– ಇಬ್ಬರು ವಿದೇಶಿ ಪ್ರಜೆಗಳ ಬಂಧನ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಹೊಸ ವರ್ಷಾಚರಣೆಗೆ (New Year Celebration) ಡ್ರಗ್ಸ್ ಪೂರೈಸಲು ಸಿದ್ಧವಾಗಿದ್ದ ಜಾಲಕ್ಕೆ ಸಿಸಿಬಿ (CCB) ಭರ್ಜರಿ ಶಾಕ್ ನೀಡಿದೆ. ಬೆಂಗಳೂರಿನಲ್ಲಿ ಬರೋಬ್ಬರಿ 28 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು, ಇಬ್ಬರು ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ. ಈ ಸಂಬಂಧ ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಸಿಸಿಬಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ಮೊದಲ ಪ್ರಕರಣದಲ್ಲಿ, 20 ಕೋಟಿ ರೂ. ಮೌಲ್ಯದ 10 ಕೆಜಿ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಟೀ ಪುಡಿ ಪ್ಯಾಕೆಟ್‌ಗಳಲ್ಲಿ ಅಡಗಿಸಿಟ್ಟು ಈ ಡ್ರಗ್ಸ್ ಮಾರಾಟಕ್ಕೆ ಯತ್ನಿಸುತ್ತಿದ್ದರು. ಎರಡನೇ ಪ್ರಕರಣದಲ್ಲಿ, ವಿದೇಶದಿಂದ ಬಂದಿದ್ದ 8 ಕೋಟಿ ರೂ. ಮೌಲ್ಯದ 8 ಕೆಜಿ ಹೈಡ್ರೋ ಗಾಂಜಾವನ್ನು ಚಾಮರಾಜಪೇಟೆಯ ಅಂಚೆ ಕಚೇರಿಯಲ್ಲಿ ಪರಿಶೀಲನೆ ನಡೆಸುವ ವೇಳೆ ಪತ್ತೆ ಹಚ್ಚಿ ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ, 28 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಮದುವೆಯಾದ ಮರುದಿನವೇ ಹೃದಯಾಘಾತ – ನವವಿವಾಹಿತ ಸಾವು
ಈ ಡ್ರಗ್ಸ್ ಜಾಲದ ಸಂಬಂಧ ತಾಂಜೇನಿಯಾ ಮೂಲದ ನ್ಯಾನ್ಸಿ ಮತ್ತು ನೈಜೀರಿಯಾ ಮೂಲದ ಎಮುನಲ್ ಅರೆಂಜಿ ಇಡಿಕೋ ಎಂಬ ಇಬ್ಬರು ವಿದೇಶಿ ಪ್ರಜೆಗಳನ್ನು ಸಿಸಿಬಿ ಬಂಧಿಸಿದೆ. ಬಂಧಿತ ನ್ಯಾನ್ಸಿ ಮೂರು ವರ್ಷಗಳ ಹಿಂದೆ ಪ್ರವಾಸಿ ವೀಸಾದಡಿ ಭಾರತಕ್ಕೆ ಬಂದಿದ್ದಳು. ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದ ಈಕೆ ಡ್ರಗ್ ಪೆಡ್ಲಿಂಗ್‌ನಲ್ಲಿ ಸಕ್ರಿಯಳಾಗಿದ್ದಳು. ಈಕೆಗೆ ಸಹಕರಿಸುತ್ತಿದ್ದ ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ. ಇನ್ನೊಬ್ಬ ಆರೋಪಿ ಎಮುನಲ್ ಅರೆಂಜಿ ಇಡಿಕೋ ನಾಲ್ಕು ವರ್ಷಗಳ ಹಿಂದೆ ವ್ಯಾಪಾರ ವೀಸಾದಡಿ ಭಾರತಕ್ಕೆ ಬಂದಿದ್ದ. ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ ಈತ ದೆಹಲಿಯಿಂದ ಡ್ರಗ್ಸ್ ತರಿಸಿ ತನ್ನ ಮನೆಯಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದ. ಇದನ್ನೂ ಓದಿ: ಹಕ್ಕುಚ್ಯುತಿ ನಿರ್ಣಯದ ಪ್ರಶ್ನೆಗೆ ʻಬೌ ಬೌʼ ಬೊಗಳಿ ಉತ್ತರಿಸಿದ ರೇಣುಕಾ ಚೌಧರಿ
ಬಂಧಿತ ಆರೋಪಿಗಳು ಸ್ಥಳೀಯರು, ವಿದ್ಯಾರ್ಥಿಗಳು ಮತ್ತು ಐಟಿ-ಬಿಟಿ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಹೆಚ್ಚಿನ ಬೆಲೆಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ವಿಶೇಷವಾಗಿ ಹೊಸ ವರ್ಷದ ಸಂದರ್ಭದಲ್ಲಿ ಹೆಚ್ಚಿನ ಲಾಭಗಳಿಸುವ ಉದ್ದೇಶದಿಂದ ಡ್ರಗ್ಸ್ ಸಂಗ್ರಹಿಸಿ ಮಾರಾಟ ಮಾಡಲು ಯೋಜಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಸಿಸಿಬಿ, ಮಾದಕ ದ್ರವ್ಯ ನಿಗ್ರಹದಳದ ಪೊಲೀಸರು, ಕೋಟಿಗಟ್ಟಲೆ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಬ್ರೇಕ್‌ಫಾಸ್ಟ್ ಮೀಟಿಂಗ್ ಬೀಗತನ ಮಾಡಿದಂತೆ: ಕೆಎನ್ ರಾಜಣ್ಣ ವ್ಯಂಗ್ಯ

