ಗುವಾಹಟಿ: ದಕ್ಷಿಣ ಆಫ್ರಿಕಾ ವಿರುದ್ಧ ಬರ್ಸಪರ ಕ್ರೀಡಾಂಗಣದಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲಿಗೆ ತುತ್ತಾದ ಬೆನ್ನಲ್ಲೇ ಗೌತಮ್ ಗಂಭೀರ್ (Gautam Gambhir) ಅವರ ಮುಖ್ಯಕೋಚ್ ಕೋಚ್ ಹುದ್ದೆ ತೊರೆಯುತ್ತಾರಾ? ಅನ್ನೋ ಪ್ರಶ್ನೆ ಎದ್ದಿದೆ. ಇದಕ್ಕೆ ಸುದ್ದಿಗೋಷ್ಠಿಯಲ್ಲಿ ಗಂಭೀರ್ ನೀಡಿದ ಹೇಳಿಕೆ ಪುಷ್ಠಿ ನೀಡಿದಂತಿದೆ.
ಹೌದು. 2ನೇ ಟೆಸ್ಟ್ ಪಂದ್ಯ (Test Cricket Match) ಸೋಲಿನ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಂಭೀರ್, ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸುವಾಗ ನಾನು ಮುಖ್ಯವಲ್ಲ ಭಾರತೀಯ ಕ್ರಿಕೆಟ್ (Indian Cricket) ಮುಖ್ಯ ಎಂದು ಹೇಳಿದ್ದಾರೆ.
ಇನ್ನೂ ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಹುದ್ದೆಗೆ ನೀವು ಸರಿಯಾದ ವ್ಯಕ್ತಿ ಅಂತ ಭಾವಿಸ್ತೀರಾ? ಎಂಬ ಪತ್ರಕರ್ತರ ಮತ್ತೊಂದು ಪ್ರಶ್ನೆಗೆ ಉತ್ತರಿಸಿ, ನನ್ನ ಭವಿಷ್ಯ ನಿರ್ಧರಿಸೋದು ಬಿಸಿಸಿಐಗೆ ಬಿಟ್ಟಿದ್ದು, ಆದ್ರೆ ಇಂಗ್ಲೆಂಡ್‌ನಲ್ಲಿ (England) ಫಲಿತಾಂಶ ತಂದುಕೊಟ್ಟ, ಚಾಂಪಿಯನ್ಸ್ ಟ್ರೋಫಿಗೆ ಕೋಚ್ ಆಗಿದ್ದ ಅದೇ ವ್ಯಕ್ತಿ ನಾನು ಅನ್ನೋದನ್ನ ನೆನಪಿನಲ್ಲಿಡಿ ಎಂದು ತೀಕ್ಷ್ಣವಾಗಿ ಹೇಳಿದ್ರು. ಇದೇ ವರ್ಷ ನಡೆದ ಇಂಗ್ಲೆಂಡ್ ಟೆಸ್ಟ್ ಸಿರೀಸ್ ಅನ್ನು 2-2 ರಲ್ಲಿ ಭಾರತ ಡ್ರಾ ಮಾಡಿಕೊಂಡಿತ್ತು. ಅಲ್ಲದೇ ಚಾಂಪಿಯನ್ಸ್ ಟ್ರೋಫಿಯಲ್ಲಿ ಒಂದೂ ಪಂದ್ಯ ಸೋಲದೇ ಪಟ್ಟ ಅಲಂಕರಿಸಿತ್ತು.

ಮುಂದುವರಿದು… ನಾವು ಇನ್ನೂ ಉತ್ತಮವಾಗಿ ಕ್ರಿಕೆಟ್ ಆಡಬೇಕಿದೆ. ಏಕೆಂದ್ರೆ ಟೆಸ್ಟ್ ಕ್ರಿಕೆಟ್ ಆಡಲು ಅಬ್ಬರಿಸುವ, ಪ್ರತಿಭಾನ್ವಿತ ಕ್ರಿಕೆಟಿಗರ ಅಗತ್ಯವಿಲ್ಲ. ನಮಗೆ ಬೇಕಾಗಿರುವುದು ಸೀಮಿತ ಕೌಶಲ್ಯ ಹೊಂದಿರುವ ಕಠಿಣ ಪಾತ್ರಗಳು. ಅವರು ಉತ್ತಮ ಟೆಸ್ಟ್ ಕ್ರಿಕೆಟಿಗರಾಗುತ್ತಾರೆ ಎಂದರು.
95ಕ್ಕೆ 1 ವಿಕೆಟ್ ಇತ್ತು. ಅದೇ 127 ರನ್‌ಗಳಿಗೆ 7 ವಿಕೆಟ್ ಹೋಗಿತ್ತು, ಇದು ಸ್ವೀಕಾರಾರ್ಹವಲ್ಲ. ಇದಕ್ಕಾಗಿ ನಾನು ಯಾರನ್ನೂ ದೂಷಿಸಲ್ಲ. ಜೊತೆಗೆ ಮುಂದೆ ಈ ತಪ್ಪು ಮಾಡುವುದಿಲ್ಲ ಎಂದ ಅಂತ ತಿಳಿಸಿದ್ರು.
ಅತೀ ಕೆಟ್ಟ ಸೋಲು
ತವರಿನಲ್ಲೇ ಭಾರತ ತಂಡವನ್ನ 0-2 ಅಂತದಲ್ಲಿ ಸೋಲಿಸುವ ಮೂಲಕ ಟೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡ ಟೆಸ್ಟ್ ಸರಣಿಯನ್ನ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಇದರೊಂದಿಗೆ 27 ವರ್ಷಗಳ ಬಳಿಕ ಟೆಸ್ಟ್ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿದ್ದ ಆಫ್ರಿಕಾ ತಂಡ 25 ವರ್ಷಗಳ ಬಳಿಕ ಭಾರತದ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಸಾಧನೆ ಮಾಡಿದೆ.

