– 300 ವರ್ಷಗಳಿಂದ ಅಂತ್ಯಕ್ರಿಯೆ ನಡೆಯುತ್ತಿದ್ದ ಜಮೀನು ಈಗ ಶಾಶ್ವತ ರುದ್ರಭೂಮಿ
ಧಾರವಾಡ: ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ರುದ್ರಭೂಮಿ (Cemetery) ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದೆ. ಕಳೆದೊಂದು ವಾರದಿಂದ ನಗರದಲ್ಲಿ ಸಾಕಷ್ಟು ವಿವಾದ ಸೃಷ್ಟಿಸಿ, ಕೊನೆಗೆ ಭೂಮಿಯ ಮಾಲಿಕ ಹಾಗೂ ಸ್ಥಳೀಯರ ನಡುವಿನ ತಿಕ್ಕಾಟಕ್ಕೂ ಕಾರಣವಾಗಿತ್ತು. ಅಲ್ಲದೇ ಜಿಲ್ಲಾಡಳಿತಕ್ಕೂ ತಲೆನೋವಾಗಿ ಪರಿಣಮಿಸಿತ್ತು. ಆದರೀಗ ಭೂಮಿಯ ಮಾಲೀಕನ ತ್ಯಾಗದಿಂದ ಜನ ನಿಟ್ಟುಸಿರು ಬಿಟ್ಟಿದ್ದಾರೆ.
ಹೌದು. ಧಾರವಾಡ ನಗರದ (Dharwad City) ಕಮಲಾಪುರ ಬಡಾವಣೆಯಲ್ಲಿ ಬಳಿ ಇರೋ 78/2 ಸರ್ವೆ ನಂಬರ್‌ನ ಈ ಭೂಮಿ 4 ಎಕ್ರೆ 15 ಗುಂಟೆ ಇದೆ. ಈ ಜಮೀನಿನಲ್ಲಿಯೇ ಕಳೆದ 300 ವರ್ಷಗಳಿಂದ ಕಮಲಾಪುರ, ಮಾಳಾಪುರ, ನಾರಾಯಣಪೂರ, ಪತ್ರೇಶ್ವರ ನಗರ ಮತ್ತು ಮರಾಠಾ ಗಲ್ಲಿ ಜನರು ಮೃತರ ಅಂತ್ಯಕ್ರಿಯೆ ನೆರವೇರಿಸುತ್ತಾ ಬಂದಿದ್ದರು. ಇದನ್ನೂ ಓದಿ: ನ್ಯೂ ಇಯರ್‌ಗೆ ಕಿಕ್ಕೇರಿಸಲು ಸಜ್ಜಾಗಿದ್ದವರಿಗೆ ಸಿಸಿಬಿ ಶಾಕ್ – 28 ಕೋಟಿ ಮೌಲ್ಯದ ಡ್ರಗ್ಸ್ ಸೀಜ್
ಈ ಜಮೀನು ಮಲ್ಲಿಕಾರ್ಜುನಯ್ಯ ಹಿರೇಮಠ ರಪಾಟಿ ಎನ್ನುವವರ ಹೆಸರಿನಲ್ಲಿತ್ತು. ಆದ್ರೆ ನೂರಾರು ವರ್ಷಗಳಿಂದ ಅಂತ್ಯ ಸಂಸ್ಕಾರ ನಡೆಸಿಕೊಂಡು ಬರುತ್ತಿದ್ದ ಕಾರಣ, ಸ್ಥಳೀಯರು ಆ ಭೂಮಿಯನ್ನ ರುದ್ರಭೂಮಿಯಾಗಿಯೇ ಮೀಸಲಿಡುವಂತೆ ಆಗ್ರಹಿಸುತ್ತಾ ಬಂದಿದ್ದರು. ಆದ್ರೆ ಭೂಮಾಲೀಕ ಈ ಜಾಗದಲ್ಲಿ ಲೇಔಟ್ ನಿರ್ಮಿಸಲು ಚಿಂತನೆ ನಡೆಸಿದ್ದರು. ಇದಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿತ್ತು, ಅಲ್ಲಿ ಲೇಔಟ್ ಆದ್ರೆ ಅಂತ್ಯಸಂಸ್ಕಾರಕ್ಕೆ ಸ್ಥಳವೇ ಇಲ್ಲದಂತಾಗುತ್ತದೆ ಎಂದು ಹೇಳಿದ್ದರು. ಈ ಕಾರಣಕ್ಕೆ ದೊಡ್ಡ ಹೋರಾಟವನ್ನೂ ಮಾಡಿದ್ದರು. ಆ ಭೂಮಿಗೆ ಒಂದು ಫಲಕ ಹಾಕಿ, ಅದರಲ್ಲಿ ಯಾರೂ ಇದನ್ನು ಖರೀದಿಸಬೇಡಿ ಅಂತಾ ಎಚ್ಚರಿಕೆ ಕೊಟ್ಟಿದ್ದರು. ಆದರೀಗ ಖುದ್ದು ಮಾಲೀಕರೇ ಈ ಭೂಮಿಯನ್ನ ರುದ್ರಭೂಮಿಗೆ ದಾನ ಮಾಡಿದ್ದಾರೆ.
