ನವದೆಹಲಿ: ಚೀನಾ ಸೇರಿದಂತೆ ಎಲ್ಲಾ ವಿಶ್ವಸಂಸ್ಥೆಯ (United Nations) ಅಂತಾರಾಷ್ಟ್ರೀಯ ಒಕ್ಕೂಟ ಸೇರುವ ಬಗ್ಗೆ ಭಾರತ ಮುಕ್ತ ನಿಲುವು ಹೊಂದಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ತಿಳಿಸಿದರು.
ದೆಹಲಿಯಲ್ಲಿ (Delhi) ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತ ʻಒಂದು ಸೂರ್ಯ – ಒಂದು ಪ್ರಪಂಚ – ಒಂದು ಗ್ರಿಡ್ʼ ಧ್ಯೇಯದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮಹತ್ತರ ಹೆಜ್ಜೆ ಹಾಕಿದೆ.
ವಿಶ್ವದ ನೂರಾರು ರಾಷ್ಟ್ರಗಳು ಭಾರತದ ಸೌರ ಪ್ರಗತಿಗೆ ಮಾರು ಹೋಗಿದ್ದು, ಭಾರತದ ನೇತೃತ್ವದಲ್ಲಿ ಸಾಗಿದ ಅಂತಾರಾಷ್ಟ್ರೀಯ ಸೌರ ಒಕ್ಕೂಟವನ್ನು ಪ್ರತಿನಿಧಿಸುತ್ತವೆ. ಅಂತೆಯೇ ಚೀನಾ ಸೇರಿದಂತೆ ಎಲ್ಲಾ UN ಸದಸ್ಯರು ಅಂತರಾಷ್ಟ್ರೀಯ ಸೌರ ಒಕ್ಕೂಟಕ್ಕೆ (ISA) ಸೇರುವ ಬಗ್ಗೆ ಸಹ ಭಾರತ ಮುಕ್ತ ನಿಲುವು ಹೊಂದಿದೆ ಎಂಬುದನ್ನ ಸ್ಪಷ್ಟಪಡಿಸಿದರು.
ಭಾರತದ ನಿವ್ವಳ ಶೂನ್ಯಕ್ಕೆ ಯುಕೆ ಶ್ಲಾಘನೆ
ಭಾರತದ ಇಂಧನ ಭದ್ರತೆ ಹಾಗೂ ನಿವ್ವಳ ಶೂನ್ಯಕ್ಕಾಗಿ ಯುಕೆ ವಿದೇಶಾಂಗ ಕಾರ್ಯದರ್ಶಿ ಎಡ್ವರ್ಡ್ ಮಿಲಿಬ್ಯಾಂಡ್ ಅವರಿಂದ ಶ್ಲಾಘನೆ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಗೆ ಮೆಚ್ಚುಗೆ ಸೂಚಿಸಿದ್ದಾರೆ. ನವೀಕರಿಸಬಹುದಾದ ಇಂಧನಕ್ಕಾಗಿ ಜಿ-ನೇತೃತ್ವದ ಒತ್ತಾಯ ಮಾಡಿದ್ದಾರೆ ಎಂದು ಹೇಳಿದರು.
ಭಾರತ ಮೋದಿ ಅವರ ನಾಯಕತ್ವದಲ್ಲಿ ಇಂಧನ ಸುಸ್ಥಿರತೆ ಮಾತ್ರವಲ್ಲ ಭವಿಷ್ಯದ ಪೀಳಿಗೆಗೆ ಮಾದರಿ ಹೆಜ್ಜೆಯಿಡುತ್ತಿದೆ. ದೇಶಾದ್ಯಂತ ಒಂದು ಕೋಟಿ ಮನೆಗಳಿಗೆ ಸೌರ ಬೆಳಕು ಚೆಲ್ಲುವ ಗುರಿಯೊಂದಿಗೆ ಸಬ್ಸಿಡಿ ಸಹಿತ ಸೌರ ಮೇಲ್ಛಾವಣಿ ಫಲಕ ಅಳವಡಿಸಿ ಉಚಿತ ವಿದ್ಯುತ್ ಒದಗಿಸುವ ʻಪಿಎಂ ಸೂರ್ಯ ಘರ್ʼ ಒಂದು ವಿದ್ಯುಕ್ತ ಯೋಜನೆಯಾಗಿದೆ ಎಂದು ಮಿಲಿಬ್ಯಾಂಡ್ ಸಂತಸ ವ್ಯಕ್ತಪಡಿಸಿದ್ದಾರೆ ಎಂದರು ಜೋಶಿ.
