– ಸಿನಿಮೀಯ ಸ್ಟೈಲ್‌ನಲ್ಲಿ ಕಾರು ಅಡ್ಡಗಟ್ಟಿ ಹಲ್ಲೆ ನಡೆಸಿ ರಾಬರಿ
ಚಾಮರಾಜನಗರ: ಬಂಡೀಪುರ ಅರಣ್ಯದೊಳಗಿನ ಪ್ರದೇಶದಲ್ಲಿ ದರೋಡೆಕೋರರು ಕೇರಳ ಮೂಲದ ಚಿನ್ನದ ವ್ಯಾಪಾರಿಯಿಂದ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಚಿನ್ನ ದರೋಡೆ ಮಾಡಿರುವ ಘಟನೆ ನಡೆದಿದೆ.
ಸಿನಿಮಾ ಸ್ಟೈಲ್‌ನಲ್ಲಿ ಎಂಟ್ರಿ ಕೊಟ್ಟ ದರೋಡೆಕೋರರು ಚಿನ್ನದ ವ್ಯಾಪಾರಿಗಳು ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಕಾರು ನಿಲ್ಲಿಸಿ ಹಲ್ಲೆ ಮಾಡಿ ಕಾರಿನಲ್ಲಿದ್ದ 1.2 ಕೆಜಿ ತೂಕದ ಚಿನ್ನವನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ. ಕಾರಿನ ನಂಬರ್ ಬೋರ್ಡ್ ಬಿದ್ದು ಹೋಗಿದ್ದು, ಮುಂಭಾಗ ಸ್ವಲ್ಪ ಭಾಗ ಜಖಂ ಆಗಿದೆ.
ವಿನು, ಸಮೀರ್ ಚಿನ್ನ ಕಳೆದುಕೊಂಡ ವ್ಯಾಪಾರಿಗಳು. ಇವರು ಬ್ರಿಜಾ ಕಾರಿನಲ್ಲಿ ಚಿನ್ನ ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಮೂರು ಕಾರಿನಲ್ಲಿ ಬಂದ ದರೋಡೆಕೋರರು, ರಸ್ತೆಯಲ್ಲಿ ಹೋಗುತ್ತಿದ್ದ ವ್ಯಾಪಾರಿಗಳ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಕಾರಿನ ಹಿಂಭಾಗ, ಮುಂಭಾಗಕ್ಕೆ ಡಿಕ್ಕಿ ಹೊಡೆದು ಕಾರು ನಿಲ್ಲಿಸುವಂತೆ ಮಾಡಿದ್ದಾರೆ. ಕಾರಿನಿಂದ ಕೆಳಗಿಳಿದು ಬಂದು ಕಾರಿನಲ್ಲಿದ್ದ ಇಬ್ಬರಿಗೂ ಹಲ್ಲೆ ನಡೆಸಿ ಚಿನ್ನ ದರೋಡೆ ಮಾಡಿದ್ದಾರೆ.
ಬಂಡೀಪುರದ ಮೂಲಕ ಹಾದು ಕೇರಳಕ್ಕೆ ಚಿನ್ನದ ವ್ಯಾಪಾರಿಗಳು ಹೊರಟಿದ್ದರು. ಕಾರಿನ ಹ್ಯಾಂಡ್ ಬ್ರೇಕ್ ಸ್ಥಳದ ಬಳಿ 1.2 ಕೆಜಿ ಚಿನ್ನಯಿಟ್ಟಿದ್ದರು. ಗುರುವಾರ ರಾತ್ರಿ ದರೋಡೆ ನಡೆದಿದೆ. ತಡವಾಗಿ ಗುಂಡ್ಲುಪೇಟೆ ಠಾಣೆಗೆ ಬಂದು ವ್ಯಾಪಾರಿಗಳು ದೂರು ಕೊಟ್ಟಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ಗುಂಡ್ಲುಪೇಟೆ ಪೊಲೀಸರು, ಸದ್ಯ ದರೋಡೆಗೆ ಒಳಗಾಗಿದ್ದ ಕಾರನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಎಸ್ಪಿ ಕವಿತಾ, ಎಎಸ್ಪಿ ಶಶಿಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣ ಕುರಿತು ಮಾತನಾಡಿದ ಗುಂಡ್ಲುಪೇಟೆಯಲ್ಲಿ ಎಸ್ಪಿ ಕವಿತಾ, ಕೇರಳ ಮೂಲದ ವಿನು ಎಂಬವರಿಂದ ದೂರು ದಾಖಲಾಗಿದೆ. ಕಡಕೊಳದಿಂದ ಚಿನ್ನ ತೆಗೆದುಕೊಂಡು ಕೇರಳ ಕಡೆಗೆ ಹೋಗುತ್ತಿದ್ದರು. ಈ ವೇಳೆ ಮೂರು ಕಾರಿನಲ್ಲಿ ಬಂದವರು ದರೋಡೆ ಮಾಡಿದ್ದಾರೆ. ಹಿಂದೆಯೂ ಕೂಡ ಗುಂಡ್ಲುಪೇಟೆ ಭಾಗದಲ್ಲಿ ದರೋಡೆ ನಡೆದಿತ್ತು. ಅದೇ ಗ್ಯಾಂಗ್ ಈ ದರೋಡೆ ಮಾಡಿದ್ಯಾ ಅನ್ನೋ ಬಗ್ಗೆ ಅನುಮಾನ ಇದೆ. ದರೋಡೆಕೋರರ ಪತ್ತೆಗೆ 5 ತಂಡಗಳ ರಚನೆ ಮಾಡಲಾಗಿದೆ. ಎಲ್ಲ ಕಡೆಯೂ ಸಿಸಿಟಿವಿ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
