– ಲಾಲು ಕುಟುಂಬ ಕಲಹ ಎಲ್ಲರ ಮುಂದೆ ಬಂದಿದೆ ಎಂದ ಜೆಡಿಯು
– ರೋಹಿಣಿ ನಿರ್ಧಾರ ವಾಪಸ್ ತೆಗೆದುಕೊಳ್ಳಲಿ ಎಂದ ಸಂಸದ ಪಪ್ಪೂ ಯಾದವ್
ಪಾಟ್ನಾ: ಬಿಹಾರ ಸೋಲಿನ ಬೆನ್ನಲ್ಲೇ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ (Lalu Prasad Yadav) ಅವರ ಕುಟುಂಬದಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದೆ. ಲಾಲು ಪುತ್ರಿ ರೋಹಿಣಿ ಆಚಾರ್ಯ (Rohini Acharya) ಅವರು ರಾಜಕೀಯಕ್ಕೆ ಗುಡ್‌ಬೈ ಹೇಳಿದ್ದಾರೆ. ಕುಟುಂಬದ ಜೊತೆಯೂ ಸಂಬಂಧ ಕಡಿದುಕೊಳ್ಳುವುದಾಗಿ ತಿಳಿಸಿದ್ದಾರೆ.
ನಾನು ರಾಜಕೀಯ ತ್ಯಜಿಸುತ್ತಿದ್ದೇನೆ. ನನ್ನ ಕುಟುಂಬದ ಜೊತೆಯೂ ಸಂಬಂಧ ಕಡಿದುಕೊಳ್ಳುತ್ತಿದ್ದೇನೆ. ಸಂಜಯ್ ಯಾದವ್ ಮತ್ತು ರಮೀಜ್ ನನ್ನನ್ನು ಕೇಳಿಕೊಂಡಿದ್ದು ಇದನ್ನೇ. ನಾನು ಎಲ್ಲಾ ಆಪಾದನೆಗಳನ್ನು ಹೊರುತ್ತಿದ್ದೇನೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ರೋಹಿಣಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬಿಹಾರ| ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ಕೇಂದ್ರ ಮಾಜಿ ಸಚಿವ ಆರ್.ಕೆ.ಸಿಂಗ್ ರಾಜೀನಾಮೆ
I’m quitting politics and I’m disowning my family …
This is what Sanjay Yadav and Rameez had asked me to do …nd I’m taking all the blame’s
— Rohini Acharya (@RohiniAcharya2) November 15, 2025
ರೋಹಿಣಿ ಅವರ ಈ ಪೋಸ್ಟ್ ಕುಟುಂಬ ಮತ್ತು ಪಕ್ಷದೊಳಗೆ ಕೋಲಾಹಲ ಎಬ್ಬಿಸಿದೆ. ಏಕೆಂದರೆ, ಲಾಲು ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಅವರನ್ನು ಈಗಾಗಲೇ ಪಕ್ಷದಿಂದ ಉಚ್ಚಾಟಿಸಲಾಗಿದೆ. ಇದರ ಬೆನ್ನಲ್ಲೇ ತೇಜ್ ಪ್ರತಾಪ್ ಜನಶಕ್ತಿ ಜನತಾ ದಳವನ್ನು ರಚಿಸಿದರು. ಪಕ್ಷವು ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿತು. ರಾಘೋಪುರ್ ವಿಧಾನಸಭಾ ಕ್ಷೇತ್ರದಲ್ಲಿ ತೇಜಸ್ವಿ ವಿರುದ್ಧ ಅಭ್ಯರ್ಥಿಯನ್ನೂ ನಿಲ್ಲಿಸಿತು. ತೇಜ್ ಪ್ರತಾಪ್ ಸ್ಪರ್ಧಿಸಿದ್ದ ಮಹುವಾ ಸೇರಿದಂತೆ ಪಕ್ಷವು ಒಂದೇ ಒಂದು ಸ್ಥಾನವನ್ನು ಗೆಲ್ಲಲಿಲ್ಲ.
