ಬೆಳಗಾವಿ: ರಾಣಿ ಚನ್ನಮ್ಮ ಕಿರುಮೃಗಾಲಯದಲ್ಲಿ ಮತ್ತೆ ಎರಡು ಕೃಷ್ಣ ಮೃಗಗಳು ಸಾವನ್ನಪ್ಪಿದ್ದು, ಮೃತಪಟ್ಟಿರುವ ಕೃಷ್ಣಮೃಗಗಳ (Blackbucks) ಸಂಖ್ಯೆ 30ಕ್ಕೆ ಏರಿಕೆಯಾಗಿದೆ. ಮೃಗಾಲಯದಲ್ಲಿರುವ (Belagavi zoo) ಕೃಷ್ಣಮೃಗಗಳಿಗೆ ಬ್ಯಾಕ್ಟೀರಿಯಾ ಅಂಟಿರುವ ಕುರಿತು ವೈದ್ಯರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ.
ಹಸು ಹಾಗೂ ಎಮ್ಮೆಗಳಿಗೆ ಹರಡುವ ರೋಗ ಕೃಷ್ಣಮೃಗಗಳಲ್ಲಿ ಹರಡಿದೆ ಹೀಗಾಗಿ ತ್ವರಿತವಾಗಿ ಸಾವನಪ್ಪುತ್ತವೆ. ಸದ್ಯ ಮೃಗಾಲಯದಲ್ಲಿ ಉಳಿದ ಕೃಷ್ಣಮೃಗಗಳೂ ಸಹ ಉಳಿಯುವುದು ಕಷ್ಟ ಎಂದು ಹೇಳಲಾಗುತ್ತಿದೆ.
ನಿತ್ಯ ಸಾವಿರಾರು ಜನರು ವೀಕ್ಷಿಸುತ್ತಿದ್ದ ಕೃಷ್ಣಮೃಗಗಳು ಮೃಗಾಲಯದಲ್ಲೇ ನಿಗೂಢವಾಗಿ ಸಾನಪ್ಪಿದ್ದು ಸಾಕಷ್ಟು ಅನುಮಾನ ಹುಟ್ಟುವಂತೆ ಮಾಡಿದೆ. ಬೆಳಗಾವಿಯಷ್ಟೇ ಅಲ್ಲದೇ ಅಕ್ಕಪಕ್ಕದ ಜಿಲ್ಲೆ ಹಾಗೂ ನೆರೆಯ ಮಹಾರಾಷ್ಟ್ರದಿಂದಲೂ ಪ್ರವಾಸಿಗರು ಬಂದು ಇಲ್ಲಿರುವ ಪ್ರಾಣಿಗಳನ್ನು ನೋಡಿ ಇಷ್ಟಪಡುತ್ತಿದ್ದರು.
ನ.13 ರಂದು ಎಂಟು ಕೃಷ್ಣ ಮೃಗಗಳು ಸಾವನ್ನಪ್ಪಿದ್ದವು. ಈ ವೇಳೆ ಸ್ಯಾಂಪಲ್ ಪಡೆದು ಲ್ಯಾಬ್‌ಗೆ ಕಳುಹಿಸಿದ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವೈದ್ಯ ನಾಗೇಶ್ ನಿರ್ಲಕ್ಷ್ಯ ತೋರಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದಲ್ಲಿ 19 ಜಿಂಕೆಗಳ ಅಸಹಜ ಸಾವು – ತನಿಖೆಗೆ ಈಶ್ವರ್ ಖಂಡ್ರೆ ಆದೇಶ
4 ದಿನದ ಹಿಂದೆ ಕೃಷ್ಣ ಮೃಗಗಳು ಸಾವನ್ನಪ್ಪಿದ್ದರೂ ಎಚ್ಚೆತ್ತುಕೊಂಡಿಲ್ಲ. ಅಂದು ಎಚ್ಚೆತ್ತುಕೊಂಡಿದ್ದರೆ ಇನ್ನುಳಿದ ಕೃಷ್ಣ ಮೃಗಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಿ ಚಿಕಿತ್ಸೆ ಕೊಡಿಸುವ ಕೆಲಸ ಮಾಡಬೇಕಿತ್ತು. ಇದು ಕೂಡ ಸರಿಯಾಗಿ ಮಾಡದೇ ನಿರ್ಲಕ್ಷ್ಯ ತೋರಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಮೃತಪಟ್ಟ 20 ಕೃಷ್ಣ ಮೃಗಗಳು ಪೈಕಿ ಮೂರನ್ನು ಫ್ರೀಜರ್‌ನಲ್ಲಿ ಇರಿಸಿದರೆ ಇನ್ನುಳಿದ ಕೃಷ್ಣಮೃಗಗಳ ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಕ್ರಿಯೆ ಮಾಡಲಾಗಿದೆ.
ಸದ್ಯ ಉಳಿದಿರುವ ಕೃಷ್ಣ ಮೃಗಗಳನ್ನು ನಿಗಾದಲ್ಲಿ ಇರಿಸಲಾಗಿದೆ. ಕೃಷ್ಣ ಮೃಗಗಳು ನಿಗೂಢವಾಗಿ ಸಾವನ್ನಪ್ಪಿರುವುದು ಅರಣ್ಯ ಇಲಾಖೆಯವರ ಬೇಜವಾಬ್ದಾರಿಯೇ ಅಥವಾ ವೈರಸ್ ಹರಡುವುದರಿಂದ ಎನ್ನುವುದು ತನಿಖೆಯಿಂದ ತಿಳಿಯಬೇಕಿದೆ.


