– ಯಕ್ಷಗಾನ ಕಲಾವಿದರಲ್ಲಿ ಸಲಿಂಗಕಾಮ ವಿವಾದ
– ಇದೊಂದು ಕೀಳುಮಟ್ಟದ, ಅಧಾರರಹಿತ, ಅವಹೇಳನಕಾರಿ ಹೇಳಿಕೆ
ಮಂಗಳೂರು: ಯಕ್ಷಗಾನ ಕಲಾವಿದರಲ್ಲಿ ಸಲಿಂಗಕಾಮ (Homosexuality) ಹೆಚ್ಚಾಗಿದೆ ಎಂದು ಹೇಳಿಕೆ ನೀಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ (Purushottama Bilimale) ವಿರುದ್ಧ ಖ್ಯಾತ ಸ್ತ್ರೀ ವೇಷಧಾರಿ ರವಿ ಅಲೆವೂರಾಯ (Ravi Alevooraya) ದೂರು ನೀಡಿದ್ದಾರೆ.
ಯಕ್ಷಗಾನ (Yakshagana) ಕಲಾವಿದರ ತೇಜೋವಧೆಗೈಯುವ ಮತ್ತು ನನ್ನ ಧಾರ್ಮಿಕ ಭಾವನೆಗಳಿಗೆ ಘಾಸಿಯುಂಟುಮಾಡುವ ಅಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಮಂಗಳೂರಿನ (Mangaluru) ಉರ್ವ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರಿನಲ್ಲಿ ಏನಿದೆ?
ಈ ಮೂಲಕ ತಮ್ಮಲ್ಲಿ ಅತ್ಯಂತ ವಿನಯಪೂರ್ವಕವಾಗಿ ಮತ್ತು ತೀವ್ರ ಮನನೊಂದು ದೂರು ಸಲ್ಲಿಸುತ್ತಿರುವ ನಾನು ಓರ್ವ ವೃತ್ತಿಪರ ಯಕ್ಷಗಾನ ಕಲಾವಿದನಾಗಿದ್ದು, ಕಳೆದ ಹಲವು ವರ್ಷಗಳಿಂದ ಈ ಪವಿತ್ರ ಕಲೆಯ ಸೇವೆಯಲ್ಲಿ ನನ್ನನ್ನು ನಾನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೇನೆ. ಭಾರತೀಯ ಸಂಸ್ಕೃತಿಯ ತವರೂರಾದ ಕರಾವಳಿ ಕರ್ನಾಟಕದ ಆಸ್ಮಿತ ಮತ್ತು ಭಕ್ತಿಯ ಪ್ರತೀಕವಾಗಿರುವ ಯಕ್ಷಗಾನ ಕಲೆಯ ಬಗ್ಗೆ ಇತ್ತೀಚೆಗೆ ವ್ಯಕ್ತವಾಗಿರುವ ಕೀಳುಮಟ್ಟದ ಅಭಿಪ್ರಾಯದ ವಿರುದ್ಧ ನನ್ನ ಬಲವಾದ ಆಕ್ಷೇಪಣೆಯನ್ನು ವ್ಯಕ್ತಪಡಿಸುತ್ತಿದ್ದು, ಯಕ್ಷಗಾನವು ಕೇವಲ ಮನರಂಜನೆಯ ಒಂದು ಮಾಧ್ಯಮವಾಗಿರದೇ ಅದು ನಮ್ಮ ಸನಾತನ ಧರ್ಮದ, ಪುರಾಣಗಳ ಮತ್ತು ಇತಿಹಾಸದ ಸಾರವನ್ನು ಜನಸಾಮಾನ್ಯರಿಗೆ ತಲುಪಿಸುವ ಒಂದು ಪವಿತ್ರವಾದ “ಗಂಡು ಕಲೆ” ಎಂದು ಪ್ರಖ್ಯಾತಿ ಪಡೆದಿದೆ. ಇದನ್ನೂ ಓದಿ: ದುಬೈ ಏರ್‌ಶೋನಲ್ಲಿ ತೇಜಸ್ ಫೈಟರ್ ಜೆಟ್ ಪತನ – ಪೈಲಟ್ ದುರ್ಮರಣ; ತನಿಖೆಗೆ ಆದೇಶ
