– ರಾಜ್ಯ ಕಾಂಗ್ರೆಸ್ ಬೆಳವಣಿಗೆ ಹೈಕಮಾಂಡ್‌ಗೆ ಅವಕಾಶ & ಸವಾಲು ಎರಡೂ ಇದೆ ಎಂದ ಸಂಸದ
ನವದೆಹಲಿ: ಸಿಎಂ, ಡಿಸಿಎಂ ನಡುವಿನ ಬ್ರೇಕ್‌ಫಾಸ್ಟ್ ಮೀಟಿಂಗ್ ಬರೀ ಟೀಸರ್. ಸಿನಿಮಾ ಇನ್ನೂ ಬಾಕಿ ಇದೆ. ಕೆಲವೇ ದಿನಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ (Basavaraj Bommai) ವ್ಯಂಗ್ಯವಾಡಿದ್ದಾರೆ.
ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಲವೇ ದಿನದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಏನು ಎನ್ನುವುದು ಹೊರಬೀಳಲಿದೆ. ಇವರಿಬ್ಬರೂ ಒಬ್ಬರಿಗೊಬ್ಬರು ಬ್ರೇಕ್‌ಫಾಸ್ಟ್ ಮಾಡುತ್ತ ಕಾಲಹರಣ ಮಾಡುತ್ತಿದ್ದರೆ, ರಾಜ್ಯದ ಜನರ ಶ್ರೇಯೋಭಿವೃದ್ಧಿ ಯಾರು ಮಾಡುತ್ತಾರೆ ಎನ್ನುವುದು ನಮ್ಮ ಕಾಳಜಿ. ಒಬ್ಬರು ಕುರ್ಚಿಯನ್ನು ಕಸಿಯಲು ಪ್ರಯತ್ನಿಸುತ್ತಿದ್ದಾರೆ. ಇನ್ನೊಬ್ಬರು ಅದನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಕರ್ನಾಟಕದ ನಾಟಕ ನಿಲ್ಲಬೇಕು ಎನ್ನುವುದು ರಾಜ್ಯದ ಜನರ ಇಚ್ಛೆಯಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಹೈಕಮಾಂಡ್ ಹೇಳಿದಾಗ ಡಿಕೆಶಿ ಸಿಎಂ: ಸಿದ್ದರಾಮಯ್ಯ
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾಯಿತು. ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ಗೊಂದಲ ನಿವಾರಿಸುವಲ್ಲಿ ವಿಫಲವಾಗಿದಿಯಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲಿದೆ ಕಾಂಗ್ರೆಸ್ ಹೈಕಮಾಂಡ್? ಯಾರು ಹೈಕಮಾಂಡ್? ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ತಮ್ಮ ಮೇಲೆ ಹೈಕಮಾಂಡ್ ಇದೆ ಎಂದು ಹೇಳಿದ ಮೇಲೆ ಹೈಕಮಾಂಡ್‌ಗೆ ಏನು ಅರ್ಥ ಇದೆ. ಇದು ಒಂದು ಕುಟುಂಬದ ವಿಷಯ ಆಗಿದೆ ಎಂದು ಆರೋಪಿಸಿದರು.

ಕರ್ನಾಟಕದಲ್ಲಿ ರಾಜಕೀಯ ಏಳುಬೀಳುಗಳು ಪಕ್ಷಗಳ ನಡುವೆ ನಡೆಯುತ್ತವೆ. ಆದರೆ, ಇಬ್ಬರು ಹಿರಿಯ ನಾಯಕರು ರಾಜ್ಯದ ಜನರನ್ನು ಮೂರ್ಖರು ಎಂದು ತಿಳಿದುಕೊಂಡಿದ್ದಾರಾ? ಅವರು ಅಧಿಕಾರ ಹಂಚಿಕೆ ಒಪ್ಪಂದ ಆಗಿದೆ ಎನ್ನುವ ಬಗ್ಗೆ ಇಷ್ಟೆಲ್ಲಾ ಸರ್ಕಸ್ ನಡೆದರೂ ಕರ್ನಾಟಕವನ್ನು ತಮ್ಮ ರಾಜಕೀಯ ಕುರ್ಚಿಗಾಗಿ ಬಳಸಿಕೊಂಡು ಈಗ ಇಬ್ಬರೂ ಸೇರಿ ಬ್ರೇಕ್‌ಫಾಸ್ಟ್ ಮಾಡಿ ಏನು ನಡೆದಿಲ್ಲ ಎಂದರೆ ಜನರನ್ನು ಬಹಳ ತಪ್ಪಾಗಿ ತಿಳಿದುಕೊಂಡಿದ್ದಾರೆ. ಬಹಳ ಬಾಲಿಶವಾಗಿ ನಡೆದುಕೊಳ್ಳುತ್ತಿದ್ದಾರೆ. ಎರಡನೆಯದಾಗಿ ಹೈಕಮಾಂಡ್ ಹೇಳಿದ ಮೇಲೆ ಇಬ್ಬರೂ ಸೇರಿ ಬ್ರೇಕ್‌ಫಾಸ್ಟ್ ಮಾಡುತ್ತಿದ್ದೇವೆ ಎಂದು ಹೇಳಿದರೆ ಇಬ್ಬರ ನಡುವೆ ಪರಸ್ಪರ ಹೊಂದಾಣಿಕೆ ಇಲ್ಲ ಅಂತ ಅರ್ಥ. ಪರಸ್ಪರ ಒಪ್ಪಂದ ಆಗಿಲ್ಲ ಅಂತ ಅರ್ಥ ಆಯಿತು ಎಂದು ಹೇಳಿದರು.
