– ಚರ್ಚೆ ಆಗಬೇಕಿರೋದು ರಾಜ್ಯದ ಸಮಸ್ಯೆ, ಇವರು ತಿಂಡಿ ತಿನ್ನೋ ವಿಷಯ ಅಲ್ಲ
ಚಿಕ್ಕಮಗಳೂರು: ರಾಜ್ಯ ಕಾಂಗ್ರೆಸ್ (Congress) ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ. ಸರ್ಕಾರಕ್ಕೆ ಸಂಖ್ಯಾ ಬಲವಿದ್ದರು ಕಾಂಗ್ರೆಸ್ ಮೇಲೆ ಜನರಿಗೆ ವಿಶ್ವಾಸವಿಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ (C.T Ravi) ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಮಗಳೂರಿನಲ್ಲಿ (Chikkamagaluru) ಮಾತನಾಡಿದ ಅವರು, ಪ್ರಸ್ತುತ ಸರ್ಕಾರಕ್ಕೆ ಸಂಖ್ಯಾ ಬಲ ಇದೆ. ಆದರೆ, ಅದು ಜನರ ವಿಶ್ವಾಸ ಕಳೆದುಕೊಂಡಿದೆ ಎಂದಿದ್ದಾರೆ. ಇವತ್ತು ಚುನಾವಣೆ ನಡೆದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎಂದು ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಇದನ್ನು ಒಂದು ಸವಾಲಾಗಿ ಸ್ವೀಕರಿಸಿ, ತಮ್ಮ ಸರ್ಕಾರದ ಜನಪ್ರಿಯತೆಯನ್ನು ಪರೀಕ್ಷಿಸಲು ಸರ್ಕಾರವನ್ನು ವಿಸರ್ಜಿಸಿ ಚುನಾವಣೆ ಎದುರಿಸಲಿ ಎಂದು ನೇರ ಸವಾಲು ಹಾಕಿದ್ದಾರೆ.
ಚುನಾವಣೆ ನಡೆದರೆ ಅವರ ಭವಿಷ್ಯ ಏನು ಎಂಬುದು ಗೊತ್ತಾಗುತ್ತದೆ. ಆದರೆ, ಆ ಧೈರ್ಯ ಸರ್ಕಾರಕ್ಕೆ ಇಲ್ಲ ಮತ್ತು ಅವರು ಚುನಾವಣೆಯನ್ನು ಎದುರಿಸುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಕಾಂಗ್ರೆಸ್‌ಗೆ ಸಂಖ್ಯಾ ಬಲವಿದ್ದರೂ, ಪಕ್ಷದೊಳಗೆ ಭಿನ್ನಮತಿಯ ಚಟುವಟಿಕೆಗಳು ನಡೆಯುತ್ತಿವೆ. ನವೆಂಬರ್ ಕ್ರಾಂತಿಯ ಬಗ್ಗೆ ಮಾತನಾಡಿದವರು ಯಾರು. ಕಾಂಗ್ರೆಸ್ಸಿನವರೇ ಅಲ್ಲವೆ. ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ನಾವು ವಿಧಾನಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಆದರೆ ನಾವು ಈ ಸರ್ಕಾರವನ್ನು ಬೀಳಿಸಲು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ, ಡಿಸಿಎಂ ಮನೆಯಲ್ಲಿ ಸಿಎಂ ತಿಂಡಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅವರ ಮನೆಯಲ್ಲಿ ಇವರು, ಇವರ ಮನೆಯಲ್ಲಿ ಅವರು ತಿಂಡಿ ತಿನ್ನುವುದೇ ಚರ್ಚೆಯಾಗಿದೆ. ಆದರೆ, ಚರ್ಚೆ ಆಗಬೇಕಿದ್ದು ರೈತರು-ಸರ್ಕಾರಿ ನೌಕರರ ಆತ್ಮಹತ್ಯೆ, ಜೋಳ ಖರೀದಿ ಬಗ್ಗೆ. ಚರ್ಚೆ ಆಗಬೇಕಿದ್ದು ಅತಿವೃಷ್ಠಿ ಪರಿಹಾರದ ಬಗ್ಗೆ, ಗುಂಡಿ ಕಾರಣಕ್ಕೆ 11 ತಿಂಗಳಲ್ಲಿ 580ಕ್ಕೂ ಹೆಚ್ಚು ಜನ ಸಾವನ್ನಪ್ಪಿರೋದರ ಬಗ್ಗೆ. ಇದು ಸರ್ಕಾರಿ ನಿರ್ಲಕ್ಷ್ಯದ ಕೊಲೆ, ಇದು ಚರ್ಚೆ ಆಗಬೇಕಿರೋದು. ದುರ್ದೈವದ ಸಂಗತಿ ಅವರ ಮನೆಯಲ್ಲಿ ಇವರು ಇವರ ಮನೆಯಲ್ಲಿ ಅವರು ತಿಂಡಿ ತಿನ್ನೋದು ಚರ್ಚೆ ಆಗುತ್ತಿದೆ. ಇದು ರಾಷ್ಟ್ರೀಯ ವಿಷಯನಾ ಎಂದು ಕಿಡಿಕಾರಿದ್ದಾರೆ. ಗುಂಡಿಗೆ ಬಿದ್ದು 580 ಜನ ಸತ್ತಿದ್ದಕ್ಕೆ ಹೊಣೆ ಯಾರು…ಇವರೇ ತಾನೇ…? ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆ ಆಗಲಿ ಎಂದು ಆಗ್ರಹಿಸಿದ್ದಾರೆ.

