ಬೆಂಗಳೂರು: ಡಿಕೆ ಶಿವಕುಮಾರ್ (DK Shivakumar) ಜೊತೆಗಿನ ಮಾತುಕತೆಯ ನಂತರ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರು ಆಪ್ತ ಶಾಸಕರ ಜೊತೆ ನಗರದ ಹೋಟೆಲಿನಲ್ಲಿ ಡಿನ್ನರ್ ಮೀಟಿಂಗ್ (Dinner Meeting) ಮಾಡಿದ್ದಾರೆ.
ಇಂದು ಮಧ್ಯಾಹ್ನ ಗೋಲ್ಡ್ ಫಿಂಚ್ ಹೋಟೆಲಿನಲ್ಲಿ ತನ್ನ ಆಪ್ತರ ಜೊತೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಹಂಪನಗೌಡ ನಾಯಕ್, ಕಂಪ್ಲಿ ಗಣೇಶ್, ಬಾಬಾ ಸಾಹೇಬ್ ಪಾಟೀಲ್, ಆಸಿಫ್ ಪಠಾಣ್, ವಿಶ್ವಾಸ್ ವೈದ್ಯ, ಪ್ರಕಾಶ್ ಕೋಳಿವಾಡ, ಪಾವಗಡ ವೆಂಕಟೇಶ್ ಭಾಗಿಯಾಗಿದ್ದರು. ಇದನ್ನೂ ಓದಿ: ಕಟ್ಟಡ ನಕ್ಷೆ ಉಲ್ಲಂಘನೆ ತಡೆಗೆ GBA ಮಾರ್ಗಸೂಚಿ ಪ್ರಕಟ; ಬೆಂಗಳೂರಲ್ಲಿ ಇನ್ಮುಂದೆ ಮನೆ ತಳಪಾಯಕ್ಕೂ ಪ್ರಮಾಣ ಪತ್ರ ಕಡ್ಡಾಯ!
ಮಂಗಳವಾರ ರಾತ್ರಿ ಜಾರಕಿಹೊಳಿ ಜೊತೆ ಡಿಕೆಶಿ ಮಾತುಕತೆ ನಡೆಸಿದ್ದರು. ಈ ವೇಳೆ ತಮ್ಮ ಬೆಂಬಲಕ್ಕೆ ನಿಲ್ಲುವಂತೆ ಡಿಕೆಶಿ ಜಾರಕಿಹೊಳಿಗೆ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಡಿಕೆಶಿ ಭೇಟಿಯ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಜಾರಕಿಹೊಳಿ, ಶಿವಕುಮಾರ್ ಎಲ್ಲಾ ಸಚಿವರನ್ನು, ಶಾಸಕರನ್ನ ಭೇಟಿಯಾಗಿದ್ದಾರೆ. ನನಗಿರುವ ಮಾಹಿತಿ ಪ್ರಕಾರ ನಾನೇ ಕೊನೆಯವನು ಇರಬೇಕು. ಸಾಕಷ್ಟು ಬಾರಿ ಅವರು ಭೇಟಿಯಾಗಿದ್ದಾರೆ ಎಂದು ಹೇಳಿದ್ದರು.
ಡಿಕೆ ಸುರೇಶ್ ಹಿಂದೆ ಭೇಟಿಯಾಗಿದ್ದರು. ನಾವು ಅವರ ಮನೆಗೆ ಹೋಗಿ ಬಂದಿದ್ದೇವೆ. ಅವರಿಗೆ ಆಸೆ ಇರುತ್ತದೆ. ಮೊದಲ ದಿನದಿಂದ ಸಿಎಂ ಸ್ಥಾನದ ಆಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಅಂದು ಸಿದ್ದರಾಮಯ್ಯನವರನ್ನು ಸಿಎಂ ಎಂದು ಹೈಕಮಾಂಡ್ ಘೋಷಿಸಿತ್ತು. ಈಗಲೂ ಹೈಕಮಾಂಡ್ ತೀರ್ಮಾನ ಮಾಡಬೇಕು ಎಂದರು.
ಬದಲಾವಣೆ ಪರ್ವ ಏನಿಲ್ಲ. ಸಹಜವಾಗಿ ಡಿಕೆಶಿ ಎಲ್ಲರನ್ನೂ ಭೇಟಿ ಮಾಡಿದ್ದಾರೆ. ಕೆಲವರನ್ನು ಮನೆಗೆ ಕರೆಸಿ ಭೇಟಿ ಆಗಿದ್ದಾರೆ, ಇನ್ನೂ ಕೆಲವರನ್ನು ಭೇಟಿ ಮಾಡಿದ್ದಾರೆ ಎಂದು ತಿಳಿಸಿದರು.

