ಕೊಪ್ಪಳ: ಜಿಲ್ಲೆಯ ಗಂಗಾವತಿ (Gangavathi) ತಾಲೂಕಿನ ಆನೆಗೊಂದಿ ಗ್ರಾಮದ ತುಂಗಭದ್ರಾ ನದಿಯಲ್ಲಿರುವ ನವಬೃಂದಾವನ ಗಡ್ಡೆಯಲ್ಲಿ ಉತ್ತರಾಧಿ ಮಠ ಹಾಗೂ ರಾಯರ ಮಠದ ಶ್ರೀಗಳು ಭೇಟಿಯಾಗುವ ಮೂಲಕ ಉಭಯ ಮಠಗಳ ನಡುವೆ ಇದ್ದಂತ ಗೊಂದಲಗಳಿಗೆ ತೆರೆಎಳೆಯುವ ನಿರ್ಧಾರ ಮಾಡಿಕೊಂಡರು.
ನವಬೃಂದಾವನ ಗಡ್ಡೆಯಲ್ಲಿ ಇರುವ ಯತಿಗಳ ಬೃಂದಾವನ ವಿಚಾರಕ್ಕೆ ಹಾಗೂ ನವಬೃಂದಾವನ ಗಡ್ಡೆಯ ಮಾಲೀಕತ್ವದ ವಿಚಾರಕ್ಕೆ ಸಂಬಂಧಪಟ್ಟಂತೆ ಸುಮಾರು 50 ವರ್ಷಗಳಿಗೂ ಅಧಿಕ ಕಾಲದಿಂದ ವಿವಾದ ಮುಂದುವರೆದುಕೊಂಡು ಬಂದಿದೆ. ಆರಾಧನೆ ಸಮಯದಲ್ಲಿ ಕೋರ್ಟ್ ಮೊರೆ ಹೋಗುವ ಉಭಯ ಮಠದವರಿಗೆ ಒಂದೂವರೆ ದಿನ ಒಂದು ಮಠಕ್ಕೆ, ಇನ್ನುಳಿದ ಒಂದೂವರೆ ದಿನ ಇನ್ನೊಂದು ಮಠಕ್ಕೆ ಎಂದು ಕೋರ್ಟ್ ಆದೇಶ ನೀಡಿತ್ತು. ಸುಮಾರು ವರ್ಷಗಳಿಂದ ಇದು ಹೀಗೆ ನಡೆದುಕೊಂಡು ಬಂದಿದ್ದು, ಈ ಗೊಂದಲವನ್ನು ನಿವಾರಣೆ ಮಾಡಲು ಕೋರ್ಟ್ ಆದೇಶ ಮಾಡಿದೆ. ಈ ಕಾರಣಕ್ಕೆ ರಾಯರ ಮಠದ ಪೀಠಾಧಿಕಾರಿ ಸುಬುಧೇಂದ್ರ ಶ್ರೀಗಳು ಉತ್ತರಾಧಿ ಮಠದ ಪೀಠಾಧಿಪತಿ ಸತ್ಯಾತ್ಮ ತೀರ್ಥ ಶ್ರೀಗಳನ್ನು ಸ್ವಾಗತಿಸಿದರು. ಬಳಿಕ ನವಬೃಂದಾವನ ಗಡ್ಡೆಯಲ್ಲಿ ಒಟ್ಟಿಗೆ ಪದ್ಮನಾಭ ತೀರ್ಥರ ಬೃಂದಾವನಕ್ಕೆ ಮಹಾಮಂಗಳಾರತಿ ನೆರವೇರಿಸಿದರು.ಇದನ್ನೂ ಓದಿ: ಡಿ.27, 28 ಕೆಪಿಸಿಎಲ್ ಮರುಪರೀಕ್ಷೆ: ಕೆಇಎ
ಬಳಿಕ ರಾಯರ ಮಠದ ಪೀಠಾಧಿಪತಿಗಳಾದ ಸುಬುಧೇಂದ್ರ ಶ್ರೀಗಳು ಮಾತನಾಡಿ, ಸುಮಾರು 50 ವರ್ಷಗಳಿಗೂ ಅಧಿಕ ಕಾಲ ಇದ್ದಿದ್ದ ವಿವಾದಕ್ಕೆ ತೆರೆ ಎಳೆಯಬೇಕು ಎನ್ನುವ ಉದ್ದೇಶದಿಂದ ನಾವುಗಳು ಒಂದಾಗಿದ್ದೇವೆ. ಮೊದಲ ಹಂತದಲ್ಲಿ ಮದ್ರಾಸ್‌ನಲ್ಲಿ ಭೇಟಿಯಾಗಿ ಮಾತುಕತೆ ಮಾಡಲಾಗಿತ್ತು. ಎರಡನೇ ಹಂತದ ಮಾತುಕತೆ ಬೆಂಗಳೂರಿನಲ್ಲಿ ಮಾಡಲಾಗಿದೆ. ಸದ್ಯ ನವಬೃಂದಾವನ ಗಡ್ಡೆಯಲ್ಲಿ ಭೇಟಿಯಾಗುವ ಮೂಲಕ ವಿವಾದಕ್ಕೆ ತೆರೆ ಎಳೆಯಲು ಮುಂದಾಗುತ್ತಿದ್ದೇವೆ. ಈ ಭೇಟಿಯಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಮಠದವರು, ಅವರ ಮಠದವರು ಸೇರಿಕೊಂಡು ಮಾತುಕತೆ ಮಾಡಿ, ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳುತ್ತೇವೆ. ಬಳಿಕ ಅದನ್ನು ಕೋರ್ಟ್ ಗಮನಕ್ಕೆ ತರುವ ಕೆಲಸ ಮಾಡುತ್ತೇವೆ ಎಂದರು.