ಕಳೆದ ದಶಕದಲ್ಲಿ ಭಾರತದ ನವೀಕರಿಸಬಹುದಾದ ಇಂಧನ ಪ್ರಯಾಣವು ನಾವೀನ್ಯತೆ, ಸ್ಥಿತಿಸ್ಥಾಪಕತ್ವ ಮತ್ತು ಕಾರ್ಯತಂತ್ರದ ದೂರದೃಷ್ಟಿಗೆ ಸಾಕ್ಷಿಯಾಗಿದೆ. ನಿಗದಿತ ಸಮಯದೊಳಗೆ ಗುರಿ ಸಾಧಿಸಲಿದೆ. ನವೀಕರಿಸಬಹುದಾದ ಇಂಧನ ವಲಯದಲ್ಲಿ ದೇಶೀಯ ಉತ್ಪಾದನಾ ಸಾಮರ್ಥ್ಯ ಗಣನೀಯ ಬೆಳವಣಿಗೆ ಕಂಡಿದೆ. 2030ರ ನವೀಕರಿಸಬಹುದಾದ ಇಂಧನ ಗುರಿ ತಲುಪುವಲ್ಲಿ ಭಾರತ ಮುಂದಡಿ ಇಟ್ಟಿದೆ. ವಾರ್ಷಿಕ 50 GW ಸಾಮರ್ಥ್ಯವನ್ನ ಸೇರಿಸಲು ಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದೆ. ಸೌರ ಶಕ್ತಿ, ಪವನ ಶಕ್ತಿ, ಗ್ರೀನ್ ಹೈಡ್ರೋಜನ್ ಅಲ್ಲಿ ಮಹತ್ವದ ಸಾಧನೆ ತೋರಿದೆ ಎಂದರು.
ಹೂಡಿಕೆಗೆ ಒಳ್ಳೇ ಅವಕಾಶದ ವೇದಿಕೆ
ಹೂಡಿಕೆದಾರರು ಹೂಡಿಕೆ ಮಾಡಲು ಈ ವಲಯ ಒಳ್ಳೇ ಅವಕಾಶದ ವೇದಿಕೆಯಾಗಿದೆ. ಇದರಲ್ಲಿ ಹೂಡಿಕೆ ಮಾಡಿ, ಹಣ ಗಳಿಸಬಹುದಲ್ಲದೇ ಭೂಮಿಯನ್ನ ಸಹ ಉಳಿಸಬಹುದು. PM ಸೂರ್ಯ ಘರ್ ಯೋಜನೆ ಯಶಸ್ಸು ಮತ್ತು PLI ಯೋಜನೆಗಳ ಮೂಲಕ ಸೌರ ಘಟಕಗಳ ದೇಶೀಯ ಉತ್ಪಾದನೆಗೆ ಒತ್ತು ನೀಡುತ್ತಿದ್ದು, ವಿದೇಶಗಳೂ ಈಗ ಭಾರತವನ್ನ ಅನುಸರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಜೋಶಿ ಅಭಿಪ್ರಾಯಪಟ್ಟರು.
ಬಡವರ ಯೋಜನೆಗಳು ಬೇರೆಡೆ ಬದಲಾಗಬಾರದು
ʻಬಡವರ ಉದ್ದೇಶಿತವಾದ ಯಾವುದೇ ಯೋಜನೆಗಳು ಬೇರೆಡೆ ಬದಲಾಗಬಾರದುʼ ಎಂಬುದು ನಮ್ಮ ತಂದೆಯವರ ನಿಲುವು ಮತ್ತು ಅಪೇಕ್ಷೆಯಾಗಿತ್ತು. ಇಂದಿಗೂ ನಾನು ಅದನ್ನ ಪಾಲಿಸುತ್ತಾ ಬಂದಿದ್ದೇನೆ. ಅವರ ಎಷ್ಟೋ ಮಾತುಗಳು, ಕಲಿಸಿದ ಜೀವನಪಾಠ ಇಂದಿಗೂ ನನ್ನ ಹೃದಯಕ್ಕೆ ಹತ್ತಿರವಾಗಿವೆ ಎಂದು ಜೋಶಿ ಸ್ಮರಿಸಿಕೊಂಡರು.
ನನ್ನ ಸಾರ್ವಜನಿಕ ಸೇವೆಯ ಉದ್ದಕ್ಕೂ ನಾನು ಈ ತತ್ವವನ್ನ ಅನುಸರಿಸಿದ್ದೇನೆ, ಪ್ರತಿಯೊಂದು ಕಾರ್ಯದಲ್ಲೂ ಅರ್ಹತೆ ಮತ್ತು ತ್ವರಿತ ವೇಗ ನೀಡುವುದನ್ನು ರೂಢಿಸಿಕೊಂಡಿದ್ದೇನೆ. ಅಂತೆಯೇ ಯಾವುದೇ ಹಸ್ತಕ್ಷೇಪವಿಲ್ಲದೆ ಯೋಜನೆಗಳನ್ನು ಅಗತ್ಯವಿರುವವರಿಗೆ ತಲುಪಿಸುತ್ತಿದ್ದೇನೆ’ ಎಂದೂ ಸಚಿವ ಜೋಶಿ ಹೇಳಿದರು.