ಇದು ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತ ತಂಡ ತವರಿನಲ್ಲಿ ಅನುಭವಿಸುತ್ತಿರುವ ಮೂರನೇ ವೈಟ್ ವಾಶ್. ಪ್ರವಾಸಿ ದಕ್ಷಿಣ ಆಫ್ರಿಕಾದ ವಿರುದ್ಧ ಕೋಲ್ಕತಾದಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 30 ರನ್ ಗಳ ಆಘಾತಕಾರಿ ಸೋಲನುಭವಿಸಿತ್ತು. ಇದೀಗ ಗುವಾಹಟಿಯಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಅಧಿಕಾರಯುತವಾಗಿ 408 ರನ್ ಗಳ ಗೆಲುವು ಸಾಧಿಸಿದೆ. ಈ ಮೂಲಕ ಪ್ರವಾಸಿ ತಂಡ ಸರಣಿ ಗೆದ್ದು ಇತಿಹಾಸ ನಿರ್ಮಿಸಿದೆ.
ಹಿಂದೆಂದೂ ನೋಡ ಕೆಟ್ಟ ದಾಖಲೆಗಳು ಹೆಗಲಿಗೆ
ಹೌದು ಕಳೆದ ವರ್ಷ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ರೇಸ್‌ನಲ್ಲಿ ಭಾರತ ದೀರ್ಘ ಕಾಲದ ವರೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ನಂ.1 ಪಟ್ಟ ಕಾಯ್ದುಕೊಂಡಿತ್ತು. ಅಲ್ಲದೇ ಬಲಿಷ್ಠ ಟೀಂ ಇಂಡಿಯಾವನ್ನ ಸೋಲಿಸುವುದು ಸುಲಭದ ಮಾತಾಗಿರಲಿಲ್ಲ. ಆದ್ರೆ ಈ ವರ್ಷ ಅತ್ಯಂತ ಹೀನಾಯ ಸೋಲುಗಳನ್ನು ಕಂಡಿರುವ ತಂಡ ಫಸ್ಟ್ ಟೈಮ್ ಹಲವು ಕೆಟ್ಟ ದಾಖಲೆಗಳನ್ನ ಹೆಗಲಿಗೇರಿಸಿಕೊಂಡಿದೆ. ಅವುಗಳ ಪಟ್ಟಿ ನೋಡೋದಾದ್ರೆ…
- 25 ವರ್ಷಗಳಲ್ಲಿ ಫಸ್ಟ್ ಟೈಮ್ ಭಾರತ 2 ಆವೃತ್ತಿಗಳಲ್ಲಿ 5 ಟೆಸ್ಟ್ ಸೋಲು ಕಂಡಿದೆ.
- 66 ವರ್ಷಗಳಲ್ಲಿ ಫಸ್ಟ್ ಟೈಮ್ ಭಾರತ 7 ಪಂದ್ಯಗಳಲ್ಲಿ 5 ಟೆಸ್ಟ್ ಪಂದ್ಯ ಸೋತಿದೆ
- ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತಿದೊಡ್ಡ ಸೋಲು
- 30 ವರ್ಷಗಳಲ್ಲಿ ಫಸ್ಟ್ ಟೈಮ್ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಶೂನ್ಯ ವೈಯಕ್ತಿಕ ಶತಕ ದಾಖಲಿಸಿದೆ. ಯಾರೋಬ್ಬರೂ ಶತಕ ಹೊಡೆದಿಲ್ಲ.

ಸಂಕ್ಷಿಪ್ತ ಸ್ಕೋರ್
* ದಕ್ಷಿಣ ಆಫ್ರಿಕಾ ಪ್ರಥಮ ಇನ್ನಿಂಗ್ಸ್ 489
ಭಾರತ ಪ್ರಥಮ ಇನ್ನಿಂಗ್ಸ್ 201
* ದಕ್ಷಿಣ ಆಫ್ರಿಕಾ ದ್ವಿತೀಯ ಇನ್ನಿಂಗ್ಸ್ 260/5 ಡಿಕ್ಲೇರ್
ಭಾರತ ದ್ವಿತೀಯ ಇನ್ನಿಂಗ್ಸ್ 140/10