ಇನ್ನೂ ಶ್ರೀಗಳ ನಡುವೆ, ನಮ್ಮ ನಡುವೆ ಯಾವುದೇ ವ್ಯಕ್ತಿಗತವಾದ ದ್ವೇಷ, ವಿವಾದಗಳು ಇಲ್ಲ. ಕೆಲ ಲೌಖಿಕ ವಿಚಾರಕ್ಕಾಗಿ ಭಿನ್ನಾಭಿಪ್ರಾಯಗಳು ಇವೆ. ಅವುಗಳನ್ನು ಮಾತುಕತೆಯ ಮೂಲಕ ಬಗೆಹರಿಸಿ ಕೊಳ್ಳಲಾಗುವುದು. ಇನ್ನೂ ಹಿಂದೂ ಸಂಸ್ಕಾರ, ಸಂಸ್ಕೃತಿಯನ್ನು ಉಳಿಸುವ, ಬೆಳೆಸುವ ಕೆಲಸ ಮಾಡಬೇಕಾಗಿದೆ. ಹಿಂದೂ ಧರ್ಮದವರ ಮೇಲೆ ಸಾಕಷ್ಟು ಅಕ್ರಮಣಗಳು ನಡೆಯುವ ಮೂಲಕ ಹಿಂದೂ ಧರ್ಮವನ್ನು ನಾಶ ಮಾಡುವ ಸಂಚು ಮಾಡಿದ್ದಾರೆ. ಹಾಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ನಮ್ಮ ಸನಾತನ ಹಿಂದೂ ಧರ್ಮವನ್ನು ರಕ್ಷಣೆ ಮಾಡಬೇಕಾಗಿದೆ ಎಂದು ಹೇಳಿದರು.
ಉತ್ತರಾಧಿ ಮಠದ ಫೀಠಾಧಿಪತಿ ಶ್ರೀಸತ್ಯಾತ್ಮ ತೀರ್ಥ ಶ್ರೀಗಳು ಮಾತನಾಡಿ, ಉಭಯ ಮಠಗಳ ನಡುವೆ ಇರುವ ವಿವಾದಗಳಿಗೆ ಸುಮಾರು ವರ್ಷಗಳ ಇತಿಹಾಸ ಇದೆ. ಇತ್ಯರ್ಥ ಮಾಡಿಕೊಳ್ಳಲು ಕೆಲ ಸಮಯ ತೆಗೆದುಕೊಳ್ಳುತ್ತದೆ. ಆದಷ್ಟು ಬೇಗನೇ ಒಂದು ನಿರ್ಧಾರವನ್ನು ತೆಗೆದುಕೊಂಡು ಭಕ್ತರಿಗೆ ಒಳ್ಳೆಯ ಸಂದೇಶವನ್ನು ನೀಡಲಾಗುವುದು. ಧರ್ಮ ರಕ್ಷಣೆಗಾಗಿ ನಾವೆಲ್ಲರೂ ಒಂದಾಗುವುದು ತುಂಬಾ ಅವಶ್ಯಕತೆ ಇದೆ ಎಂದರು.ಇದನ್ನೂ ಓದಿ: Delhi Blast | ಕಾರಿನಲ್ಲೇ ಕುಳಿತು ಬಾಂಬ್ ರೆಡಿ ಮಾಡಿದ್ದ ಉಗ್ರ ಉಮರ್

