-ಎಲ್ಲವೂ ಸರಿಯಿದ್ದರೆ ಆಡಳಿತದಲ್ಲಿ ತೋರಿಸಿ, ಅದು ಬಿಟ್ಟು ಬ್ರೇಕ್‌ಫಾಸ್ಟ್ ಮೀಟಿಂಗ್ ಯಾಕೆ?
ಬೆಂಗಳೂರು: ಬ್ರೇಕ್‌ಫಾಸ್ಟ್‌ಗೆ ಇಡ್ಲಿ, ನಾಟಿ ಕೋಳಿ ಸಾರು, ಡಿನ್ನರ್‌ಗೆ ಬೆಳ್ಳುಳ್ಳಿ ಕಬಾಬ್ ಇರುತ್ತೇನೋ. ಆದರೆ ರಾಜ್ಯದಲ್ಲಿ ಉಪಹಾರ ಇಲಾಖೆ ಮಾತ್ರ ಸಕ್ರಿಯವಾಗಿದೆ ಅಂತ ಸಿಎಂ-ಡಿಸಿಎಂ ಬ್ರೇಕ್‌ಫಾಸ್ಟ್ ಮೀಟಿಂಗ್‌ಗೆ ಜೆಡಿಎಸ್ (JDS) ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಲೇವಡಿ ಮಾಡಿದರು.
ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಇಡ್ಲಿ, ಉಪ್ಪಿಟ್ಟು, ನಾಟಿ ಕೋಳಿ ಸಾರು ಬ್ರೇಕ್‌ಫಾಸ್ಟ್ ಆಯ್ತು. ಡಿನ್ನರ್‌ಗೆ ಬೆಳ್ಳುಳ್ಳಿ ಕಬಾಬ್ ಬರಬಹುದೇನೋ. ಆದರೆ ಉಪಹಾರ ಇಲಾಖೆ ಮಾತ್ರ ರಾಜ್ಯದಲ್ಲಿ ಸಕ್ರಿಯವಾಗಿದೆ ಎಂದು ಕಿಡಿಕಾರಿದರು.ಇದನ್ನೂ ಓದಿ: ಬ್ರೇಕ್‌ಫಾಸ್ಟ್ ಮೀಟಿಂಗ್ ಬೀಗತನ ಮಾಡಿದಂತೆ: ಕೆಎನ್ ರಾಜಣ್ಣ ವ್ಯಂಗ್ಯ
ರಾಜ್ಯದಲ್ಲಿ ಸರ್ಕಾರಿ ಶಾಲೆ ಮುಚ್ಚುತ್ತಿವೆ. ಶಿಕ್ಷಕರ ನೇಮಕಾತಿ ಆಗ್ತಿಲ್ಲ. ಆರೋಗ್ಯ ಕ್ಷೇತ್ರಕ್ಕಾಗಿ ಸರಿಯಾಗಿ ಕೆಲಸ ಮಾಡ್ತಿಲ್ಲ. ಸರ್ಕಾರ ಬಂದು 2.5 ವರ್ಷ ಆಗಿದೆ. ಫುಲ್ ಮೆಜಾರಿಟಿ ಪಡೆದಿದ್ದಾರೆ. ಗ್ಯಾರಂಟಿ (Congress Guarantee) ಕೊಡ್ತೀವಿ ಅಂದರು. ಆದರೆ ಗ್ಯಾರಂಟಿಗಳು ಸಮರ್ಪಕವಾಗಿ ಪ್ರತಿ ತಿಂಗಳು ಕೊಡ್ತಿಲ್ಲ. ಚುನಾವಣೆ ಹತ್ತಿರ ಬಂದರೆ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡ್ತಾರೆ. ಸರ್ಕಾರದ ಹಣ ಚುನಾವಣೆಗೆ ಬಳಸ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬೆಂಗಳೂರು ಸಮಸ್ಯೆ ಏನು ಅಂತ ನೋಡಿದ್ದೇವೆ. ಈ ಸರ್ಕಾರಕ್ಕೆ 15 ಸಾವಿರ ಗುಂಡಿ ಮುಚ್ಚುವ ಯೋಗ್ಯತೆ ಇಲ್ಲ. 500-600 ಜನ ಗುಂಡಿಗೆ ಬಿದ್ದು ಸತ್ತಿದ್ದಾರೆ. ಇದರ ಹೊಣೆ ಸರ್ಕಾರವೇ ತೆಗೆದುಕೊಳ್ಳಬೇಕು. ಬೆಂಗಳೂರು ಹೆಚ್ಚಿನ ಆದಾಯ ಕೊಡುತ್ತದೆ. ಕಂಪನಿ ಮಾಲೀಕರು ಸಮಸ್ಯೆ ಬಗ್ಗೆ ಮಾತಾಡುತ್ತಾರೆ. ಬೆಂಗಳೂರಿನಲ್ಲಿ ರಸ್ತೆ ಯಾವುದು? ಪುಟ್‌ಪಾಥ್ ಯಾವುದು ಅಂತ ಗೊತ್ತಿಲ್ಲ. ಇದು ಸರ್ಕಾರದ ಪರಿಸ್ಥಿತಿ ಎಂದು ಆಕ್ರೋಶ ಹೊರಹಾಕಿದರು.
ನಾನು, ಸಿಎಂ ಬ್ರದರ್ಸ್ ಇದ್ದ ಹಾಗೆ ಎಂಬ ಸಿಎಂ-ಡಿಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾರು ಯಾವಾಗ ಬ್ರದರ್ ಆಗುತ್ತಾರೋ, ಯಾವಾಗ ಬ್ರದರ್ ಶಿಪ್ ಕ್ಯಾನ್ಸಲ್ ಆಗುತ್ತೋ ಗೊತ್ತಿಲ್ಲ. ಅವರ ಪಕ್ಷದ ವಿಚಾರ ನಮ್ಮನ್ನ ಕೇಳಬೇಡಿ. ಕಾಂಗ್ರೆಸ್‌ನಲ್ಲಿ ಯಾರಿಗೆ ಸಹಿ ಹಾಕಬೇಕು ಅಂತ ಒಳಗೆ ನಡೆಯುತ್ತಿದೆ. ಸಹಿ ಹಾಕೋಕೆ ಎ,ಬಿ,ಸಿ ಟೀಂ ಅಂತ ಆಗಿದೆ. ಹೈಕಮಾಂಡ್ (Congress High Command)ಇದ್ದರೆ ಇದನ್ನ ಸರಿ ಮಾಡಲಿ ಎಂದರು.
ಇವರು ಬ್ರೇಕ್‌ಫಾಸ್ಟ್, ಡಿನ್ನರ್ ಮೀಟಿಂಗ್ ಮಾಡ್ತಾ ಹೋದರೆ ಜನರಿಗೆ ಯಾವ ಸಂದೇಶ ಕೊಡ್ತೀರಾ? ಎಲ್ಲವೂ ಸರಿ ಇದ್ದರೆ ಆಡಳಿತದಲ್ಲಿ ತೋರಿಸಿ. ಅದು ಬಿಟ್ಟು ಈ ಬ್ರೇಕ್‌ಫಾಸ್ಟ್ ಮೀಟಿಂಗ್, ಡಿನ್ನರ್ ಮೀಟಿಂಗ್ ಯಾಕೆ ಮಾಡಬೇಕು ಎಂದು ಆಗ್ರಹಿಸಿದರು.ಇದನ್ನೂ ಓದಿ: ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಎಲ್ಲವೂ ತಿಳಿಯಾಗಿದೆ: ಪರಮೇಶ್ವರ್

