– 76 ಸಿಆರ್‌ಪಿಎಫ್ ಜವಾನರ ಹತ್ಯೆಯ ಮಾಸ್ಟರ್ ಮೈಂಡ್ ಆಗಿದ್ದ ಹಿಡ್ಮಾ
ನವದೆಹಲಿ: 2025ರ ನವೆಂಬರ್ 30. ಇದು ಭದ್ರತಾ ಸಿಬ್ಬಂದಿಗೆ ನಕ್ಸಲ್ ಮುಖಂಡನಾಗಿದ್ದ ಮಾದ್ವಿ ಹಿಡ್ಮಾ ಹಿಡಿಯೋಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಕೊಟ್ಟಿದ್ದ ಡೆಡ್ ಲೈನ್. ದೇಶದಲ್ಲಿ ನಕ್ಸಲರನ್ನ ಸಂಪೂರ್ಣ ಮಟ್ಟ ಹಾಕುತ್ತೇವೆ ಎಂದು ಭರವಸೆ ನೀಡಿದ್ದ ಅಮಿತ್ ಶಾ ಇದನ್ನ ಕಾರ್ಯರೂಪಕ್ಕೆ ತರಲು ಪ್ಲ್ಯಾನ್ ಮಾಡುತ್ತಲೇ ಇದ್ದಾರೆ.
2025ರ ನವೆಂಬರ್ 30ರೊಳಗೆ ಮಾದ್ವಿ ಹಿಡ್ಮಾನನ್ನು (Madvi Hidma) ಮಟ್ಟಹಾಕಲೇಬೇಕು ಎಂದು ಭದ್ರತಾ ಸಿಬ್ಬಂದಿಗೆ ಡೆಡ್ ಲೈನ್ ಕೊಟ್ಟಿದ್ದರು. ಈ ಕಾರ್ಯಾಚರಣೆಗೆ ಇಳಿದ ಭದ್ರತಾ ಸಿಬ್ಬಂದಿ ನಿಗದಿಪಡಿಸಿದ 12 ದಿನ ಮೊದಲೇ ಟಾರ್ಗೆಟ್ ಹಿಟ್ ಮಾಡಿದ್ದಾರೆ. ನಕ್ಸಲ್ ಕಮಾಂಡರ್ (Naxal Commander) ಮಾದ್ವಿ ಹಿಡ್ಮಾನನ್ನು ಮಟ್ಟ ಹಾಕಿದ್ದಾರೆ. ಜೊತೆಗೆ ಆತನ ಪತ್ನಿ ರಾಜೆ ಅಲಿಯಾಸ್ ರಾಜಕ್ಕ ಮತ್ತು ಇತರೆ ನಾಲ್ವರು ನಕ್ಸಲರು ಎನ್‌ಕೌಂಟರ್‌ಗೆ ಬಲಿಯಾಗಿದ್ದಾರೆ.

ಕಾರ್ಯಾಚರಣೆ ಶುರು
ನವೆಂಬರ್ 30 ಟಾರ್ಗೆಟ್ ಫಿಕ್ಸ್ ಮಾಡಿದ ಬಳಿಕ ಆಂಧ್ರಪ್ರದೇಶ, ತೆಲಂಗಾಣ, ಛತ್ತೀಸ್ ಗಢದ ಕಾಡಿನಲ್ಲಿ ಸರ್ಚ್ ಆಪರೇಷನ್ ಶುರು ಮಾಡಿದ್ದರು. ಹಿಡ್ಮಾ ಎನ್ ಕೌಂಟರ್ ಬೆನ್ನಲ್ಲೇ ಹಿರಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ, ಕಾರ್ಯಾಚರಣೆ ನಡೆಸಿದ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಯಾರೀತ ಹಿಡ್ಮಾ..?
ಕಳೆದ 20 ವರ್ಷಗಳಲ್ಲಿ 26ಕ್ಕೂ ಹೆಚ್ಚು ನಕ್ಸಲ್ ದಾಳಿಯ ಮಾಸ್ಟರ್ ಮೈಂಡ್ ಮಾದ್ವಿ ಹಿಡ್ಮಾ. ಇದರಲ್ಲಿ 2010ರಲ್ಲಿ ದಾಂತೇವಾಡದಲ್ಲಿ ನಡೆದ ದಾಳಿಯಲ್ಲಿ ಸಿಆರ್‌ಪಿಎಫ್‌ನ 76 ಸಿಬ್ಬಂದಿ ಸಾವನ್ನಪ್ಪಿದ್ದರು. ಇದರ ಜೊತೆಗೆ 2013ರ ಝೀರಂ ಘಾಟಿ ದಾಳಿ, 2021ರ ಸೂಕ್ಮಾ – ಬಿಜಾಪುರ ದಾಳಿಯಲ್ಲಿ ಹಿಡ್ಮಾ ಪ್ರಮುಖ ಪಾತ್ರವಹಿಸಿದ್ದ.

ಎನ್ ಕೌಂಟರ್ ಎಲ್ಲಿ.?
