ಬೆಂಗಳೂರು: ಕೊಟ್ಟ ಮಾತಿಗೆ ತಪ್ಪಿನಡೆದರೆ ಆ ಪರಮಾತ್ಮ ಮೆಚ್ಚಲ್ಲ, ಉಳಿದ ಎರಡೂವರೆ ವರ್ಷ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಸಿಎಂ ಸ್ಥಾನ ನೀಡಿ ಎಂದು ನಂಜಾವಧೂತ ಸ್ವಾಮೀಜಿಗಳು (Nanjavadhoota Swamiji) ಡಿಕೆಶಿ ಪರ ಬ್ಯಾಟ್ ಬೀಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ (Congress) ಕುರ್ಚಿ ಗುದ್ದಾಟದ ಬಗ್ಗೆ ಮಾತನಾಡಿದ ಅವರು, ಸಿದ್ದರಾಮಯ್ಯ (Siddaramaiah) ಅವರು ಉತ್ತಮ ಆಡಳಿತ ನಡೆಸಿಕೊಂಡು ಹೋಗುತ್ತಿದ್ದಾರೆ. ಈಗಾಗಲೇ 7.5 ವರ್ಷ ಸಿಎಂ ಅವಧಿಯನ್ನು ಪೂರೈಸಿದ್ದಾರೆ. ಅವರ ಮೇಲೆ ಯಾವುದೇ ಆಪಾದನೆ ಇಲ್ಲ. 5 ಗ್ಯಾರಂಟಿಗಳನ್ನು ಘೋಷಿಸಿ, ಅವುಗಳನ್ನು ಚಾಲ್ತಿಗೆ ತಂದು ಉತ್ತಮವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಯಶ್ವಸಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಆದರೆ 2ನೇ ಬಾರಿ ಸಿದ್ದರಾಮಯ್ಯ ಅವರು ಅಧಿಕಾರ ಸ್ವೀಕರಿಸುವ ಮುನ್ನ ಈಗಾಗಲೇ ಒಂದು ಅವಧಿ ಪೂರೈಸಿದ್ದಾರೆ, ಹೀಗಾಗಿ ಎರಡನೇ ಅವಧಿಯನ್ನು ಡಿಕೆಶಿ ಅವರಿಗೆ ನೀಡುತ್ತಿದ್ದಾರೆ ಎಂದುಕೊಂಡಿದ್ದೇವು. ಹೈಕಮಾಂಡ್ ಮಾತು ಕೊಟ್ಟಿದ್ದರೆ, ಅದನ್ನು ಮರೆಯಬಾರದು. ಮಾತು ಕೊಟ್ಟ ಮೇಲೆ ತಪ್ಪಬಾರದು. ಹೀಗಾಗಿ ಉಳಿದ ಎರಡೂವರೆ ವರ್ಷ ಡಿಕೆ ಶಿವಕುಮಾರ್ ಅವರಿಗೆ ನೀಡಿ ಎಂದು ಪಕ್ಷದ ಹಿರಿಯರಿಗೆ ಸಮುದಾಯದ ಪರವಾಗಿ ತಿಳಿಸಿದ್ದಾರೆ.ಇದನ್ನೂ ಓದಿ:ರಾಜ್ಯ ಕಾಂಗ್ರೆಸ್ ಪಾಲಿನ ನಿರ್ಣಾಯಕ ಸಭೆ ಇಂದು; ಸಿಎಂ-ಡಿಸಿಎಂ ಮುಖಾಮುಖಿಗೆ ಮುನ್ನ ʻಹೈʼಕಮಾಂಡ್ ಮೀಟಿಂಗ್
ದೇವೇಗೌಡರು ಚುನಾವಣೆ ಎದುರಿಸಿ ಸಿಎಂ ಆಗಬೇಕಾದರೆ ಎಷ್ಟು ಸವಾಲುಗಳು ಎದುರಾದವು. ಅದಾದ ಬಳಿ ಸಿಎಂ ಆದರು, ಪ್ರಧಾನಿಯೂ ಆಗಿ ಉತ್ತಮ ಆಡಳಿತ ನಡೆಸಿದರು. ಈ ರಾಜ್ಯ, ದೇಶ ಕಂಡರಿಯದ ರೀತಿಯಲ್ಲಿ ಪರಿಣಾಮಕಾರಿಯಾಗಿ ಆಡಳಿತ ನಡೆಸಿದರು. ಅದಾದ ಬಳಿಕ ಸದಾನಂದ ಗೌಡ್ರುಗೆ ಆದ ನೋವು, ಎಸ್.ಎಂ ಕೃಷ್ಣ ಅವರಿಗೆ ಆದ ನೋವು. ಇನ್ನೂ ಕುಮಾರಸ್ವಾಮಿ ಅವರು ಕಡಿಮೆ ಅವಧಿಯಲ್ಲಿ ರೈತರ ಸಮಸ್ಯೆಗಳಿಗೆ ಸ್ಪಂದಿಸಿದರು. ಅವರೂ ಕೂಡ ಕೆಳಗಿಳಿದರು. ಇನ್ನೂ ಡಿಕೆ ಶಿವಕುಮಾರ್ ಅವರು ಒಕ್ಕಲಿಗ ಸಮುದಾಯದ ಅಗ್ರಗಣ್ಯ ನಾಯಕರು. ಹದಿನಾರು, ಹದಿನೇಳು ಜಿಲ್ಲೆಯ ಈ ಸಮುದಾಯದವರು ಡಿಕೆಶಿ ಅವರಿಗೆ ಸಿಎಂ ಆಗುವ ಅವಕಾಶ ಕೊಡಿ ಎಂದು ಅವರ ಪರವಾಗಿ ನಿಂತಿದ್ದಾರೆ ಎಂದು ಹೇಳಿದ್ದಾರೆ.

