ಧಾರವಾಡ: ಅದು ಇಬ್ಬರು ಮಕ್ಕಳು, ಮುದ್ದಾದ ಪತ್ನಿ ಹಾಗೂ ಹಿರಿಯ ತಂದೆ ಇದ್ದ ಸುಃಖ ಸಂಸಾರ. ಅದ್ಯಾರ ಕೆಟ್ಟ ಕಣ್ಣು ಆ ಕುಟುಂಬದ ಮೇಲೆ ಬಿತ್ತೋ ಗೊತ್ತಿಲ್ಲ. ಪ್ರಪಂಚದ ಜ್ಞಾನವೇ ಗೊತ್ತಿಲ್ಲದ ಮುಗ್ದ ಮನಸ್ಸಿನ ಮಕ್ಕಳೊಂದಿಗೆ ತಂದೆ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇನ್ನೂ ಬಾಳಿ ಬದುಕಬೇಕಿದ್ದ ಮಕ್ಕಳು ಶಾಲಾ ಸಮವಸ್ತ್ರದಲ್ಲೇ ಇಹಲೋಕ ತ್ಯೆಜಿಸಿದ್ದನ್ನ ಕಂಡು ಇಡೀ ಚಿಕ್ಕಮಲ್ಲಿಗವಾಡ ಗ್ರಾಮವೇ ಮಮ್ಮಲ ಮರುಗಿದೆ. ಎಂತಹ ತಂದೆ, ತಾಯಿಯಾದರೂ ಮಕ್ಕಳನ್ನು ಬದುಕಿಸಿ ತಾವು ಪ್ರಾಣ ಕೊಟ್ಟ ಉದಾಹರಣೆ ನಮ್ಮ ಕಣ್ಣಮುಂದೆ ಇವೆ. ಆದರೆ, ಈ ತಂದೆ ತನ್ನ ಮಕ್ಕಳ ಭವಿಷ್ಯವನ್ನೇ ಕೊಂದು ತಾನೂ ಇಹಲೋಕ ತ್ಯೆಜಿಸಿದ್ದಾನೆ.
ಧಾರವಾಡ ತಾಲೂಕಿನ ಚಿಕ್ಕ ಮಲ್ಲಿಗವಾಡ ಗ್ರಾಮದ ನಾರಾಯಣ ಶಿಂಧೆ ಎಂಬಾತ ತನ್ನ ತಂದೆ ವಿಠ್ಠಲ ಶಿಂಧೆ, ಮಕ್ಕಳಾದ ಶಿವಕುಮಾರ ಶಿಂಧೆ ಹಾಗೂ ಶ್ರೀನಿಧಿ ಶಿಂಧೆಯವರೊಂದಿಗೆ ಅದೇ ಗ್ರಾಮದ ಹೊರವಲಯದಲ್ಲಿರುವ ಯಲ್ಲಮನ ಬಾವಿಗೆ ಧುಮುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ವಿಧಾನಸೌಧ ಮುಂದೆ ನೇಪಾಳಿ ಗ್ಯಾಂಗ್ ಪುಂಡಾಟ – 11 ಆರೋಪಿಗಳು ಅರೆಸ್ಟ್

ಶಾಲಾ ಸಮವಸ್ತ್ರದಲ್ಲೇ ತನ್ನ ಮಕ್ಕಳನ್ನು ಕರೆದುಕೊಂಡು ಬಾವಿಗೆ ಹೋದ ತಂದೆ, ಕಿಂಚಿತ್ತೂ ಕರುಣೆ ಇಲ್ಲದಂತೆ ತನ್ನ ಮಕ್ಕಳನ್ನು ಭಾವಿಗೆ ನೂಕಿದ್ದಾನೆ. ಆನಂತರ ತನ್ನ ತಂದೆಯೊಂದಿಗೆ ತಾನೂ ಬಾವಿಗೆ ಧುಮುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತನ ಮಗ ಶಶಿಕುಮಾರ 6ನೇ ತರಗತಿಯಲ್ಲಿ ಓದುತ್ತಿದ್ದರೆ, ಮಗಳು ಶ್ರೀನಿಧಿ 5ನೇ ತರಗತಿಯಲ್ಲಿ ಓದುತ್ತಿದ್ದಳು. ನಾರಾಯಣ ಇಂದು ಬೆಳಿಗ್ಗೆ ತನ್ನ ತಂದೆ ವಿಠ್ಠಲ ಹಾಗೂ ಮಕ್ಕಳನ್ನು ಬೈಕ್ ಮೇಲೆ ಕರೆದುಕೊಂಡು ಹೋಗಿದ್ದ ಗ್ರಾಮದ ಹೊರವಲಯದಲ್ಲಿರುವ ಯಲ್ಲಮ್ಮನ ಬಾವಿಗೆ ತೆರಳಿ ಅದರ ಹತ್ತಿರವೇ ಬೈಕ್ ನಿಲ್ಲಿಸಿ ತನ್ನ ಮಕ್ಕಳು ಹಾಗೂ ತಂದೆಯನ್ನು ಬಾವಿ ಬಳಿ ಕರೆದುಕೊಂಡು ಹೋಗಿ ತನ್ನ ಹಠ ಸಾಧಿಸಿದ್ದಾನೆ. ಮೇಲ್ನೋಟಕ್ಕೆ ಇದು ಸಾಲದಿಂದ ಬೇಸತ್ತು ಮಾಡಿಕೊಂಡ ಆತ್ಮಹತ್ಯೆ ಎಂದು ನಾರಾಯಣನ ಪತ್ನಿ ಶಿಲ್ಪಾ ಹೇಳುತ್ತಾಳೆ.
ತನ್ನ ತಂದೆ, ತಾಯಿ ಸಾಲ ಎಷ್ಟೇ ಇರಲಿ. ಆ ಚಿಕ್ಕ ಮಕ್ಕಳು, ವೃದ್ಧ ತಂದೆಯ ಪಾತ್ರ ಇದರಲ್ಲಿ ಏನಿತ್ತು? ಜಗತ್ತನ್ನೇ ಅರಿಯದ ಮುದ್ದು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಳ್ಳುವ ಸಾಹಸಕ್ಕೆ ಕೈ ಹಾಕಿದ್ಯಾಕೆ ಎಂಬುದೇ ಪ್ರಶ್ನೆಯಾಗಿದೆ. ಸದ್ಯ ಸ್ಥಳಕ್ಕೆ ಭೇಟಿ ನೀಡಿದ್ದ ಎಸ್‌ಪಿ ಗುಂಜನ್ ಆರ್ಯ, ಈ ಬಗ್ಗೆ ಸೂಕ್ತ ತನಿಖೆ ನಡೆಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: 5ನೇ ಲೆಕ್ಕಪರಿಶೋಧನಾ ದಿವಸ – 2025 ಉದ್ಘಾಟಿಸಿದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್
ಸಾಲಬಾಧೆಯಿಂದಲೇ ತನ್ನ ಪತಿ ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದು ನಾರಾಯಣನ ಪತ್ನಿ ಹೇಳಿದ್ದು, ಈ ಬಗ್ಗೆಯೂ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.
