– ಭಾರತ ಎಂಟ್ರಿಗೂ ಮೊದಲು ಪಾಕ್‌ನಲ್ಲಿ ಪ್ರಯಾಣ
ಲಕ್ನೋ: ಭಾರತಕ್ಕೆ (India) ಅಕ್ರಮ ಪ್ರವೇಶ ಮಾಡಿ ಗಡಿಯ ಸೂಕ್ಷ್ಮ ಪ್ರದೇಶಗಳನ್ನು ಚಿತ್ರೀಕರಿಸುತ್ತಿದ್ದ ಚೀನಾದ ಪ್ರಜೆಯನ್ನು (Chinese Man) ಬಂಧಿಸಲಾಗಿದೆ.
ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ರುಪೈದಿಹಾ ಚೆಕ್ ಪೋಸ್ಟ್‌ನಲ್ಲಿ ಸೋಮವಾರ 49ರ ಚೀನೀ ಪ್ರಜೆಯನ್ನು ಬಂಧಿಸಲಾಗಿದೆ ಎಂದು ಸಶಸ್ತ್ರ ಸೀಮಾ ಬಲ್ (ಎಸ್‌ಎಸ್‌ಬಿ) ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ವ್ಯಕ್ತಿ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದ. ಅವನ ಬಳಿ ಪಾಕಿಸ್ತಾನಿ, ಚೈನೀಸ್ ಮತ್ತು ನೇಪಾಳಿ ಕರೆನ್ಸಿಗಳಿದ್ದವು ಎಂದು ವರದಿಯಾಗಿದೆ. ಇದನ್ನೂ ಓದಿ: ಪಾಕ್ ಅರೆಸೈನಿಕ ಪಡೆ ಪ್ರಧಾನ ಕಚೇರಿ ಆವರಣದಲ್ಲಿ ಸೂಸೈಡ್ ಬಾಂಬ್ ದಾಳಿ – ಮೂವರು ಸಾವು
ಚೀನಾದ ಹುನಾನ್ ಪ್ರಾಂತ್ಯದ ಲಿಯು ಕುನ್ಜಿಂಗ್ ಎಂಬಾತನನ್ನು ಎಸ್‌ಎಸ್‌ಬಿಯ 42 ನೇ ಬೆಟಾಲಿಯನ್‌ನ ಸಿಬ್ಬಂದಿ ಬಂಧಿಸಿದ್ದಾರೆ. ನೇಪಾಳದಿಂದ ಭಾರತಕ್ಕೆ ಅಕ್ರಮ ಪ್ರವೇಶ ಮಾಡಿ, ಗಡಿಯ ಸೂಕ್ಷ್ಮ ಪ್ರದೇಶದ ಬಳಿ ಚಿತ್ರೀಕರಣ ಮಾಡುತ್ತಿರುವುದನ್ನು ಕರ್ತವ್ಯದಲ್ಲಿದ್ದ ಅಧಿಕಾರಿ ಗಮನಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ, ಆತನ ಬಳಿ ಯಾವುದೇ ಮಾನ್ಯ ಪ್ರವೇಶ ದಾಖಲೆಗಳು ಇರಲಿಲ್ಲ ಎಂಬುದು ತಿಳಿದುಬಂದಿದೆ.
ಭದ್ರತಾ ತಂಡಗಳು ಆತನಿಂದ ಮೂರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿವೆ. ಒಂದು ಮೊಬೈಲ್‌ನಲ್ಲಿ ಭಾರತದ ಪ್ರದೇಶದೊಳಗಿನ ಹಲವಾರು ಸಂರಕ್ಷಿತ ಪ್ರದೇಶಗಳ ವೀಡಿಯೊಗಳಿವೆ. ಆತನ ಬಳಿ ಇಂಗ್ಲಿಷ್‌ನಲ್ಲಿ ಮುದ್ರಿತವಾದ ನೇಪಾಳದ ನಕ್ಷೆಯೂ ಇತ್ತು. ಖುಂಜಿಂಗ್ ಕೇವಲ ಸನ್ನೆಗಳ ಮೂಲಕ ಸಂವಹನ ನಡೆಸುತ್ತಿದ್ದ. ತನಗೆ ಇಂಗ್ಲಿಷ್, ಹಿಂದಿ ಅರ್ಥವಾಗುವುದಿಲ್ಲ ಎಂದು ಹೇಳಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ವಿದೇಶಿ ಪ್ರಜೆಯನ್ನು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ರುಪೈದಿಹಾ ಪೊಲೀಸ್ ಠಾಣೆಯಲ್ಲಿ ವಿದೇಶಿಯರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಚೀನಾದ ಪ್ರಜೆ ನ.15 ರಂದು ಪ್ರವಾಸಿ ವೀಸಾದಲ್ಲಿ ಚೀನಾದಿಂದ ನೇಪಾಳಕ್ಕೆ ಪ್ರಯಾಣಿಸಿದ್ದ. ನ.22 ರಂದು ನೇಪಾಳಗುಂಜ್‌ಗೆ ಪ್ರಯಾಣ ಬೆಳೆಸಿದ್ದ. ಎರಡು ದಿನಗಳ ನಂತರ ನ.24 ರಂದು ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದ. ಇದನ್ನೂ ಓದಿ: ಇಥಿಯೋಪಿಯಾದಲ್ಲಿ ಜ್ವಾಲಾಮುಖಿ ಸ್ಫೋಟ – ಭಾರತದಲ್ಲಿ ವಿಮಾನ ಸಂಚಾರ ವ್ಯತ್ಯಯ

