ಬೆಳಗಾವಿ: ಅಪಘಾತದಲ್ಲಿ ಮೃತಪಟ್ಟಿದ್ದ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ (Mahantesh Bilagi) ಸೇರಿ ನಾಲ್ವರ ಅಂತ್ಯಸಂಸ್ಕಾರ ರಾಮದುರ್ಗ (Ramadurga) ಪಟ್ಟಣದ ಹೊರವಲಯದಲ್ಲಿ ಫಾರ್ಮ್ ಹೌಸ್ ನಲ್ಲಿ ನಡೆಯಿತು.
ಮಹಾಂತೇಶ್ ಬೀಳಗಿ, ಶಂಕರ್ ಬೀಳಗಿ, ಈರಣ್ಣ ಬೀಳಗಿ ಹಾಗೂ ಈರಣ್ಣ ಶಿರಸಂಗಿ ಅವರ ಅಂತ್ಯಕ್ರಿಯೆಯನ್ನು ಮಹಾಂತೇಶ್ ಬೀಳಗಿ ಅಣ್ಣ ಸಿದ್ರಾಮಪ್ಪ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ವೀರಶೈವ ಲಿಂಗಾಯತ ವಿಧಿ ವಿಧಾನಗಳ ಪ್ರಕಾರ ಅಂತ್ಯ ಸಂಸ್ಕಾರ ನಡೆಯಿತು. ಅಪಘಾತದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಅಗ್ನಿಸ್ಪರ್ಶ ಮಾಡಲಾಯಿತು.
ಹಿರಿಯ ಐಎಎಸ್ ಅಧಿಕಾರಿ, ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಸೇರಿದಂತೆ ನಾಲ್ವರು ಮಂಗಳವಾರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಕಲಬುರಗಿ ಜಿಮ್ಸ್‌ನಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹ ಪಡೆದ ಕುಟುಂಬಸ್ಥರು, ರಾಮದುರ್ಗದ ನವಿಪೇಟೆನಲ್ಲಿ ಅಂತಿಮ ದರ್ಶನಕ್ಕಿಟ್ಟಿದ್ದರು.
ಸಹೋದರ ಸಂಬಂಧಿಗಳು, ಬಾಲ್ಯದ ಗೆಳೆಯರು ಸೇರಿದಂತೆ ಅಪಾರ ಬಂಧು ಬಳಗ ಮಹಾಂತೇಶ ಅವರ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು.
ಶಂಕರ್ ಬೀಳಗಿ ಒಂದು ತಿಂಗಳ ಹಿಂದಷ್ಟೇ ಅವಳಿ ಮಕ್ಕಳ ತಂದೆಯಾಗಿದ್ದರು. ಅಪಘಾತದಲ್ಲಿ ಮೃತಪಟ್ಟ ಇನ್ನಿಬ್ಬರ ಸಹೋದರರ ಮೃತದೇಹದ ಮುಂದೆ ಕುಟುಂಬಸ್ಥರ ಆಕ್ರಂದನ ನೋಡತೀರದಾಗಿತ್ತು. ರಾಮದುರ್ಗದ ಪಂಚಗಟ್ಟಿಮಠ ಶಾಲಾ ಆವರದಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಂಜೆ 4 ಗಂಟೆಯ ಬಳಿಕ ತೋಟದ ಮನೆ ಬಳಿಯ ಫಾರ್ಮ್‌ಹೌಸ್‌ನಲ್ಲಿ ಅಂತ್ಯಕ್ರಿಯೆ ನಡೆಯಿತು.