ಸ್ಥಳೀಯರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಹಿರೇಮಠ ಅವರು 1 ಎಕರೆ 15 ಗುಂಟೆ ಜಾಗವನ್ನ ಸ್ಮಶಾನಕ್ಕಾಗಿ ದಾನ ನೀಡಲು ನಿರ್ಧರಿಸಿದರು. ಇದರಿಂದಾಗಿ ಕಳೆದ ಹಲವಾರು ದಿನಗಳಿಂದ ಉಂಟಾಗಿದ್ದ ಕಗ್ಗಂಟು ಬಿಡಿಸಿದಂತಾಗಿದೆ. ಇದನ್ನೂ ಓದಿ: ಬ್ರೇಕ್‌ಫಾಸ್ಟ್ ಮೀಟಿಂಗ್ ಬೀಗತನ ಮಾಡಿದಂತೆ: ಕೆಎನ್ ರಾಜಣ್ಣ ವ್ಯಂಗ್ಯ
ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದಲ್ಲಿನ ಭೂಮಿಯ ದರ ಗಗನಕ್ಕೇರಿದೆ. ಎಕರೆಗೆ ಕನಿಷ್ಟ 3 ಕೋಟಿ ರೂಪಾಯಿಗೆ ಇಲ್ಲಿನ ಜಮೀನು ಮಾರಾಟವಾಗುತ್ತಿವೆ. ಇದೇ ಕಾರಣಕ್ಕೆ ಈ ಜಮೀನನ್ನು ಮಾರಾಟ ಮಾಡಲು ರಪಾಟಿ ಪ್ರಯತ್ನ ಮಾಡಿದ್ದರು. ಈ ವಿಷಯ ಗೊತ್ತಾಗಿ ಸ್ಥಳೀಯರು ಅದರಲ್ಲಿನ ಒಂದು ಭಾಗವನ್ನ ಬಿಟ್ಟುಕೊಡುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ಅದಕ್ಕೆ ಮಾಲಿಕರು ಒಪ್ಪಿರಲಿಲ್ಲ. ಆದರೆ ಈಗ ಜನರ ಒತ್ತಡಕ್ಕೆ ಮಾಲಿಕರು ಮಣಿದಿದ್ದಾರೆ.
ಮಹಾನಗರ ಪಾಲಿಕೆಗೆ ಭೂಮಿಯನ್ನ ದಾನವಾಗಿ ನೀಡಿ, ಅದನ್ನು ರುದ್ರಭೂಮಿಯನ್ನಾಗಿ ಬಳಸಲು ಅನುವು ಮಾಡಿಕೊಟ್ಟಿದ್ದಾರೆ. ಇದೇ ವೇಳೆ ಧಾರವಾಡ ತಹಶೀಲ್ದಾರ್ ಅವರಿಗೆ ದಾನದ ಮುಂದಿನ ಪ್ರಕ್ರಿಯೆ ಆರಂಭಿಸುವಂತೆಯೂ ಅವರು ಮನವಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದಿನಿಂದಲೇ ಆ ಪ್ರಕ್ರಿಯೆ ಆರಂಭವಾಗಲಿದೆ. ಸಮಸ್ಯೆ ಪರಿಹಾರವಾಗಿದ್ದಕ್ಕೆ ಭೂ ಮಾಲೀಕರಿಗೆ ತಹಸೀಲ್ದಾರ್ ಹಾಗೂ ಊರಿನ ಜನ ಧನ್ಯವಾದ ಸಲ್ಲಿಸಿದ್ದಾರೆ. ಇದನ್ನೂ ಓದಿ: ಸಂಚಾರ್ ಸಾಥಿ ಆ್ಯಪ್ ವಿವಾದದ ನಡುವೆಯೇ ಹತ್ತುಪಟ್ಟು ಹೆಚ್ಚಾಯ್ತು ಡೌನ್‌ಲೋಡ್


