ಶ್ರೀ ಮಾಯಕಾರ ಪ್ರೊಡಕ್ಷನ್ (Sri Mayakara Productions) ಸಂಸ್ಥೆಯಿಂದ ನಿರ್ಮಿಸಲಾದ ಮಹಾಗುರು ಮಹಾದೇವ ಹಾಡು ಬಿಡುಗಡೆ ಕಾರ್ಯಕ್ರಮ ನಿನ್ನೆ ಬೆಂಗಳೂರಿನ ಎಂಎಂಬಿ ಲೆಗಸಿಯಲ್ಲಿ ನಡೆಯಿತು. ಖ್ಯಾತ ಜ್ಯೋತಿಷಿ ವಿದ್ವಾನ್ ಮೂಗೂರು ಮಧುದೀಕ್ಷಿತ್ ಗುರೂಜಿ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ (Arjun Janya), ಖ್ಯಾತ ಚಿತ್ರ ಸಾಹಿತಿ ವಿ. ನಾಗೇಂದ್ರ ಪ್ರಸಾದ್ (Dr.Nagendra Prasad) ಸೇರಿದಂತೆ ಹಾಡಿನಲ್ಲಿ ನಟಿಸಿದ ಇಡೀ ಕಲಾಬಳಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮಹಾಗುರು ಮಹಾದೇವ (Mahaguru Mahadeva) ಹಾಡು ಬಿಡುಗಡೆ ಬಳಿಕ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮಾತನಾಡಿ, ಮೂಗೂರು ಮಧು ದೀಕ್ಷಿತ್ ಗುರುಗಳು ನನಗೆ ದೈವ ಸ್ವರೂಪ. ಅವರು ನನಗೆ ಗುರು ಸ್ಥಾನ ಕೊಟ್ಟಿದ್ದಾರೆ. ಅವರು ಈ ರೀತಿ ಐಡಿಯಾ ಇದೆ ಎಂದಾಗ ಮಾಡೋಣಾ ಎಂದು ಹಾಡು ಮಾಡಿದ್ದೇವೆ. ಈ ಹಾಡಿಗಾಗಿ ಎರಡು ವರ್ಷಗಳ ಕಾಲ ಕಾಯಿಸಿದ್ದೇನೆ. ಎಲ್ಲಾ ರೀತಿ ಜಾನರ್ ಗಳಲ್ಲಿ ನಿಸ್ಸೀಮರಾದ ನಾಗೇಂದ್ರ ಪ್ರಸಾದ್ ಸರ್ ಸಾಹಿತ್ಯ ಒದಗಿಸಿದರು. ಈ ಹಾಡಿಗೆ ದೊಡ್ಡ ಶಕ್ತಿಯಾಗಿ ನಿಂತ ಮತ್ತೋರ್ವರು ರಾಜೇಶ್ ಕೃಷ್ಣನ್ (Rajesh Krishnan) ಅಣ್ಣ. ಅವರು ಕನ್ನಡದ ಬಾಲಸುಬ್ರಹ್ಮಣ್ಯಂ ಸರ್. ಅವರು ಹಾಡು ಹಾಡಲು ಒಂದು ರೂಪಾಯಿ ದುಡ್ಡು ತೆಗೆದುಕೊಂಡಿಲ್ಲ. ನಾನು ರೆಕಾರ್ಡ್ ಆದ್ಮೇಲೆ 150 ಬಾರಿ ಕೇಳಿದೆ. ಪ್ರತಿ ಬಾರಿ ರೋಮಾಂಚನವಾಗುತ್ತಿದೆ ಎಂದು ಹೇಳಿದರು.
