ಬೆಂಗಳೂರು: ಪಬ್ಲಿಕ್ ಟಿವಿಯ (PUBLiC TV) ಹಳೆ ವಿಡಿಯೋ ಬಳಸಿ ವೈರಲ್ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಪಬ್ಲಿಕ್ ಟಿವಿ ನಿರೂಪಕ ಅರವಿಂದ್ ಅವರು ನೀಡಿದ ದೂರಿನ ಅನ್ವಯ ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಸೆಕ್ಷನ್ 66ರ ಅಡಿ ಯಶವಂತಪುರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ (Cyber Crime Police Station) ಪ್ರಕರಣ ದಾಖಲಾಗಿದೆ.
ಕಾಂಗ್ರೆಸ್‌ಲ್ಲಿ (Congress) ಆಗುತ್ತಿರುವ ಪ್ರಸಕ್ತ ರಾಜಕೀಯ ಬೆಳವಣಿಗೆಗಳಿಗೆ ತಳುಕು ಹಾಕಿ ಪಬ್ಲಿಕ್ ಟಿವಿಯ ಹಳೆಯ ವಿಡಿಯೋ ಒಂದನ್ನು ಕಿಡಿಗೇಡಿಗಳು ವೈರಲ್ ಮಾಡುತ್ತಿದ್ದಾರೆ. 2019ರ ಅಂದಿನ ರಾಜಕೀಯ ಸನ್ನಿವೇಶಕ್ಕೆ ಸಂಬಂಧಿಸಿದ ಸುದ್ದಿಯ ವಿಡಿಯೋವನ್ನ ಈಗ ವೈರಲ್ ಮಾಡುತ್ತಿದ್ದು, ಈಗಿನ ರಾಜಕೀಯ ಸನ್ನಿವೇಶಕ್ಕೂ ಹಳೆಯ ವಿಡಿಯೋ (Old Video) ತುಣುಕಿಗೆ ಯಾವುದೇ ಸಂಬಂಧ ಇಲ್ಲ. ಡಿಸೆಂಬರ್ 28, 2019ರ ಸುದ್ದಿಯನ್ನು ಈಗ ವೈರಲ್ ಮಾಡಿ, ಇಂದಿನ ರಾಜಕೀಯ ಸನ್ನಿವೇಶಕ್ಕೆ ಕಿಡಿಗೇಡಿಗಳು ಲಿಂಕ್ ಮಾಡುತ್ತಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುತ್ತಿರುವುದು ಬೆಳಕಿಗೆ ಬಂದ ಬೆನ್ನಲ್ಲೇ ಎಚ್ಚೆತ್ತ ಪಬ್ಲಿಕ್ ಟಿವಿ ಇದು ಕಿಡಿಗೇಡಿಗಳ ಕೃತ್ಯ ಎಂದು ಸ್ಪಷ್ಟನೆ ಕೊಟ್ಟಿತ್ತು. ಈಗ ಸಾಕ್ಷಿ ಸಮೇತ ಪೊಲೀಸರಿಗೆ ದೂರು ನೀಡಿದೆ. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ದೂರಿನಲ್ಲಿ ಏನಿದೆ?
ಪಬ್ಲಿಕ್ ಟಿಪಿಯಲ್ಲಿ ಕಳೆದ 9 ವರ್ಷಗಳಿಂದ ನಾನು ಸುದ್ದಿ ನಿರೂಪಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಪ್ರಸಕ್ತ ರಾಜಕೀಯ ಬೆಳವಣಿಗೆಗಳಿಗೆ ತಳುಕು ಹಾಕಿ ಪಬ್ಲಿಕ್ ಟಿವಿಯ ಹಳೆಯ ವಿಡಿಯೋ ಒಂದನ್ನು ಕಿಡಿಗೇಡಿಗಳು ವೈರಲ್ ಮಾಡುತ್ತಿದ್ದಾರೆ. 2019ರ ರಾಜಕೀಯ ಸನ್ನಿವೇಶಕ್ಕೆ ಸಂಬಂಧಿಸಿದ ಸುದ್ದಿಯ ಹಳೆಯ ವಿಡಿಯೋ ವೈರಲ್ ಆಗುತ್ತಿದೆ. ಇದರ ಹಿಂದೆ ದುರುಳರ ದುರುದ್ದೇಶ ಎದ್ದು ಕಾಣುತ್ತಿದೆ. ಈಗಿನ ರಾಜಕೀಯ ಸನ್ನಿವೇಶಕ್ಕೂ ಹಳೆಯ ವಿಡಿಯೋ ತುಣುಕಿಗೆ ಯಾವುದೇ ಸಂಬಂಧ ಇಲ್ಲ.