ಕಾಂಗ್ರೆಸ್ ಹೈಕಮಾಂಡ್ ಉಳಿದಿಲ್ಲ
ರೈತರು ಸಂಕಷ್ಟದಲ್ಲಿ ಇದ್ದಾರೆ. ಬೀದಿಗೆ ಬಿದ್ದು ಹೋರಾಟ ಮಾಡುತ್ತಿದ್ದಾರೆ. ಬೆಳೆ ನಾಶ ಆಗಿದೆ. ಹಲವಾರು ಸಮಸ್ಯೆಗಳಿವೆ. ಶಿಕ್ಷಣ ಅಂತೂ ಅಧೋಗತಿಗೆ ಹೋಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಮೂರು ಬಾರಿ ಮಾಡುವುದನ್ನು ಎಲ್ಲಿಯಾದರೂ ನೋಡಿದ್ದೀರಾ? ಹದಿನೈದು ಇಪ್ಪತ್ತು ಮಾರ್ಕಸ್‌ಗೆ ಎಸ್‌ಎಸ್‌ಎಲ್‌ಸಿ ಪಾಸ್ ಮಾಡುವುದು, ಅಭಿವೃದ್ಧಿ ಸಂಪೂರ್ಣ ನಿಂತು ಹೋಗಿದೆ. ಇಷ್ಟೆಲ್ಲ ಆದರೂ ಸಿಎಂ ತಮಗೇನು ಸಂಬಂಧ ಇಲ್ಲ ಅಂತ ನಡೆದುಕೊಳ್ಳುತ್ತಿದ್ದಾರೆ. ಅಷ್ಟೆಯಲ್ಲ ಎಸ್ಸಿ-ಎಸ್ಟಿ, ಒಬಿಸಿ ಅಭಿವೃದ್ಧಿ ಮಾಡುತ್ತೇವೆ ಎನ್ನುತ್ತಾರೆ. ಎಸ್ಸಿಪಿ ಟಿಎಸ್‌ಪಿಗೆ ಮೀಸಲಿಟ್ಟ ಹಣ, ಒಬಿಸಿಗೆ ಮೀಸಲಿಟ್ಟ ಹಣ ಖರ್ಚು ಮಾಡಿಲ್ಲ. ಒಬಿಸಿಗೆ ಮೀಸಲಿಟ್ಟ 441 ಕೋಟಿ ರೂ. ಜಾತಿಗಣತಿಗೆ ಖರ್ಚು ಮಾಡಿದ್ದಾರೆ. ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಭ್ರಷ್ಟಾಚಾರ ಮಾಡುವುದರಲ್ಲಿ ದೊಡ್ಡಮಟ್ಟದ ಪೈಪೋಟಿ ನಡೆಯುತ್ತಿದೆ. ಇದೆಲ್ಲ ಕಾಂಗ್ರೆಸ್ ಹೈಕಮಾಂಡ್ ಹೈಕಮಾಂಡ್ ಆಗಿ ಉಳಿದೇ ಇಲ್ಲ ಎನ್ನುವುದನ್ನು ತೋರಿಸುತ್ತದೆ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ನಾಟಿಕೋಳಿ ಮೆನು ಸವಿಯಲು ಡಿಕೆಶಿ ನಿವಾಸಕ್ಕೆ ಆಗಮಿಸಿದ ಸಿಎಂ
ಭವಿಷ್ಯ ನುಡಿಯುವುದಿಲ್ಲ
ರಾಜ್ಯ ಸರ್ಕಾರದ ಬಗ್ಗೆ ನಾವು ಭವಿಷ್ಯ ನುಡಿಯುವುದಿಲ್ಲ. ಈ ಬೆಳವಣಿಗೆ ನೋಡಿದಾಗ ಏನು ಬೇಕಾದರೂ ಆಗಬಹುದು. ಮೊದಲನೆ ಸುತ್ತು ಎರಡನೇ ಸುತ್ತು ಅಂತ ಇರುತ್ತದೆ. ಈಗ ಮೊದಲನೇ ಸುತ್ತಿನಲ್ಲಿ ಸಿದ್ದರಾಮಯ್ಯ ಮೇಲುಗೈ ಸಾಧಿಸಿದಂತೆ ಕಾಣಿಸುತ್ತದೆ. ದೆಹಲಿಗೆ ಬಂದು ರಾಹುಲ್ ಗಾಂಧಿ ಭೇಟಿ ಮಾಡಿ ನಾನು ಐದು ವರ್ಷ ಮುಖ್ಯಮಂತ್ರಿ ಅಂತ ಹೇಳಿದ್ದರು. ಈಗಲೂ ಅದನ್ನೇ ಹೇಳುತ್ತಿದ್ದಾರೆ. ಈಗ ಎರಡನೇ ಸುತ್ತಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ಗ್ರೌಂಡನ್ನು ಮೇಕಪ್ ಮಾಡಿಕೊಂಡಿದ್ದಾರೆ. ಅವರ ರಾಜಕೀಯ ನೆಲೆಗಟ್ಟನ್ನು ಸ್ವಲ್ಪ ಸುಧಾರಿಸಿಕೊಂಡಿದ್ದಾರೆ. ಚೌಕಾಸಿ ಮಟ್ಟಕ್ಕೆ ಬಂದಿದೆ. ಎರಡನೇ ಸುತ್ತು ಡಿ.