ಬೆಂಗಳೂರು: ಹೊಸ ಮನೆಗಳಿಗೆ ವಿದ್ಯುತ್ ಸಂಪರ್ಕ (Electricity) ನೀಡಲು ಬೆಸ್ಕಾಂ (BESCOM) ಅಧಿಕಾರಿಗಳು ವಿಳಂಬ ಮಾಡ್ತಿದ್ದಾರೆ. ಅಧಿಕಾರಿಗಳ ವಿಳಂಬ ನೀತಿಯಿಂದ ಗೃಹಪ್ರವೇಶಕ್ಕೆ ಸಿದ್ಧವಾಗಿರುವ ಮನೆಗಳಿಗೆ ಬೆಳಕಿನ ಭಾಗ್ಯವೇ ಸಿಗ್ತಿಲ್ಲ. ಇದರಿಂದ ವಿದ್ಯುತ್ ಸಂಪರ್ಕ ನೀಡಿ ಅಂತ ಮನೆ ಮಾಲೀಕರು ನಿತ್ಯ ಬೆಸ್ಕಾಂ ಕಚೇರಿಗಳಿಗೆ ಅಲೆದಾಡ್ತಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ವಿಳಂಬ ನೀತಿಗೆ ಹೊಸ ಮನೆ ಕಟ್ಟಿದ ಮನೆ ಮಾಲೀಕರು ಪರದಾಡ್ತಿದ್ದಾರೆ. ಹೊಸ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಿದ ಗ್ರಾಹಕರಿಗೆ ಅನುಮತಿ ಪತ್ರವನ್ನೇ ನೀಡುತ್ತಿಲ್ಲ. ಹೀಗಾಗಿ ಗೃಹ ಪ್ರವೇಶಕ್ಕೆ ಸಜ್ಜಾಗಿದ್ದ ಮನೆಗಳಲ್ಲಿ ಕತ್ತಲು ತುಂಬಿದ್ದು, ವಿದ್ಯುತ್ ಸಂಪರ್ಕ ನೀಡುವಂತೆ ನಿತ್ಯ ಬೆಸ್ಕಾಂ ಕಚೇರಿಗಳಿಗೆ ಅಲೆದಾಡ್ತಿದ್ದಾರೆ. ಇದನ್ನೂ ಓದಿ: ಮೈಸೂರು, ಮಂಡ್ಯ ಬಳಿಕ ಬೆಂಗಳೂರಿಗೂ ಕಾಲಿಟ್ಟ ಭ್ರೂಣಲಿಂಗ ಪತ್ತೆ ಜಾಲ!
ಬಸವನಗುಡಿ ಕ್ಷೇತ್ರ ಸೇರಿದಂತೆ ನಗರದ ಹಲವೆಡೆ ಹೊಸ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಮನೆ ಮಾಲೀಕರು ಅಗತ್ಯ ದಾಖಲೆಗಳ ಜೊತೆಗೆ ಆನ್ಲೈನ್, ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. 18 ಕಿಮಿ ವರೆಗೆ ಎಲ್ಟಿ1 ಮತ್ತು ಎಲ್ಟಿ 3 ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಿದ್ರೂ ಅಧಿಕಾರಿಗಳು ಮಾತ್ರ ಅನುಮತಿ ನೀಡ್ತಿಲ್ಲ. ಸರ್ವರ್ ಸಮಸ್ಯೆ, ಅಧಿಕಾರಿಗಳ ಗೈರು, ಹೀಗೆ ನಾನಾ ಕಾರಣಗಳನ್ನ ನೀಡಿ ಎರಡ್ಮೂರು ತಿಂಗಳಿಂದ ಅಲೆದಾಡಿಸ್ತಿದ್ದಾರೆ. ಬೆಸ್ಕಾಂ ಕಚೇರಿಗಳಿಗೆ ಅಲೆದಾಡಿ ಸುಸ್ತಾದ ಗ್ರಾಹಕರು ಸಿಎಂ, ಡಿಸಿಎಂ ವಿರುದ್ಧ ಕಿಡಿಕಾರಿದ್ದಾರೆ.
1200 ಚದರ ಅಡಿವರೆಗಿನ ಮನೆಗಳಿಗೆ ಓಸಿ-ಸಿಸಿ ಇಲ್ಲದೇ ವಿದ್ಯುತ್ ಸಂಪರ್ಕ ನೀಡಲು ರಾಜ್ಯ ಸಂಪುಟ ನಿರ್ಧರಿಸಿದ್ದರೂ ಬೆಸ್ಕಾಂನಂತಹ ಸಂಸ್ಥೆಗಳು ಅನುಷ್ಠಾನಗೊಳಿಸ್ತಿಲ್ಲ. ರಾಜ್ಯದಲ್ಲಿ 4 ಲಕ್ಷಕ್ಕೂ ಹೆಚ್ಚು ವಿದ್ಯುತ್ ಸಂಪರ್ಕದ ಅರ್ಜಿಗಳು ಬಾಕಿಯಿವೆ. ಬಿ ಖಾತಾ ಹೊಂದಿರುವ ಆಸ್ತಿ ಮಾಲೀಕರು ವಿದ್ಯುತ್ ಸಂಪರ್ಕ ವ್ಯವಸ್ಥೆಯಿಲ್ಲದೇ ಕತ್ತಲಲ್ಲೇ ಜೀವನ ಸಾಗಿಸುವಂತಾಗಿದೆ. ಸರ್ಕಾರ ಈ ಬಗ್ಗೆ ಗಮನಹರಿಸಬೇಕು ಅಂತ ಗ್ರಾಹಕರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ 7 ಕೋಟಿ ದರೋಡೆ ಕೇಸ್ – ಸಿದ್ದಾಪುರ ಠಾಣೆಯಲ್ಲಿ FIR ದಾಖಲು