ಕರಾವಳಿ ಕರ್ನಾಟಕದ ಸಾಂಸ್ಕೃತಿಕ ಅಸ್ಮಿತ ಮತ್ತು ದೈವಿಕ ಭಕ್ತಿಯ ಪ್ರತೀಕವಾಗಿರುವ ಯಕ್ಷಗಾನವು, ಕೇವಲ ಹೊಟ್ಟೆಪಾಡಿನ ವೃತ್ತಿಯಲ್ಲದೆ, ಅದು ನಮ್ಮ ಪಾಲಿಗೆ ಒಂದು ತಪಸ್ಸು ಮತ್ತು ದೈವಿಕ ಆರಾಧನೆಯಾಗಿದ್ದು, ನಾವು ರಂಗಸ್ಥಳವನ್ನು ಎರುವ ಮುನ್ನ ಬಣ್ಣದ ಮನೆಯಲ್ಲಿ ಶಾಸ್ರೋಕ್ತವಾಗಿ ಪೂಜೆ ಸಲ್ಲಿಸಿ, ರಾಮಾಯಣ, ಮಹಾಭಾರತ ಮತ್ತು ಭಾಗವತದಂತಹ ಪುರಾಣ ಪುಣ್ಯಕಥೆಗಳ ಪಾತ್ರಗಳನ್ನು ಸಾಕ್ಷಾತ್ ದೇವರೇ ಮೈಮೇಲೆ ಬಂದಂತೆ ಅವಾಹಿಸಿಕೊಂಡು,ಅತ್ಯಂತ ಶ್ರದ್ಧಾಭಕ್ತಿಗಳಿಂದ ನಿರ್ವಹಿಸುತ್ತೇವೆ ಹಾಗೂ ಸಮಾಜವು ಕೂಡ ನಮ್ಮನ್ನು ನಟರನ್ನಾಗಿ ನೋಡದೆ, ದೈವ ಸ್ವರೂಪಿಗಳೆಂದು ಗೌರವಿಸಿ ಪೂಜಿಸುವಂತಹ ಉನ್ನತ ಪರಂಪರೆ ಮತ್ತು ನಂಬಿಕೆಯನ್ನು ನಮ್ಮದಾಗಿಸಿಕೊಂಡಿದ್ದೇವೆ.
ಇಂತಹ ಪವಿತ್ರವಾದ ಕಲೆ ಮತ್ತು ಅದನ್ನು ನಂಬಿ ಬದುಕುತ್ತಿರುವ ನನ್ನಂತಹ ಸಹಸ್ರಾರು ಕಲಾವಿದರ ಬಗ್ಗೆ, ಲೇಖಕರಾದ ಪುರುಷೋತ್ತಮ ಬಿಳಿಮಲೆ ಅವರು ಇತ್ತೀಚೆಗೆ ನೀಡಿರುವ ಹೇಳಿಕೆಯು ನನ್ನ ಗಮನಕ್ಕೆ ಬಂದಿದೆ. ಯಾವುದೇ ಆಧಾರವಿಲ್ಲದೆ, ಸಾರ್ವಜನಿಕವಾಗಿ ಮಾತನಾಡುತ್ತಾ “ಯಕ್ಷಗಾನ ಕಲಾವಿದರಲ್ಲಿ ಸಲಿಂಗಕಾಮ ಹೆಚ್ಚಾಗಿದೆ” ಎಂಬ ಅತ್ಯಂತ ಕೀಳುಮಟ್ಟದ, ಅಧಾರರಹಿತ ಮತ್ತು ಅವಹೇಳನಕಾರಿ ಹೇಳಿಕೆಯನ್ನು ನೀಡಿರುವುದು ನನ್ನಂತಹ ಕಲಾವಿದನ ಮನಸ್ಸಿಗೆ ತೀವ್ರ ಆಘಾತ, ಅಪಮಾನ ಮತ್ತು ವೇದನೆಯನ್ನು ಉಂಟುಮಾಡಿದೆ. ಇದನ್ನೂ ಓದಿ: ಗೋಹತ್ಯೆ ನಿಷೇಧ ಕಾಯ್ದೆಯಿಂದ ಮುಸ್ಲಿಮರಿಗೆ ತೊಂದರೆಯಾಗ್ತಿದೆ, ವಾಪಸ್ ಪಡೆಯಿರಿ – ಪ್ರೊ.ರವಿವರ್ಮ ಕುಮಾರ್
ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಪ್ರಕಟವಾದ ಅವರ ಈ ಹೇಳಿಕೆಯು ಕೇವಲ ಒಬ್ಬ ವ್ಯಕ್ತಿಯ ವೈಯಕ್ತಿಕ ಅಭಿಪ್ರಾಯವಾಗಿರದೇ ಅದು ಉದ್ದೇಶಪೂರಿತವಾಗಿ ಒಂದು ನಿರ್ದಿಷ್ಟ ಕಲಾವಿದರ ಸಮುದಾಯವನ್ನು ಅವಮಾನಿಸುವ ಮತ್ತು ಹಿಂದೂ ದಾರ್ಮಿಕ ನಂಬಿಕೆಗಳನ್ನು ಲೇವಡಿ ಮಾಡುವ ಗಂಭೀರ ಸ್ವರೂಪದ ಕೃತ್ಯವಾಗಿದೆ ಎಂದು ನಾನು ಬಲವಾಗಿ ನಂಬಿದ್ದೇನೆ. ಯಾವುದೇ ವೈಜ್ಞಾನಿಕ ದಾಖಲೆಗಳಿಲ್ಲದೆ ಸಾರ್ವಜನಿಕವಾಗಿ ಇಂತಹ ಗಂಭೀರ ಆರೋಪ ಮಾಡುವುದು ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಸ್ಪಷ್ಟವಾದ ಕಾನೂನು ಉಲ್ಲಂಘನೆಯಾಗಿದ್ದು, ಇದು ಕಲಾವಿದರ ಮತ್ತು ಕಲಾಭಿಮಾನಿಗಳ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮೂಲಕ ಸೆಕ್ಷನ್ 299 (ಹಳೆಯ ಐಪಿಸಿ 295A) ರ ಅಡಿಯಲ್ಲಿ ಅಪರಾಧವಾಗಿರುತ್ತದೆ. ಕಲಾವಿದರ ಸಮುದಾಯದ ಬಗ್ಗೆ ಸಮಾಜದಲ್ಲಿ ದ್ವೇಷ ಅಥವಾ ಅನಗತ್ಯ ಸಂಶಯ ಹುಟ್ಟುಹಾಕುವ ಮೂಲಕ ಸಾರ್ವಜನಿಕ ನೆಮ್ಮದಿಯನ್ನು ಕದಡುವ ಹುನ್ನಾರವಾಗಿರುವುದರಿಂದ ಇದು ಸೆಕ್ಷನ್ 196 (ಹಳೆಯ ಐಪಿಸಿ 153A) ಮತ್ತು ಸಾರ್ವಜನಿಕವಾಗಿ ಕಿಡಿಗೇಡಿತನಕ್ಕೆ ಪ್ರಚೋದನೆ ನೀಡುವ ಸೆಕ್ಷನ್ 356 (ಹಳೆಯ ಐಪಿಸಿ 505) ರ ಅಡಿಯಲ್ಲಿಯೂ ಶಿಕ್ಷಾರ್ಹ ಕೃತ್ಯವಾಗಿದೆ.
ಆದ್ದರಿಂದ ನೊಂದ ಯಕ್ಷಗಾನ ಕಲಾವಿದನಾಗಿ ನಾನು ತಮ್ಮಲ್ಲಿ ಕಳಕಳಿಯಿಂದ ವಿನಂತಿಸಿಕೊಳ್ಳುವುದೇನೆಂದರೆ, ತಾವು ಈ ಕೂಡಲೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಯಕ್ಷಗಾನದಂತಹ ದೈವಿಕ ಕಲೆಯ ಘನತೆಯನ್ನು ಕಾಪಾಡಲು ಮತ್ತು ಸಮಾಜದಲ್ಲಿ ಕಲಾವಿದರಿಗಿರುವ ಗೌರವಕ್ಕೆ ಧಕ್ಕೆ ತಂದಿರುವ ಆರೋಪಿತರಾದ ಶ್ರೀ ಪುರುಷೋತ್ತಮ ಬಿಳಿಮಲೆ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಕಲಮುಗಳ ಅಡಿಯಲ್ಲಿ ಪ್ರಥಮ ವರ್ತಮಾನ ವರದಿ (FIR) ದಾಖಲಿಸಿಕೊಂಡು, ಕಠಿಣ ಕಾನೂನು ಕ್ರಮ ಜರುಗಿಸುವ ಮೂಲಕ ನಮಗೆ ನ್ಯಾಯ ಒದಗಿಸಿಕೊಡಬೇಕೆಂದು ಕೋರುತ್ತೇನೆ.
