– ಅಹಿಂದ ಸಮಾಜದ ನಾಯಕ ಸಿದ್ದರಾಮಯ್ಯ
– ಕಾಂಗ್ರೆಸ್ ಗೆಲ್ಲಲು ಸಿದ್ದರಾಮಯ್ಯ ಕಾರಣ
ಬೆಂಗಳೂರು: ರಾಜ್ಯದಲ್ಲಿ ಹೆಚ್ಚಾದ ಕುರ್ಚಿ ಕಿತ್ತಾಟದ ವಿಚಾರವಾಗಿ ಡಿಕೆ ಶಿವಕುಮಾರ್(DK Shivakumar) ಪರವಾಗಿ ಒಕ್ಕಲಿಗ ಸಮುದಾಯದ ಬ್ಯಾಟಿಂಗ್ ಬೆನ್ನಲ್ಲೇ ಸಿಎಂ ಪರವಾಗಿ ಕುರುಬ ಸಮಾಜ ಕೂಡ ಅಖಾಡಕ್ಕಿಳಿದಿದೆ. ಒಂದು ವೇಳೆ ಸಿದ್ದರಾಮಯ್ಯನವರನ್ನು (Siddaramaiah) ಸಿಎಂ ಪಟ್ಟದಿಂದ ಕೆಳಗೆ ಇಳಿಸಿದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ (Congress) ವಿರುದ್ಧ ಮತ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದೆ.
ಈ ಸಂಬಂಧ ಇಂದು ಬೆಂಗಳೂರಿನ ಕರ್ನಾಟಕ ಪ್ರದೇಶ ಕುರುಬ ಸಮಾಜದ (Kuruba Community) ಕಛೇರಿಯಲ್ಲಿ ಸಮುದಾಯದ ಶ್ರೀಗಳು, ಮುಖಂಡರು ಸಭೆ ಮಾಡಿ, ಸಿಎಂ ಸ್ಥಾನ ಬದಲಾವಣೆ ಮಾಡದಂತೆ ಒತ್ತಾಯಿಸಿ ಸಿಎಂ ಬೆನ್ನಿಗೆ ನಿಂತಿದ್ದಾರೆ.
ತಿಂಥಣಿ ಮಠದ ಸಿದ್ದರಾಮನಂದಪೂರಿ ಸ್ವಾಮೀಜಿ ಮಾತನಾಡಿ, ರಾಜ್ಯದ ಎಲ್ಲಾ ಕುರುಬ ಸಂಘದ ನಿರ್ದೇಶಕರು ಹಾಗೂ ಪದಾಧಿಕಾರಿಗಳ ಸಭೆ ನಡೆಸುತ್ತಿದ್ದಾರೆ. ಇತ್ತೀಚಿಗೆ ರಾಜಕೀಯದ ಸುತ್ತ ಗೊಂದಲಗಳು ಹುಟ್ಟಿಕೊಂಡಿವೆ. ಅನೇಕ ಸಮುದಾಯಗಳು ಗೊಂದಲಗೊಂಡಿವೆ. ಅದರಲ್ಲಿ ಕುರುಬ ಸಮುದಾಯವು ಒಂದು. ಕಾಂಗ್ರೆಸ್ ಹೈಕಮಾಂಡ್ ಈ ರೀತಿ ಪರಿಸ್ಥಿತಿ ಬರುವಂತೆ ಮಾಡಿಕೊಳ್ಳಬಾರದು ಎಂದು ಹೇಳಿದರು.
ಮಠಾಧೀಶರು ಒಬ್ಬ ವ್ಯಕ್ತಿಯ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿ, ದೆಹಲಿಗೆ ಹೋಗಿ ಲಾಬಿ ಮಾಡುವ ಪರಿಸ್ಥಿತಿ ಬರಬಾರದಾಗಿತ್ತು. ಘನತೆ ಹೊಂದಿರುವ ಸಿದ್ದರಾಮಯ್ಯ ಅವರ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳಬೇಕು. ಅವರ ಗೌರವಕ್ಕೆ ಚ್ಯುತಿ ಬಂದರೆ ಕೇವಲ ಕರ್ನಾಟಕ ಅಲ್ಲ ಇಡೀ ದೇಶಕ್ಕೆ ಪರಿಣಾಮ ಬೀರಲಿದೆ ಎಂದರು. ಇದನ್ನೂ ಓದಿ: ಡಿಸೆಂಬರ್ 4, 5 ಭಾರತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಭೇಟಿ
ಸುದ್ದಿಗೋಷ್ಠಿಯಲ್ಲಿ ನಾಯಕರು ಹೇಳಿದ್ದೇನು?
ಸಿದ್ದರಾಮಯ್ಯ ಅವರನ್ನು ಯಾವುದೇ ಕಾರಣಕ್ಕೆ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಬಾರದು. ಒಂದೊಮ್ಮೆ ಕಾಂಗ್ರೆಸ್‌ನ 140 ಶಾಸಕರ ಪೈಕಿ ಯಾರು ಸಿದ್ದರಾಮಯ್ಯ ವಿರುದ್ಧ ಇದ್ದಾರೋ ಅವರ ವಿರುದ್ಧ ಮುಂದೆ ನಾವೇ ಪ್ರಚಾರ ಮಾಡಿ ಸೋಲಿಸುತ್ತೇವೆ.
ಜೈಲಿಗೆ ಹೋಗಿ ಬಂದವರು, ಭ್ರಷ್ಟರನ್ನ ಸಿಎಂ ಮಾಡಲು ಹೊರಟಿದ್ದಾರೆ. ರಾಜ್ಯವ್ಯಾಪಿ ಪ್ರಚಾರ ಮಾಡಿ ಕಾಂಗ್ರೆಸ್ ಪಕ್ಷವನ್ನು ಬಹಿಷ್ಕಾರ ಮಾಡುವಂತೆ ಕರೆ ನೀಡುತ್ತೇವೆ. ಉತ್ತರ ಕರ್ನಾಟಕ, ಕಿತ್ತೂರು ಕರ್ನಾಟಕ ಭಾಗದಲ್ಲಿ ಸಿದ್ದರಾಮಯ್ಯನವರನ್ನ ನೋಡಿ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ.
ಶಾಸಕಾಂಗ ಸಭೆ ಕರೆದು ಬಹಿರಂಗವಾಗಿ ಅಭಿಪ್ರಾಯ ಪಡೆಯಲಿ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಅವಶ್ಯಕತೆ ಇದೆ. ಕರ್ನಾಟಕ ಕಾಂಗ್ರೆಸ್‌ನಲ್ಲಿ ಮಾಸ್ ಲೀಡರ್ ಇದ್ದರೆ ಅದು ಸಿದ್ದರಾಮಯ್ಯ ಮಾತ್ರ. ಡಿಕೆಶಿ ಸೇರಿದಂತೆ ಕಾಂಗ್ರೆಸ್‌ನಲ್ಲಿ ಮಾಸ್ ಲೀಡರ್ ಯಾರೂ ಇಲ್ಲ. ಅವಶ್ಯಕತೆ ಇದ್ದರೆ ಪ್ರಾದೇಶಿಕ ಪಕ್ಷ ಸ್ಥಾಪನೆ ಅಗತ್ಯವಿದೆ. ಬಿಹಾರದಲ್ಲಿ ಈಗಾಗಲೇ ಪ್ರಾದೇಶಿಕ ಪಕ್ಷ ಯಶಸ್ವಿಯಾಗಿದೆ.

