ಸಾಮಾನ್ಯವಾಗಿ ಚಿತ್ರಾನ್ನ, ಮೊಸರನ್ನ, ಪುಳಿಯೋಗರೆ, ಪಾಲಕ್ ಹಾಗೂ ಪುದೀನಾ ರೈಸ್ ಹೀಗೆ ವಿವಿಧ ರೈಸ್ ಐಟಂಗಳನ್ನು ನೀವು ತಿಂದಿರುತ್ತೀರಿ. ರೈಸ್ ರೆಸಿಪಿಗಳ ಪೈಕಿ ಕರಿಬೇವಿನ ರೈಸ್ ಕೂಡ ಒಂದು. ಮತ್ತೆ ಮತ್ತೆ ಬೇಕೆನ್ನಿಸುವ, ಬಾಯಲ್ಲಿ ನೀರೂರಿಸುವ ಈ ರೆಸಿಪಿಯನ್ನು ಯಾವ ರೀತಿ ಮಾಡುವುದು ಎಂಬುದನ್ನು ನಾವಿಂದು ತಿಳಿಸಿಕೊಡುತ್ತಿದ್ದೇವೆ. ನೀವು ಕರಿಬೇವಿನ ರೈಸ್ ತಿಂದಿರದಿದ್ದರೆ ಒಂದು ಬಾರಿ ಟ್ರೈ ಮಾಡಿ ನೋಡಿ.

ಬೇಕಾಗುವ ಸಾಮಗ್ರಿಗಳು:
ಅಕ್ಕಿ – 1 ಕಪ್
ಎಣ್ಣೆ – 2 ಚಮಚ
ಶೇಂಗಾ – 2 ಚಮಚ
ಗೋಡಂಬಿ – 2 ಚಮಚ
ಪುಟಾಣಿ – ಮುಕ್ಕಾಲು ಕಪ್
ತೆಂಗಿನಕಾಯಿ ತುರಿ – 1 ಚಮಚ
ಕೆಂಪು ಮೆಣಸಿನಕಾಯಿ – 6
ಕರಿಬೇವು – 1 ಕಪ್
ಜೀರಿಗೆ – 1 ಚಮಚ
ಬೆಳ್ಳುಳ್ಳಿ – 6 ಎಸಳು
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ವಿಧಾನ:
* ಮೊದಲಿಗೆ ಒಂದು ಕಪ್ ಕರಿಬೇವಿನ ಎಲೆಗಳನ್ನು ತೊಳೆದು ಒಣಗಿಸಿಕೊಳ್ಳಿ.
* ಮತ್ತೊಂದು ಕಡೆ ಒಲೆ ಆನ್ ಮಾಡಿ ಕುಕ್ಕರ್‌ಗೆ ಒಂದು ಕಪ್ ಅಕ್ಕಿಗೆ ಎರಡು ಕಪ್ ನೀರು ಹಾಕಿ ಅನ್ನವನ್ನು ಬೇಯಿಸಿಕೊಳ್ಳಬೇಕು.
* ಇನ್ನೊಂದೆಡೆ ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಬಳಿಕ ಎರಡು ಚಮಚ ಶೇಂಗಾ ಹಾಕಿ ಕಡಿಮೆ ಉರಿಯಲ್ಲಿ ಹುರಿಯಿರಿ. ಹಾಗೆ ಎರಡು ಚಮಚ ಗೋಡಂಬಿ ಸೇರಿಸಿ ಹುರಿಯಿರಿ. ಬಳಿಕ ಇವುಗಳನ್ನು ಒಂದು ತಟ್ಟೆಯಲ್ಲಿ ಹಾಕಿಕೊಳ್ಳಿ.
* ಈಗ ಅದೇ ಪಾತ್ರೆಯಲ್ಲಿ 6 ಒಣ ಮೆಣಸಿನಕಾಯಿ, ಒಂದು ಕಪ್ ಕರಿಬೇವು ಹಾಗೂ ಒಂದು ಚಮಚ ಜೀರಿಗೆಯನ್ನು ಸೇರಿಸಿ ಕಡಿಮೆ ಉರಿಯಲ್ಲಿ ಹುರಿಯಿರಿ. ನಂತರ ಗ್ಯಾಸ್ ಆಫ್ ಮಾಡಿ. ಅದೇ ರೀತಿ 6 ಬೆಳ್ಳುಳ್ಳಿ ಎಸಳು ಹಾಗೂ ಮುಕ್ಕಾಲು ಕಪ್ ಬೇಳೆಯನ್ನು ಸೇರಿಸಿ ತಣ್ಣಗಾಗಲು ಬಿಡಬೇಕು.
* ಈ ಮಿಶ್ರಣ ತಣ್ಣಗಾದ ಬಳಿಕ ಅದನ್ನು ಮಿಕ್ಸರ್ ಜಾರ್‌ಗೆ ಹಾಕಿ. ಈಗ ಇದಕ್ಕೆ ಒಂದು ಚಮಚ ಒಣಗಿದ ತೆಂಗಿನಕಾಯಿ ತುಂಡುಗಳು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಹಾಗೂ ಒರಟಾಗಿ ರುಬ್ಬಿಕೊಳ್ಳಬೇಕು.
* ಬಳಿಕ ಬೇಯಿಸಿದ ಅನ್ನಕ್ಕೆ ರುಬ್ಬಿದ ಕರಿಬೇವಿನ ಎಲೆ ಪುಡಿ, ಹುರಿದ ಗೋಡಂಬಿ ಹಾಗೂ ಮೆಂತ್ಯ ಬೀಜಗಳನ್ನು ಸೇರಿಸಿ ಮಿಶ್ರಣ ಮಾಡಿಕೊಳ್ಳಿ.
* ಈಗ ಸ್ವಲ್ಪ ಹುರಿದ ಕರಿಬೇವು, ಒಂದು ಚಮಚ ತುಪ್ಪ ಸೇರಿಸಿ ಮಿಶ್ರಣ ಮಾಡಿ. ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ.
* ಈಗ ಕರಿಬೇವು ರೈಸ್ ಸವಿಯಲು ಸಿದ್ಧವಾಗಿದೆ. ಈ ಅನ್ನವನ್ನು ಉಪ್ಪಿನಕಾಯಿ ಜೊತೆಗೆ ಸವಿದರೆ ರುಚಿಯೂ ಸೂಪರ್ ಆಗಿರುತ್ತದೆ.

