ಇತ್ತೀಚೆಗಷ್ಟೇ ಮುಹೂರ್ತ ಆಚರಿಸಿಕೊಂಡಿದ್ದ ಅಚ್ಯುತ್ ಕುಮಾರ್ ಹಾಗೂ ಮನೋರಂಜನ್ ಪ್ರಮುಖ ಭೂಮಿಕೆಯಲ್ಲಿರುವ ಕೌಂತೇಯ ಸಿನಿಮಾದ (Kaunteya Movie) ಚಿತ್ರೀಕರಣ ಭರದಿಂದ ಸಾಗುತ್ತಿದೆ. ಬಹುತೇಕ ಮೈಸೂರಿನ (Mysuru) ಸುತ್ತಮುತ್ತ ಶೂಟಿಂಗ್ ನಡೆಸಿರುವ ಚಿತ್ರತಂಡ, ಈಗಾಗಲೇ ಶೇ.70ರಷ್ಟು ಮುಗಿಸಿದೆ. ಮರ್ಡರ್ ಮಿಸ್ಟ್ರಿ ಕಥಾಹಂದರವಿರುವ ಈ ಸಿನಿಮಾದಲ್ಲಿ ಅಚ್ಯುತ್ ಕುಮಾರ್ ಪಾಸಿಟಿವ್ ಕ್ಯಾರೆಕ್ಟರ್‌ನಲ್ಲಿ ಕಾಣಿಸಿಕೊಂಡರೆ, ಇದೇ ಮೊದಲ ಬಾರಿಗೆ ಮನೋರಂಜನ್ (Actor Manoranjan) ನೆಗೆಟಿವ್ ರೋಲ್‌ಗೆ ಬಣ್ಣ ಹಚ್ಚಿದ್ದಾರೆ. ಅವರ ಗೆಟಪ್ ಸಹ ಭಿನ್ನವಾಗಿದ್ದು, ಯಾಕಾಗಿ ಅವರು ನೆಗೆಟಿವ್ ಪಾತ್ರ ನಿಭಾಯಿಸುತ್ತಿದ್ದಾರೆ ಎಂಬುದು ಸದ್ಯಕ್ಕೆ ಗೌಪ್ಯವಾಗಿರಿಸಿದೆ ‘ಕೌಂತೇಯ’ ತಂಡ.

ಮನೋರಂಜನೆಗೆ ಜೋಡಿಯಾಗಿ ಅನನ್ಯ ರಾಜಶೇಖರ್ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಪ್ರಮುಖ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಅನನ್ಯ, ಆರಂಭದಲ್ಲೇ ಮುಖ್ಯ ಪಾತ್ರ ದೊರೆತ ಖುಷಿಯಲ್ಲಿದ್ದಾರೆ. ಇನ್ನು ಎಸಿಪಿಯಾಗಿ ಪ್ರಿಯಾಂಕಾ ತಿಮ್ಮೇಶ್ ಇದ್ದಾರೆ. ಇದೇ ಮೊದಲ ಬಾರಿಗೆ ಪ್ರಿಯಾಂಕಾ ಖಾಕಿ ತೊಟ್ಟು ಕಂಗೊಳಿಸುತ್ತಿದ್ದಾರೆ. ಶರಣ್ಯ ಶೆಟ್ಟಿ ಚಿತ್ರದ ನಾಯಕಿ. ಅಚ್ಯುತ್ ಕುಮಾರ್ ಮಗಳ ಪಾತ್ರದಲ್ಲಿ ಶರಣ್ಯ ಕಾಣಿಸಿಕೊಂಡಿದ್ದಾರೆ.
ಶ್ರೀ ಮಾಂಕಾಳಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಈ ಸಿನಿಮಾಕ್ಕೆ ಸುರೇಶ್ ಕುಮಾರ್ ಬಂಡವಾಳ ಹೂಡಿದ್ದಾರೆ. ಬಿ.ಕೆ.ಚಂದ್ರಹಾಸ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಇವರ ಜತೆ ಚಿತ್ರಕಥೆಗೆ ಸಾಥ್ ನೀಡುವುದರ ಜತೆಗೆ ಸಂಭಾಷಣೆಗೆ ಪೆನ್ನು ಹಿಡಿದಿದ್ದಾರೆ ಹರಿ. ಪಿ.ಎಲ್.ರವಿ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಇನ್ನು ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಚಂದ್ರಹಾಸ, ‘ಕೌಂತೇಯ ಅಂದರೆ ಕುಂತಿಪುತ್ರ ಎಂದರ್ಥ. ಈ ಚಿತ್ರದಲ್ಲಿ ಕೌಂತೇಯ ಯಾರು ಎಂಬುದು ಒಂದೆಡೆಯಾದರೆ, ಮತ್ತೊಂದೆಡೆ ಮರ್ಡರ್ ಮಿಸ್ಟ್ರಿ ಕಥೆಯನ್ನು ಕೌತುಕವಾಗಿ ತೆಗೆದುಕೊಂಡು ಹೋಗಿರುವುದೇ ಈ ಚಿತ್ರದ ವಿಶೇಷ. ಮಾಮೂಲಿ ರೀತಿಯ ಕಥೆ ಅಲ್ಲ. ನಿರೂಪಣೆಯಲ್ಲೂ ವಿಭಿನ್ನತೆ ಕಾಪಾಡಿಕೊಂಡಿದ್ದೇವೆ. ಅವೆಲ್ಲವನ್ನೂ ಸದ್ಯದಲ್ಲೇ ಮೊದಲ ಝಲಕ್ ಮೂಲಕ ಹರಿಬಿಡುವ ಆಲೋಚನೆಯಿದೆ. ತಾರಾಗಣದಲ್ಲೂ ವಿಶೇಷತೆ ಇದೆ. ಊಹೆಗೆ ನಿಲುಕದಂತೆ ಸ್ಕ್ರೀನ್ಪ್ಲೇ ಮಾಡಿರುವುದು ಚಿತ್ರದ ಪ್ಲಸ್ ಪಾಯಿಂಟ್. ಅಚ್ಯುತ್ ಕುಮಾರ್ ತಂದೆಯ ಪಾತ್ರವಾದರೂ ಬೇರೆ ರೀತಿ ಇದೆ. ರವಿಚಂದ್ರನ್ ಪುತ್ರ ಮನೋರಂಜನ್ ಇದೇ ಫಸ್ಟ್ ಟೈಮ್ ನೆಗೆಟಿವ್ ಶೇಡ್ನಲ್ಲಿ ನಟಿಸುತ್ತಿದ್ದಾರೆ. ನಾಯಕಿಯರಾದ ಶರಣ್ಯ ಶೆಟ್ಟಿ, ಅನನ್ಯ ರಾಜಶೇಖರ್ ಹಾಗೂ ಎಸಿಪಿ ಪಾತ್ರ ನಿರ್ವಹಿಸಿರುವ ಪ್ರಿಯಾಂಕಾ ತಿಮ್ಮೇಶ್ ಎಲ್ಲರೂ ಅವರವರ ಪಾತ್ರವನ್ನು ನೀಟಾಗಿ ನಿಭಾಯಿಸಿದ್ದಾರೆ’ ಎಂದು ಮಾಹಿತಿ ನೀಡುತ್ತಾರೆ.