ತೇಜ್ ಪ್ರತಾಪ್ ಯಾದವ್ ಅವರನ್ನು ಪಕ್ಷದಿಂದ ಹೊರಹಾಕಿದ್ದಕ್ಕೆ ಅಸಮಾಧಾನಗೊಂಡಿದ್ದ ರೋಹಿಣಿ, ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಪಕ್ಷದ ಬಗ್ಗೆ ತಮ್ಮ ಹತಾಶೆಯನ್ನು ವ್ಯಕ್ತಪಡಿಸುತ್ತಿದ್ದರು. ಆದರೆ ಸಮಾಧಾನಕರ ಸಂದೇಶಗಳನ್ನು ಪೋಸ್ಟ್ ಮಾಡುತ್ತಿದ್ದರು ಎನ್ನಲಾಗಿದೆ. ಇದನ್ನೂ ಓದಿ: ನೆಕ್ ಟು ನೆಕ್ ಫೈಟಲ್ಲಿ ಗೆದ್ದು ಕ್ಷೇತ್ರ ಉಳಿಸಿಕೊಂಡ ತೇಜಸ್ವಿ ಯಾದವ್
ಸೆಪ್ಟೆಂಬರ್ ಆಸುಪಾಸಿನಲ್ಲಿ ರೋಹಿಣಿ ಸಾಮಾಜಿಕ ಮಾಧ್ಯಮದಲ್ಲಿ ಪಕ್ಷದ ಎಲ್ಲಾ ರಾಜಕೀಯ ನಾಯಕರು ಮತ್ತು ಕುಟುಂಬ ಸದಸ್ಯರನ್ನು ಅನ್‌ಫಾಲೋ ಮಾಡಿದ್ದರು. ನಂತರ ಅವರ ಬಗ್ಗೆ ತಪ್ಪು ಮಾಹಿತಿ ಹರಡಲಾಗುತ್ತಿದೆ ಎಂದು ಪೋಸ್ಟ್ ಹಾಕಿದ್ದರು. ಆದಾಗ್ಯೂ, ಚುನಾವಣೆಗೂ ಮುನ್ನ ನವೆಂಬರ್ 9 ರಂದು ರೋಹಿಣಿ ಅವರು ತಮ್ಮ ಸಹೋದರ ತೇಜಸ್ವಿ ಅವರ ಹುಟ್ಟುಹಬ್ಬದಂದು ಶುಭ ಹಾರೈಸಿದರು. ಅವರ ನಾಯಕತ್ವವನ್ನೂ ಶ್ಲಾಘಿಸಿದ್ದರು. ಪಕ್ಷವನ್ನು ಬೆಂಬಲಿಸಿ ಹಲವು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದರು.

243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಆರ್‌ಜೆಡಿ ಕೇವಲ 25 ಸ್ಥಾನಗಳನ್ನು ಗೆದ್ದಿದೆ. ವಿಪಕ್ಷ ಮೈತ್ರಿಕೂಟ ಮಹಾಘಟಬಂಧನ್ ಒಟ್ಟಾರೆಯಾಗಿ ಕೇವಲ 35 ಸ್ಥಾನಗಳಿಗೆ ಸೀಮಿತವಾಯಿತು. ಮತ್ತೊಂದೆಡೆ, ಎನ್‌ಡಿಎ 202 ಕ್ಷೇತ್ರಗಳಲ್ಲಿ ಭರ್ಜರಿ ಜಯಗಳಿಸಿದೆ.
2022 ರಲ್ಲಿ ಲಾಲು ಯಾದವ್‌ಗೆ ಪುತ್ರಿ ರೋಹಿಣಿ ಮೂತ್ರಪಿಂಡ ದಾನ ಮಾಡಿದ್ದರು. ರೋಹಿಣಿ ಪೋಸ್ಟ್ ಬಗ್ಗೆ ಜೆಡಿಯು ಪ್ರತಿಕ್ರಿಯಿಸಿದ್ದು, ಲಾಲು ಕುಟುಂಬದ ಕಲಹ ಎಲ್ಲರ ಮುಂದೆ ಬಂದಿದೆ ಎಂದು ಟೀಕಿಸಿದೆ. ಇತ್ತ ಸಂಸದ ಪಪ್ಪೂ ಯಾದವ್ ಅವರು, ರೋಹಿಣಿ ತಮ್ಮ ನಿರ್ಧಾರ ವಾಪಸ್ ತೆಗೆದುಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.