ವಿದ್ವಾನ್ ಮೂಗೂರು ಮಧು ದೀಕ್ಷಿತ್ ಗುರೂಜಿ ಮಾತನಾಡಿ, ಈ ಹಾಡು ಮಾಡಲು ಮುಖ್ಯ ಕಾರಣ ಅರ್ಜುನ್ ಜನ್ಯ ಅವರು. ಅವರು ಸಂಗೀತ ನಿರ್ದೇಶಕರು ಮಾತ್ರವಲ್ಲದೇ ಒಳ್ಳೆ ಆಧ್ಯಾತ್ಮ ಗುರುಗಳು. ಈ ಹಾಡು ಅದ್ಭುತವಾಗಿ ಬರಲು ಕಾರಣ ಅರ್ಜುನ್ ಜನ್ಯ. ನಾಗೇಂದ್ರ ಪ್ರಸಾದ್ ಅವರು ಚೆನ್ನಾಗಿ ಸಾಹಿತ್ಯ ಬರೆದು ಕೊಟ್ಟರು. ಅರ್ಜುನ್ ಸರ್ ರಾಜೇಶ್ ಸರ್ ಬಳಿ ಹಾಡು ಹಾಡಿಸಿ ಕೊಟ್ಟಿದ್ದಾರೆ. ನನಗೆ ನಟನೆ ಬಗ್ಗೆ ಜ್ಞಾನ ಇಲ್ಲ. ಈ ಕಲಾವಿದರ ಜೊತೆ ನಿಂತಾಗ ನಾನು ನಟಿಸಿದೆ. ಮಾಯಕಾರ ಎಂಬ ನಮ್ಮ ಪ್ರೊಡಕ್ಷನ್ ನಡಿ ನಿರ್ಮಿಸಿದ್ದೇವೆ. ಅರ್ಜುನ್ ಜನ್ಯ ಹಾಗೂ ನಾಗೇಂದ್ರ ಪ್ರಸಾದ್ ಅವರು ನನ್ನ ಸಹೋದರರು. ಜನ್ಯ ಅವರ 45 ಚಿತ್ರ ಯಶಸ್ವಿಯಾಗಲು ಎಂದು ಶುಭ ಹಾರೈಸಿದರು. ಹಂಸಪ್ರಿಯ ಪ್ರಿಸೆಂಟ್ಸ್ , ನಿರ್ಮಾಪಕರು ಶ್ರೀಮತಿ ರೂಪಶ್ರೀ ಮಧುದೀಕ್ಷಿತ್ ಮಹಾಗುರು ಮಹಾದೇವ ಕುರಿತಾದ ಈ ಹಾಡಿಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಒದಗಿಸಿದ್ದಾರೆ. ಕವಿರತ್ನ ನಾಗೇಂದ್ರ ಪ್ರಸಾದ್ ಸಾಹಿತ್ಯ ಹಾಗೂ ರಾಜೇಶ್ ಕೃಷ್ಣನ್ ಧ್ವನಿಯಾಗಿದ್ದಾರೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿತ್ರೀಕರಣ ಮಾಡಲಾದ ಮಹಾಗುರು ಮಹಾದೇವ ಭಕ್ತಿಗೀತೆಗೆ ಅಭಿಷೇಕ್ ಮಠದ್ ನಿರ್ದೇಶನದ ಜವಾಬ್ದಾರಿ ನಿಭಾಯಿಸಿದ್ದಾರೆ. ಉಜ್ವಲ್ ಚಂದ್ರ ಸಂಕಲನ, ಪುನೀತ್ ಜಿ ಗೌಡ ಕ್ಯಾಮೆರಾ ಹಿಡಿದಿದ್ದಾರೆ. ಈ ಭಕ್ತಿ ಗೀತೆಯಲ್ಲಿ ವಿದ್ವಾನ್ ಮೂಗೂರು ಮಧುದೀಕ್ಷಿತ್ ಗುರೂಜಿ ಜೊತೆಗೆ ಬಾಲಕಲಾವಿದರಾದ ಪೂರ್ವಜ್ ಎಂ, ಯಶ್ವಿಕಾ ಶೆಟ್ಟಿ ಅಭಿನಯಿಸಿದ್ದಾರೆ. ಅಲ್ಲದೇ ಮನು ಯು ಬಿ, ವಿಜೆ ಶರತ್, ಶಿವು,ಚಿಲ್ಲರ್ ಮಂಜು, ಮಾನಸ, ರಘು, ಹರ್ಷ ನಟಿಸಿದ್ದಾರೆ.


