ನವದೆಹಲಿ: ದುಬೈ ವೈಮಾನಿಕ ಪ್ರದರ್ಶನದ ವೇಳೆ ಎಚ್‌ಎಎಲ್ ನಿರ್ಮಿತ ತೇಜಸ್ ಯುದ್ಧ ವಿಮಾನ (ಎಲ್‌ಸಿಎ ಎಂಕೆ -1) ಪತನಗೊಂಡು, ಭಾರತೀಯ ವಾಯುಪಡೆಯ ಪೈಲಟ್ ವಿಂಗ್ ಕಮಾಂಡರ್ ನಮಾಂಶ್ ಸ್ಯಾಲ್ ಮೃತಪಟ್ಟಿದ್ದಾರೆಂದು ದೃಢಪಡಿಸಲಾಗಿದೆ.
ಕಾರ್ಯಕ್ರಮದ ಕೊನೆಯ ದಿನದಂದು 37 ವರ್ಷದ ಪೈಲಟ್ ಕೆಳಮಟ್ಟದ ಏರೋಬ್ಯಾಟಿಕ್ ಕುಶಲತೆಯನ್ನು ನಿರ್ವಹಿಸುತ್ತಿದ್ದಾಗ ಫೈಟರ್ ಜೆಟ್ ಪತನಗೊಂಡಿತು. ದುರದೃಷ್ಟಕರ ಘಟನೆಯಲ್ಲಿ ವಿಂಗ್ ಕಮಾಂಡರ್ ಸಾವಿಗೀಡಾಗಿದರು.

ವಿಂಗ್ ಕಮಾಂಡರ್ ನಮಾಂಶ್ ಸ್ಯಾಲ್ ಯಾರು?
ವಿಂಗ್ ಕಮಾಂಡರ್ ನಮಾಂಶ್ ಸ್ಯಾಲ್, ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯವರು. ಸ್ಯಾಲ್ ಅವರ ಪತ್ನಿ ಕೂಡ ಐಎಎಫ್ ಅಧಿಕಾರಿ. ಆರು ವರ್ಷದ ಮಗಳು ಮತ್ತು ಅವರ ಪೋಷಕರನ್ನು ಸ್ಯಾಲ್ ಅಗಲಿದ್ದಾರೆ.
ನಮಾಂಶ್ ಅವರು ಸುಜನ್‌ಪುರ್ ತಿರಾದ ಸೈನಿಕ್ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು. 2009ರ ಡಿಸೆಂಬರ್ 24 ರಂದು ಭಾರತೀಯ ವಾಯುಪಡೆಗೆ ನಿಯೋಜನೆಗೊಂಡಿದ್ದರು.
ನಮಾಂಶ್ ಅವರ ಪೋಷಕರು ಪ್ರಸ್ತುತ ತಮಿಳುನಾಡಿನ ಕೊಯಮತ್ತೂರು ಬಳಿಯ ಸುಲೂರು ವಾಯುಪಡೆ ನಿಲ್ದಾಣದಲ್ಲಿದ್ದಾರೆ. ಅವರ ಪತ್ನಿ IAF ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಕೋರ್ಸ್‌ಗಾಗಿ ಕೋಲ್ಕತ್ತಾದಲ್ಲಿದ್ದಾರೆ. ಅವರ ತಂದೆ ಜಗನ್ನಾಥ್ ಸ್ಯಾಲ್ ಭಾರತೀಯ ಸೇನೆಯ ವೈದ್ಯಕೀಯ ದಳದಲ್ಲಿ ಸೇವೆ ಸಲ್ಲಿಸಿದ್ದರು. ನಂತರ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡಿ, ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದಾರೆ ಎಂದು ಸ್ಯಾಲ್ ಅವರ ಸಂಬಂಧಿ ರಮೇಶ್ ಕುಮಾರ್ ತಿಳಿಸಿದ್ದಾರೆ.
ವಿಂಗ್ ಕಮಾಂಡರ್ ಸೈಲ್ ಅವರ ನಿಧನದ ಸುದ್ದಿ ಅವರ ತವರು ರಾಜ್ಯವನ್ನು ಆಘಾತಕ್ಕೆ ದೂಡಿದೆ. ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಪೈಲಟ್‌ನ ಚಿತ್ರವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ‘ದೇಶವು ಕರ್ತವ್ಯನಿಷ್ಠ ಮತ್ತು ಧೈರ್ಯಶಾಲಿ ಪೈಲಟ್ ಅನ್ನು ಕಳೆದುಕೊಂಡಿದೆ’ ಎಂದು ದುಃಖ ವ್ಯಕ್ತಪಡಿಸಿದ್ದಾರೆ.
ದುಬೈ ಏರ್ ಶೋನಲ್ಲಿ ಏನಾಯಿತು?
ವಿಶ್ವದ ಅತಿದೊಡ್ಡ ವೈಮಾನಿಕ ಪ್ರದರ್ಶನಗಳಲ್ಲಿ ಒಂದಾದ ದುಬೈ ಏರ್ ಶೋನಲ್ಲಿ ನಿಯಮಿತ ಏರೋಬ್ಯಾಟಿಕ್ ಪ್ರದರ್ಶನದ ಸಮಯದಲ್ಲಿ ಈ ಅವಘಡ ಸಂಭವಿಸಿದೆ. ಇಲ್ಲಿ 150 ಕ್ಕೂ ಹೆಚ್ಚು ದೇಶಗಳು ತಮ್ಮ ಏರೋಸ್ಪೇಸ್ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತಿವೆ. ಈ ಕಾರ್ಯಕ್ರಮವು ನವೆಂಬರ್ 17 ರಂದು ಪ್ರಾರಂಭವಾಯಿತು. ಅಂತಿಮ ದಿನದ ದೃಶ್ಯಗಳಲ್ಲಿ, ತೇಜಸ್ ಯುದ್ಧವಿಮಾನ ಪತನಗೊಂಡು ವಾಯುನೆಲೆ ಬೆಂಕಿ ಮತ್ತು ಹೊಗೆಯಿಂದ ಆವರಿಸಿರುವುದು ಕಂಡುಬಂದಿತು.
2016 ರಲ್ಲಿ IAF ಗೆ ಸೇರ್ಪಡೆಯಾದ ನಂತರ ಸ್ಥಳೀಯ ನಿರ್ಮಿತ ತೇಜಸ್ ಫೈಟರ್ ಜೆಟ್ ಅನ್ನು ಒಳಗೊಂಡ ಎರಡನೇ ಅಪಘಾತ ಇದಾಗಿದೆ.
