– ಅಸಿಮ್ ಮುನೀರ್ ವಿರುದ್ಧ ಸಹೋದರಿ ಜೊತೆ ಇಮ್ರಾನ್ ಖಾನ್ ಗಂಭೀರ ಆರೋಪ
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೀವಂತವಾಗಿದ್ದಾರೆ. ಆದರೆ ಅವರನ್ನು ಮಾನಸಿಕವಾಗಿ ಹಿಂಸಿಸಲಾಗುತ್ತಿದೆ ಎಂದು ಅವರ ಸಹೋದರಿ ಡಾ. ಉಜ್ಮಾ ಖಾನಮ್ ತಿಳಿಸಿದ್ದಾರೆ.
ಮಂಗಳವಾರ ಸಂಜೆ ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ತಮ್ಮ ಸಹೋದರನೊಂದಿಗೆ 20 ನಿಮಿಷಗಳ ಮಾತುಕತೆಯ ನಂತರ ಖಾನಮ್ ಈ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಖಾನಮ್, ‘ಅಲ್ಹಮ್ದುಲಿಲ್ಲಾಹ್, ಅವರು (ಇಮ್ರಾನ್ ಖಾನ್) ಚೆನ್ನಾಗಿದ್ದಾರೆ. ಆದರೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆಂದು ಬೇಸರದಿಂದ ನುಡಿದಿದ್ದಾರೆ. ಅವರು ಇಡೀ ದಿನ ತಮ್ಮ ಸೆಲ್‌ನಲ್ಲಿ ಬಂಧಿಯಾಗಿರುತ್ತಾರೆ. ಅಲ್ಪಾವಧಿಗೆ ಮಾತ್ರ ಹೊರಗೆ ಓಡಾಡಬಹುದು. ಅವರು ಯಾರೊಂದಿಗೂ ಸಂವಹನ ನಡೆಸಲು ಸಾಧ್ಯವಿಲ್ಲ ಎಂದು ತಮ್ಮ ಸಹೋದರ ಅನುಭವಿಸುತ್ತಿರುವ ಚಿತ್ರಹಿಂಸೆ ಕುರಿತು ಮಾತನಾಡಿದ್ದಾರೆ.
ಪಾಕಿಸ್ತಾನದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿರುವ ಜನರಲ್ ಅಸಿಮ್ ಮುನೀರ್ ವಿರುದ್ಧವೂ ಇಮ್ರಾನ್ ಖಾನ್ ಸಹೋದರಿ ಮುಂದೆ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆರೋಗ್ಯದ ಬಗ್ಗೆ ವದಂತಿಗಳು ಹರಡಿದ್ದವು. ಅವರನ್ನು ಭೇಟಿಯಾಗಲು ಕುಟುಂಬದವರಿಗೆ ನಿರ್ಬಂಧ ಹಾಕಲಾಗಿತ್ತು. ಹಲವು ವಾರಗಳ ಬಳಿಕ ನಿರ್ಬಂಧ ತೆರವುಗೊಳಿಸಿ, ಭೇಟಿಗೆ ಅವಕಾಶ ಕಲ್ಪಿಸಲಾಯಿತು.