ಕೆ.ಶಿವಕುಮಾರ್ ಅವರದ್ದಾಗಿದೆ. ಈಗ ಮೂರನೇ ಸುತ್ತು ಯಾರ ಕೈ ಮೇಲಾಗುತ್ತದೆ ಎನ್ನುವ ಕುತೂಹಲ ನಮಗೆಲ್ಲ ಇದೆ. ರಾಜ್ಯದ ಜನತೆಗೆ ಯಾವಾಗ ಈ ಅನಿಷ್ಟ ಸರ್ಕಾರ ಯಾವಾಗ ತೊಲಗಿತ್ತೊ ಅಂತ ಬಯಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಅವಿಶ್ವಾಸ ಚರ್ಚಿಸಿ ತೀರ್ಮಾನ
ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಕೈಗೊಳ್ಳಲು ಬಿಜೆಪಿ ಸಿದ್ಧತೆ ನಡೆಸಿದೆಯಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯ ಬೆಳವಣಿಗೆಗಳ ಆಧಾರದ ಮೇಲೆ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುತ್ತದೆ. ಈಗಿರುವ ಪರಿಸ್ಥಿತಿಯಲ್ಲಿ ಆಡಳಿತ ಪಕ್ಷ ಅಧಿಕಾರ ನಡೆಸಲು ಯೋಗ್ಯತೆ ಇಲ್ಲ ಎನ್ನುವಂಥದ್ದು ಪ್ರಬಲವಾಗಿದೆ. ಇದು ನಂಬರ್ ಗೇಮ್ ಅಲ್ಲ. 140 ಜನ ಇದ್ದ ಮೇಲೆ ಚಿಕ್ಕ ಮಕ್ಕಳ ಹಾಗೆ ಯಾಕೆ ಜಗಳ ಆಡುತ್ತಾರೆ. ಇವರು ಇಬ್ಬರು ಬ್ರೇಕ್‌ಫಾಸ್ಟ್ ಮಾಡಿದರೆ ಎಲ್ಲವೂ ಸರಿ ಹೋಗುತ್ತದೆಯಾ? ಜನರ ಧ್ವನಿಯಾಗಿ ನಾವು ಪ್ರಶ್ನೆಗಳನ್ನು ಕೇಳಬೇಕಲ್ಲಾ. ಸರ್ಕಾರ ಸ್ಥಿರವಾಗಿದ್ದರೂ, ಆಡಳಿತ ವ್ಯವಸ್ಥೆ ಸರಿ ಇಲ್ಲದಿದ್ದಾಗ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಾಡಿಯೇ ಮಾಡುತ್ತವೆ. ವಿರೋಧ ಪಕ್ಷದ ನಾಯಕರು ಮತ್ತು ಪ್ರತಿಪಕ್ಷಗಳ ಸದನ ನಾಯಕರು ಕುಳಿತುಕೊಂಡು ತಿರ್ಮಾನ ಮಾಡುತ್ತಾರೆ. ರಾಜ್ಯ ಕಾಂಗ್ರೆಸ್‌ನ ಈ ಬೆಳವಣಿಗೆ ಹೈಕಮಾಂಡ್‌ಗೆ ಸಂಕಷ್ಟವೇ ಎಂಬ ಪ್ರಶ್ನೆಗೆ ಸವಾಲು ಮತ್ತು ಅವಕಾಶ ಎರಡೂ ಇದೆ. ಸ್ಥಿರವಾಗಿರುವ ಸರ್ಕಾರ, ಗಟ್ಟಿಯಾಗಿರುವ ನಾಯಕತ್ವ ಹೈಕಮಾಂಡ್‌ನ ಅಸ್ತಿತ್ವವನ್ನು ಅತ್ಯಂತ ಗೌಣ ಮಾಡುತ್ತದೆ. ರಾಜಕೀಯ ಅಸ್ಥಿರತೆ ಇದ್ದಾಗ ಹೈಕಮಾಂಡ್ ಬೆಲೆ ಹೆಚ್ಚಾಗುತ್ತದೆ. ಆದರೆ, ಇದನ್ನು ಸರಿಯಾಗಿ ನಿಭಾಯಿಸದಿದ್ದರೆ ಅವರು ಖಂಡಿತವಾಗಿಯೂ ವಿಫಲರಾದಂತೆ ಎಂದು ಹೇಳಿದರು.

