥನಾಗಿದ್ದಾನೆ. ಕೊಪ್ಪಳ ಜಿಲ್ಲೆಯ ಭಾಗ್ಯ ನಗರದಲ್ಲಿ ಕೂಲಿ ಕೆಲಸ ಮಾಡುವ ವೇಳೆ ಅಕಾಲಿಕ ಮರಣದಿಂದ ತಂದೆ ಮಾರೆಣ್ಣ ಮೃತಪಟ್ಟಿದ್ದಾರೆ. ಕಳೆದ ವರ್ಷ ತಾಯಿ ಸರಸ್ವತಿ ಸಹ ಅನಾರೋಗ್ಯದ ಕಾರಣದಿಂದ ಸಾವನ್ನಪ್ಪಿದ ನಂತರ ಈ ಬಾಲಕನಿಗೆ ಹೆತ್ತವರೆ ಇಲ್ಲದಾಗಿದೆ. ಆದ್ರೂ ಸಂಬಂಧಿಕರಿಂದಾಗಿ ಈ ಬಾಲಕನ ಬಾಳಲ್ಲಿ ಇಲ್ಲಿಯವರೆಗೂ ಅಲ್ಪಸ್ವಲ್ಪ ಆಸರೆ ದೊರೆತಿದೆ.
ಇನ್ನು ಮುಂದಿನ ಶಿಕ್ಷಣಕ್ಕಾಗಿ ದಾನಿಗಳ ಸಹಾಯ ಬೇಕಿದೆ. ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅನಿಲ್ ಶೇ.90ರಷ್ಟು ಅಂಕ ಗಳಿಸಿದ್ದಾನೆ. ಮೂರು ವರ್ಷಗಳ ಹಿಂದೆ ಕಂಪ್ಲಿ ಬಳಿಯ ರಾಮಸಾಗರ ಮೊರಾರ್ಜಿ ವಸತಿ ಶಾಲೆಗೆ ಸೇರಿದ ಅನಿಲ್ ಎಸ್‍ಎಸ್‍ಎಲ್‍ಸಿಯಲ್ಲಿ ಉತ್ತಮವಾಗಿ ಓದಿ ಅತ್ಯುತ್ತಮ ಅಂಕಗಳನ್ನು ಪಡೆಯುವಲ್ಲಿ ಯಶ್ವಸಿಯಾಗಿದ್ದಾನೆ. ವಿಜ್ಞಾನ ವಿಷಯದಲ್ಲಿ 100ಕ್ಕೆ 98 ಅಂಕಗಳನ್ನು ಪಡೆಯುವ ಮೂಲಕ ಒಟ್ಟು 625 ಅಂಕಗಳಿಗೆ 561 ಅಂಕಗಳನ್ನು ಪಡೆದಿರುವ ಈ ಬಾಲಕನಿಗೆ ಮುಂದೆ ಓದಿ ವಿಜ್ಞಾನಿಯಾಗಬೇಕು ಅನ್ನೋ ಆಸೆಯಿದೆ.
ಹೆತ್ತವರನ್ನು ಕಳೆದುಕೊಂಡ ನೋವಿದ್ದರೂ, ನೋವಿನಲ್ಲೆ ಓದಿಕೊಂಡು ಉತ್ತಮ ಅಂಕಗಳನ್ನು ಪಡೆದಿರುವ ಅನಿಲ್ ಮುಂದಿನ ವಿದ್ಯಾಬ್ಯಾಸಕ್ಕೆ ಯಾರಾದ್ರೂ ಸಹಾಯ ಮಾಡಿದ್ರೆ ಈ ಬಾಲಕನ ಬಾಳಲ್ಲಿ ಬೆಳಕು ಮೂಡಲಿದೆ. ಆ ನಿಟ್ಟಿನಲ್ಲಿ ವಿದ್ಯಾದಾನಕ್ಕೆ ಯಾರಾದ್ರೂ ಸಹಾಯ ಮಾಡಲಿ ಅನ್ನೋದೆ ನಮ್ಮ ಆಶಯವಾಗಿದೆ.