– ನಮ್ಮ ಮೇಲೆಯೇ ಷಡ್ಯಂತ್ರ ಕೇಸ್ ಹಾಕಲಾಗಿತ್ತು
ಮೈಸೂರು: ತನಿಖಾಧಿಕಾರಿಗಳು ಸಾಕ್ಷಿಯನ್ನು ಕೊಡುವಲ್ಲಿ ಬಹಳಷ್ಟು ಎಡವಿದ್ದರು. ಆರೋಪಿಗಳನ್ನು ರಕ್ಷಿಸಲು ಸರಿಯಾದ ದಾಖಲೆಗಳನ್ನು ಸಲ್ಲಿಸಿರಲಿಲ್ಲ. ನಾವು ಪ್ರಶ್ನೆ ಮಾಡಿದ್ದಕ್ಕೆ ನಮ್ಮ ಮೇಲೆಯೇ ಷಡ್ಯಂತ್ರದ ಕೇಸ್ ಹಾಕಿದ್ದರು ಎಂದು ಒಡನಾಡಿ ಸಂಸ್ಥೆಯ ಪರಶು ಹೇಳಿದ್ದಾರೆ.
ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀ ಖುಲಾಸೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಈಗ ನಾನು ಯಾರನ್ನು ದೂಷಿಸಲು ಹೋಗುವುದಿಲ್ಲ. ನ್ಯಾಯಾಲಯ ಏನು ಹೇಳಿದೆಯೋ ಆ ತೀರ್ಪನ್ನು ಓದಬೇಕು. ವಕೀಲರ ಜೊತೆ ಸೇರಿ ಚರ್ಚೆ ಮಾಡಿ ಪ್ರತಿಕ್ರಿಯೆ ನೀಡುತ್ತೇನೆ ಎಂದು ತಿಳಿಸಿದರು.
ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿತ್ತು. ಮಕ್ಕಳ ಧ್ವನಿಯನ್ನು ಸರ್ಕಾರ ಕೇಳಬೇಕಿತ್ತು. ಆದರೆ ಈ ಪ್ರಕರಣವನ್ನು ದುರ್ಬಲ ಮಾಡುತ್ತಲೇ ಬಂದಿದ್ದರು. ವಿಚಾರಣಾ ಹಂತದಲ್ಲೇ ಈ ಪ್ರಕರಣವನ್ನು ದುರ್ಬಲ ಮಾಡಿದ್ದು ಗೊತ್ತಾಗಿತ್ತು. ಹಲವಾರು ಲೋಪಲೋಷವನ್ನು ಎತ್ತಿದ ನಮ್ಮ ಮೇಲೆಯೇ ಷಡ್ಯಂತ್ರ ಕೇಸ್ ಹಾಕಲಾಗಿತ್ತು ಎಂದು ಹೇಳಿದರು. ಇದನ್ನೂ ಓದಿ: ಪೋಕ್ಸೋ ಪ್ರಕರಣದಲ್ಲಿ ಬಿಗ್ ರಿಲೀಫ್ – ಮುರುಘಾ ಶ್ರೀ ನಿರ್ದೋಷಿ
ಮುರುಘಾ ಮಠದ (Murugha Mutt) ಹಾಸ್ಟೆಲ್‌ನ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ದಾಖಲಾಗಿದ ಪೋಕ್ಸೊ ಪ್ರಕರಣದಲ್ಲಿ ಮುರುಘಾ ಶ್ರೀ ನಿರ್ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ.
2022ರ ಆಗಸ್ಟ್ 26 ರಂದು ಮೈಸೂರಿನ (Mysuru) ನಜರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 3 ವರ್ಷಗಳ ಸುದೀರ್ಘ ತನಿಖೆ ಬಳಿಕ ಚಿತ್ರದುರ್ಗದ 2ನೇ ಜಿಲ್ಲಾ ಅಪರ ಮತ್ತು ಸತ್ರ ನ್ಯಾಯಾಲಯದ ನ್ಯಾ.ಗಂಗಾಧರಪ್ಪ ಚನ್ನಬಸಪ್ಪ ಹಡಪದ್ ಅವರಿದ್ದ ಪೀಠ ನಿರ್ದೋಷಿ ಅಂತ ತೀರ್ಪು ಪ್ರಕಟಿಸಿದೆ.