ಛತ್ತೀಸ್ ಗಢ – ಆಂಧ್ರಪ್ರದೇಶದ ಗಡಿಯ ಮಾರೆಡುಮಿಲ್ಲಿಯ ಕಾಡಿನಲ್ಲಿ ಇಂದು ಬೆಳಗಿನ ಜಾವ ಎನ್ ಕೌಂಟರ್ ನಡೆದಿದೆ. ಮಾದ್ವಿ ಜೊತೆ ಪತ್ನಿ ರಾಜೆ ಅಲಿಯಾಸ್ ರಾಜಕ್ಕ, ಲಕ್ಮಲ್, ಕಮಲೂ, ಮಲ್ಲಾ, ದೇವೆ ಬಲಿಯಾದ ಇತರೆ ನಕ್ಸಲರು.
ಏನೇನು ಸಿಕ್ತು..?
ಎನ್‌ಕೌಂಟರ್ ನಡೆದ ಸ್ಥಳದಲ್ಲಿ 2 ಎಕೆ-47 ರೈಫಲ್, 1 ಪಿಸ್ತೂಲ್, 1 ರಿವಾಲ್ವರ್, 1 ಸಿಂಗಲ್ ಬೋರ್ ಗನ್ ಮತ್ತು 4 ಸ್ಫೋಟಕಗಳು ಹಾಗೂ ಡಿಟೋನೇಟರ್ ಘಟನಾ ಸ್ಥಳದಲ್ಲಿ ಸಿಕ್ಕಿವೆ.
ಪಿ.ಎಲ್.ಜಿ.ಎ ಬೆಟಾಲಿಯನ್ ಕಮಾಂಡರ್ ಹಿಡ್ಮಾ
1981ರಲ್ಲಿ ಛತ್ತೀಸ್ ಗಢದ ಸೂಕ್ಮಾದಲ್ಲಿ ಹಿಡ್ಮಾ ಹುಟ್ಟಿದ್ದ. ಪೀಪಲ್ಸ್ ಲಿಬರೇಷನ್ ಗೆರಿಲ್ಲಾ ಆರ್ಮಿ (PLGA) ಯ ಒಂದು ಬೆಟಾಲಿಯನ್ ನ ಕಮಾಂಡರ್ ಹಾಗೂ ಮಾವೋವಾದಿ ಸೆಂಟ್ರಲ್ ಕಮಿಟಿಯ ಸದಸ್ಯನಾಗಿದ್ದ.
ಯಾವೆಲ್ಲ ನಕ್ಸಲ್ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ..?
- 2007ರಲ್ಲಿ ರಾಣಿ ಬೋದಲಿ ದಾಳಿ – ಭದ್ರತಾ ಸಿಬ್ಬಂದಿಯ ಕ್ಯಾಂಪ್ ಮೇಲೆ ದಾಳಿ – 57 ಯೋಧರು ಹುತಾತ್ಮರು
- 2010ರಲ್ಲಿ ತಾಡಮೆಟ್ಲ ದಾಳಿಯಲ್ಲಿ 76 ಯೋಧರು ಸಾವನ್ನಪ್ಪಿದ್ದರು. ಇದು ದೇಶದ ಇತಿಹಾಸದಲ್ಲಿ ಅತಿ ಹೆಚ್ಚು ಜನರನ್ನು ಬಲಿ ಪಡೆದ ದಾಳಿಯಾಗಿತ್ತು
- 2010ರಲ್ಲಿ ಚಿಂಗಾವರಂನಲ್ಲಿ ಐಇಡಿ ಸ್ಫೋಟದಲ್ಲಿ 20 ಯೋಧರ ಸಾವು
- 2010ರಲ್ಲಿ ಒಟ್ಟು 171 ಯೋಧರು ಹುತಾತ್ಮರಾಗಿದ್ದರು
- 2013ರಲ್ಲಿ ಝೀರಂ ಘಾಟಿಯಲ್ಲಿ ದಾಳಿ ಕಾಂಗ್ರೆಸ್ ಮುಖಂಡ ಸೇರಿ 32 ಮಂದಿ ಹತ್ಯೆಯಾಗಿದ್ದರು
- 250 ಶಸ್ತ್ರಸಹಿತ ನಕ್ಸಲರು ಸುಧಾರಿತ ಸ್ಫೋಟಕ ಸಾಧನ (ಐಇಡಿ) ಬಳಸಿ ಸ್ಫೋಟ ನಡೆಸಿದರು ಸುಮಾರು ಒಂದೂವರೆ ಗಂಟೆಗಳ ಕಾಲ ಗುಂಡಿನ ದಾಳಿ ನಡೆದಿತ್ತು.
- 2014ರಲ್ಲಿ ಸೂಕ್ಮಾದ ಠಾಹಕ್ ವಾಡಾದಲ್ಲಿ ನಡೆದ ದಾಳಿಯಲ್ಲಿ 16 ಯೋಧರು ಹುತಾತ್ಮ
- 2017ರಲ್ಲಿ ಸೂಕ್ಮಾದ ಬುರಕಾಪಾಲ್ ನಲ್ಲಿ ದಾಳಿ – 25 ಯೋಧರ ಸಾವು
- 2020ರಲ್ಲಿ ಸೂಕ್ಮಾದ ಚಿಂತಾಗುಫಾದಲ್ಲಿ 17 ಯೋಧರು ಹುತಾತ್ಮ
- 2021ರಲ್ಲಿ ಬಿಜಾಪುರದ ಟೆಕ್ಕಲಗುಡದಲ್ಲಿ ದಾಳಿ – 22 ಯೋಧರ ಸಾವು