ಡಿಸೆಂಬರ್ 28 , 2019ರ ಸುದ್ದಿಯನ್ನ ಈಗ ವೈರಲ್ ಮಾಡಿ, ಇಂದಿನ ರಾಜಕೀಯ ಸನ್ನಿವೇಶಕ್ಕೆ ಕಿಡಿಗೇಡಿಗಳು ಲಿಂಕ್ ಮಾಡುತ್ತಿದ್ದಾರೆ, 2019 ಡಿಸೆಂಬರ್ ನಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಂಡಿತ್ತು. ಇದರಿಂದ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ಸಿಎಲ್‌ಪಿ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಈ ಸುದ್ದಿಯ 6 ವರ್ಷಗಳ ಹಿಂದಿನ ವಿಡಿಯೋ ತುಣುಕನ್ನು ಇಂದಿನ ರಾಜಕೀಯ ಸನ್ನಿವೇಶಕ್ಕೆ ಲಿಂಕ್ ಮಾಡಿ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗುತ್ತಿದೆ.
5 ನಿಮಿಷ 59 ಸೆಕೆಂಡ್ ವಿಡಿಯೋವನ್ನು ಎಡಿಟ್ ಮಾಡಿ 1:23 ನಿಮಿಷಕ್ಕೆ ಇಳಿಸಿ ವೈರಲ್ ಮಾಡುವ ಮೂಲಕ ಅಪಪ್ರಚಾರ ಮಾಡುತ್ತಿರುವ ವಿಡಿಯೋವನ್ನು ಪಬ್ಲಿಕ್ ಟಿವಿಯ ಪೊಲಿಟಿಕಲ್ ಹೆಡ್ ಆದ ರವೀಶ್ ರವರಿಗೆ ಪ್ರಭಾಕರ್ ಎಂಬುವವರು ವಾಟ್ಸಪ್ ಮೂಲಕ ಕಳುಹಿಸಿರುತ್ತಾರೆ. ಆರು ವರ್ಷದ ಹಿಂದೆ ನಾನು ನಿರೂಪಿಸಿದ ಈ ಸುದ್ದಿಯ ವಿಡಿಯೋ ತುಣುಕನ್ನು ಪಬ್ಲಿಕ್ ಟಿವಿಯ ಅನುಮತಿ ಇಲ್ಲದೆ ದುರ್ಬಳಕೆ ಮಾಡಿಕೊಂಡಿರುತ್ತಾರೆ.
ಆ ವಿಡಿಯೋದಲ್ಲಿರುವ ಸುದ್ದಿ ನಿರೂಪಕ ನಾನೇ ಆಗಿರುವುದರಿಂದ ನನ್ನ ಹಾಗೂ ನನ್ನ ಸಂಸ್ಥೆ ಪಬ್ಲಿಕ್ ಟಿವಿಗೆ ಮಾಹಿತಿ ಇಲ್ಲದೇ ನಮ್ಮ ವಿಡಿಯೋವನ್ನು ಎಡಿಟ್ ಮಾಡಿ ಉಪಯೋಗಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಮನವಿ ಮಾಡುತ್ತಿದ್ದೇನೆ.




