ಲಕ್ನೋ: ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಇಂದು ಅಯೋಧ್ಯೆಯ ರಾಮಮಂದಿರದ (Ayodhya Ram Mandir) ಮೇಲೆ ಕೇಸರಿ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಐದು ವರ್ಷದ ಬಳಿಕ ಅಯೋಧ್ಯೆ ರಾಮಮಂದಿರ ನಿರ್ಮಾಣ ಪೂರ್ಣಗೊಂಡಿದೆ. ಇದರ ಸಂಕೇತವಾಗಿ ಇಂದು ಅಯೋಧ್ಯೆಗೆ ಪ್ರಧಾನಿ ಮೋದಿ ಭೇಟಿ ನೀಡಿ, ರಾಮಮಂದಿರ ಗೋಪುರ ಮೇಲೆ 22 ಅಡಿ ಎತ್ತರದ ಭಗವಾ ಧ್ವಜಾರೋಹಣ ನೆರವೇರಿಸಲಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣ – ನಾಳೆ ಮೋದಿಯಿಂದ ಧಾರ್ಮಿಕ ಧ್ವಜಾರೋಹಣ
ಪ್ರಧಾನಿ ಮೋದಿ ಅವರು 22 ಅಡಿ ಎತ್ತರದ ಧಾರ್ಮಿಕ ಧ್ವಜಾರೋಹಣ ಮಾಡಿ, ಸಾಧುಗಳು, ಗಣ್ಯರು ಮತ್ತು ರಾಮ ಜನ್ಮಭೂಮಿ ಟ್ರಸ್ಟ್ ಸದಸ್ಯರ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಿದ್ದಾರೆ.

ತ್ರಿಕೋನ ಕೇಸರಿ ಧ್ವಜವು ಸೂರ್ಯನ ಸಂಕೇತವನ್ನು ಹೊಂದಿದೆ. ಇದು ಶಾಶ್ವತ ಶಕ್ತಿ, ದೈವಿಕ ತೇಜಸ್ಸು, ಸದ್ಗುಣ ಮತ್ತು ಜ್ಞಾನೋದಯ ಮತ್ತು ಭಗವಾನ್ ರಾಮನಿಗೆ ಸಂಬಂಧಿಸಿದ ಎಲ್ಲಾ ಗುಣಗಳನ್ನು ಪ್ರತಿನಿಧಿಸುತ್ತದೆ.
‘ಓಂ’ ಚಿಹ್ನೆಯನ್ನು ಸಹ ಧ್ವಜ ಒಳಗೊಂಡಿದೆ. ಧ್ವಜವನ್ನು ಸಾಂಪ್ರದಾಯಿಕ ಉತ್ತರ ಭಾರತದ ನಾಗರ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾದ ‘ಶಿಖರ’ದ ಮೇಲೆ ಇರಿಸಲಾಗುವುದು. ಈ ಕಾರ್ಯಕ್ರಮವು ರಾಮ ಮತ್ತು ಸೀತೆಯ ವಿವಾಹ ಪಂಚಮಿಯ ಮುಹೂರ್ತಕ್ಕೆ ಹೊಂದಿಕೆಯಾಗುವ ದಿನದಂದು ನಡೆಯಲಿದೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.
‘ಈ ದಿನಾಂಕವು 17 ನೇ ಶತಮಾನದಲ್ಲಿ ಅಯೋಧ್ಯೆಯಲ್ಲಿ 48 ಗಂಟೆಗಳ ಕಾಲ ನಿರಂತರ ಧ್ಯಾನ ಮಾಡಿದ್ದ ಒಂಬತ್ತನೇ ಸಿಖ್ ಗುರು ಗುರು ತೇಜ್ ಬಹದ್ದೂರ್ ಅವರ ಹುತಾತ್ಮ ದಿನವನ್ನು ಸಹ ಸೂಚಿಸುತ್ತದೆ’ ಎಂದು ಪ್ರಧಾನಿ ಮೋದಿ ಅವರ ಕಚೇರಿಯ ಹೇಳಿಕೆ ತಿಳಿಸಿದೆ.
ಪ್ರಸಿದ್ಧ ಕಾಶಿ ವಿದ್ವಾಂಸ ಗಣೇಶ್ವರ್ ಶಾಸ್ತ್ರಿ ಅವರ ಮಾರ್ಗದರ್ಶನದಲ್ಲಿ ಅಯೋಧ್ಯೆ, ಕಾಶಿ ಮತ್ತು ದಕ್ಷಿಣ ಭಾರತದ 108 ಆಚಾರ್ಯರು ಈ ಆಚರಣೆಗಳನ್ನು ನೆರವೇರಿಸಲಿದ್ದಾರೆ. ಮಧ್ಯಾಹ್ನ 2:30 ರವರೆಗೆ QR-ಕೋಡೆಡ್ ಪಾಸ್‌ಗಳನ್ನು ಹೊಂದಿರುವ ಆಹ್ವಾನಿತ ಅತಿಥಿಗಳಿಗೆ ಮಾತ್ರ ದೇವಾಲಯ ಪ್ರವೇಶಿಸಬಹುದು.
ನಗರವನ್ನು ಅಲಂಕರಿಸಲಾಗಿದೆ, ರಸ್ತೆಗಳನ್ನು ಸ್ವಚ್ಛಗೊಳಿಸಲಾಗಿದೆ, ಹೊಸ ನಿಲ್ದಾಣ ಫಲಕಗಳನ್ನು ಸ್ಥಾಪಿಸಲಾಗಿದೆ, ನೈರ್ಮಲ್ಯ ತಂಡಗಳು ವ್ಯಾಪಕವಾದ ನಿರ್ವಹಣಾ ಕಾರ್ಯವನ್ನು ಕೈಗೊಂಡಿವೆ. ಐತಿಹಾಸಿಕ ಕಾರ್ಯಕ್ರಮಕ್ಕಾಗಿ ಟ್ರಸ್ಟ್ ಸುಮಾರು 6,000 ಅತಿಥಿಗಳನ್ನು ಆಹ್ವಾನಿಸಿದೆ.
2024ರ ಜನವರಿ 22 ರಂದು ಪ್ರಧಾನಿ ಮೋದಿ ಅವರು ರಾಮಲಲ್ಲಾ ವಿಗ್ರಹದ ಪ್ರತಿಷ್ಠಾಪನೆ ನೆರವೇರಿಸಿದ್ದರು. ಸುಪ್ರೀಂ ಕೋರ್ಟ್ 2.77 ಎಕರೆ ವಿವಾದಿತ ಭೂಮಿಯನ್ನು ದೇವಾಲಯ ನಿರ್ಮಾಣಕ್ಕೆ ನೀಡಿದ ಸುಮಾರು ಒಂದು ವರ್ಷದ ನಂತರ, ಅಂದರೆ 2020ರ ಆಗಸ್ಟ್‌ನಲ್ಲಿ ಪ್ರಧಾನಿ ಮೋದಿ ರಾಮಮಂದಿರಕ್ಕೆ ಅಡಿಪಾಯ ಹಾಕಿದ್ದರು.

