ಬೆಳಗಾವಿ: ರಾಣಿ ಚೆನ್ನಮ್ಮ ಕಿರುಮೃಗಾಲಯದಲ್ಲಿ 31 ಕೃಷ್ಣಮೃಗಗಳು ಸಾವನ್ನಪ್ಪಿರುವ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮೂರು ತಿಂಗಳ ಹಿಂದೆಯೇ ರಾಷ್ಟ್ರೀಯ ಪಶು ವೈದ್ಯಕೀಯ ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ರೋಗ ಮಾಹಿತಿ ಸಂಸ್ಥೆಯಿಂದ (National Institute of Veterinary Epidemiology and Disease Informatics) ಮೃಗಾಲಯಕ್ಕೆ ಮುನ್ಸೂಚನೆ ನೀಡಲಾಗಿತ್ತು ಎಂದು ತಿಳಿದುಬಂದಿದೆ.
ಬೆಂಗಳೂರಿನ ಯಲಹಂಕದಲ್ಲಿರುವ ರಾಷ್ಟ್ರೀಯ ಪಶು ವೈದ್ಯಕೀಯ ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ರೋಗ ಮಾಹಿತಿ ಸಂಸ್ಥೆ ಅರಣ್ಯ ಇಲಾಖೆ ಹಾಗೂ ಮೃಗಾಲಯಗಳಿಗೆ ಮೂರು ತಿಂಗಳ ಹಿಂದೆ ಮೃಗಾಲಯಕ್ಕೆ ರೋಗ ಹರಡುವ ಕುರಿತು ಮಾಹಿತಿ ನೀಡಿತ್ತು. ಅಲ್ಲದೆ ಹಸು ಎಮ್ಮೆ ಸಾಕುವ ರೈತರಿಗೂ ಈ ಸಂದೇಶ ರವಾನಿಸಲಾಗಿತ್ತು. ಅಲ್ಲದೇ ಬೆಳಗಾವಿ ಭಾಗದಲ್ಲಿ ಹಿಮೋರೆಜಿಕ್ ಸೆಪ್ಟಿಸಿಮೀಯಾ ಕಾಯಿಲೆ ಬಗ್ಗೆ ಎಚ್ಚರಿಕೆ ವಹಿಸುವಂತೆ ಮಾಹಿತಿ ನೀಡಲಾಗಿತ್ತು. ರಾಷ್ಟ್ರೀಯ ಸಂಸ್ಥೆಯಿಂದ ಮಾಹಿತಿ ನೀಡಿದ ನಂತರವೂ ಸಹ ಅರಣ್ಯ ಇಲಾಖೆ ಹಾಗೂ ಪಶುಸಂಗೋಪನೆ ಇಲಾಖೆ ನಿರ್ಲಕ್ಷ್ಯ ವಹಿಸಿದ್ಯಾ? ಎನ್ನುವ ಪ್ರಶ್ನೆಗಳು ಮೂಡುತ್ತಿವೆ.ಇದನ್ನೂ ಓದಿ: ಸಾವಿನ ಸಂಖ್ಯೆ 31ಕ್ಕೆ ಏರಿಕೆ – ಉಳಿದ 7 ಕೃಷ್ಣಮೃಗ ಉಳಿಸಲು ಹರಸಾಹಸ
ಈಗಾಗಲೇ 31 ಕೃಷ್ಣಮೃಗಗಳು ಸಾವನ್ನಪ್ಪಿದ್ದು, 7 ಮಾತ್ರ ಬದುಕುಳಿದಿವೆ. ಹೀಗಾಗಿ ಅವುಗಳಿಗೆ ಆಂಟಿ ಬಯೋಟೆಕ್ ಚಿಕಿತ್ಸೆ ನೀಡುತ್ತಿದ್ದಾರೆ. ಕೃಷ್ಣಮೃಗಗಳ ಸಾವಿಗೆ ಗಳಲೆ ರೋಗ ಕಾರಣ ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆ ಸಿಬ್ಬಂದಿ ಮೃಗಾಲಯದ ಒಳಗಡೆ ಔಷಧಿ ಸಿಂಪಡಣೆ ಮಾಡಿ ಬ್ಯಾಕ್ಟೀರಿಯಾ ನಾಶ ಮಾಡುವ ಪ್ರಯತ್ನ ಮಾಡಿದ್ದಾರೆ. ಗಳಲೆ ರೋಗ ಇತರೆ ಸಾಕು ಪ್ರಾಣಿಗಳಿಗಳಿಗೆ ಹರಡುವ ಭೀತಿ ಇರುವುದರಿಂದ ಸುತ್ತಮುತ್ತಲಿನ ಗ್ರಾಮಗಳಿಗೂ ಎಚ್ಚರಿಕೆ ಸಂದೇಶವನ್ನು ಕಳುಹಿಸಲಾಗಿದೆ.

