ಡೆಹ್ರಾಡೂನ್: ಉತ್ತರಾಖಂಡದ (Uttarakhand) ಅಲ್ಮೋರಾದ ದಬಾರಾ ಗ್ರಾಮದ ಶಾಲೆಯ ಸಮೀಪವೇ ಅಪಾರ ಪ್ರಮಾಣದ ಸ್ಫೋಟಕ ಪತ್ತೆಯಾಗಿದೆ.
ಶಾಲೆ ಬಳಿಯ ಪೊದೆಯೊಂದರಲ್ಲಿ ಅನುಮಾನಾಸ್ಪದ ಪ್ಯಾಕೆಟ್‌ಗಳನ್ನು ಶಾಲೆಯ ಪ್ರಾಂಶುಪಾಲರು ಮೊದಲು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಪ್ಯಾಕೆಟ್‌ಗಳಲ್ಲಿ 20 ಕೆಜಿಗಿಂತ ಹೆಚ್ಚು ತೂಕದ 161 ಜೆಲಾಟಿನ್ ಕಡ್ಡಿಗಳು (Gelatin Sticks) ಪತ್ತೆಯಾಗಿವೆ. ಇದರಿಂದ ಪೊಲೀಸರು ಅಲರ್ಟ್ ಆಗಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ವೈಟ್ ಕಾಲರ್ ಭಯೋತ್ಪಾದನೆ ಮಾಡ್ಯೂಲ್ ಕೇಸ್ – ಜೆ&ಕೆ ಪೊಲೀಸರಿಂದ ಮತ್ತೊಬ್ಬ ಶಂಕಿತ ಅರೆಸ್ಟ್
ಇತ್ತೀಚೆಗೆ ದೆಹಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣದಲ್ಲಿ ಸುಮಾರು 3,000 ಕೆಜಿ ಸ್ಫೋಟಕಗಳು ಪತ್ತೆಯಾಗಿದ್ದವು. ಇದಾದ ಕೆಲವು ದಿನಗಳ ನಂತರ ಉತ್ತರಾಖಂಡದಲ್ಲಿ ಅಪಾರ ಪ್ರಮಾಣದ ಸ್ಫೋಟಕ ಪತ್ತೆಯಾಗಿದೆ. ಸ್ಥಳದಲ್ಲಿ ಉಧಮ್ ಸಿಂಗ್ ನಗರ ಮತ್ತು ನೈನಿತಾಲ್ ಜಿಲ್ಲೆಯ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳದಿಂದ ಪರಿಶೀಲನೆ ನಡೆಸಲಾಗಿದೆ. ಬಾಂಬ್ ನಿಷ್ಕ್ರಿಯ ದಳವು ಸ್ಫೋಟಕಗಳನ್ನು ಸಂಗ್ರಹಿಸಿ, ಅವುಗಳನ್ನು ಮುಚ್ಚಿ ಸುರಕ್ಷಿತ ಸ್ಥಳದಲ್ಲಿ ಇರಿಸಿದೆ.
ಜೆಲಾಟಿನ್ ಕಡ್ಡಿಗಳು ಗಣಿಗಾರಿಕೆ ಉದ್ದೇಶಗಳಿಗಾಗಿ ಬಂಡೆಗಳನ್ನು ಸ್ಫೋಟಿಸಲು ಸಾಮಾನ್ಯವಾಗಿ ಬಳಸಲಾಗುತ್ತದೆ. ಗ್ರಾಮಕ್ಕೆ ಸ್ಫೋಟಕಗಳನ್ನು ಯಾವ ಕಾರಣಕ್ಕೆ ತರಲಾಗಿದೆ ಎಂದು ತನಿಖೆ ಮಾಡಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ಸಂಬಂಧ ಸ್ಫೋಟಕ ವಸ್ತುಗಳ ಕಾಯ್ದೆ 1908ರ ಸೆಕ್ಷನ್ 4 (ಎ) ಮತ್ತು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 288ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಇದನ್ನೂ ಓದಿ: Delhi Blast | ಕಾರಿನಲ್ಲೇ ಕುಳಿತು ಬಾಂಬ್ ರೆಡಿ ಮಾಡಿದ್ದ ಉಗ್ರ ಉಮರ್
