– ಕಾರ್ ಪಾರ್ಕ್ ಮಾಡಿದ್ದ 3 ಗಂಟೆ ಅವಧಿಯಲ್ಲೇ ಎಲ್ಲವನ್ನೂ ಕನೆಕ್ಟ್ ಮಾಡಿದ್ನಂತೆ
– ಮನೆಯಲ್ಲಿ ಬಳಸುವಂತೆ ಆನ್-ಆಫ್ ಸ್ವಿಚ್ ಬಳಸಿ ಸ್ಫೋಟಕ್ಕೆ ಟ್ರಿಗರ್ ಮಾಡಿರೋ ಶಂಕೆ
ನವದೆಹಲಿ: ದೆಹಲಿಯ ಕೆಂಪು ಕೋಟೆ ಬಳಿ ಕಾರು ಸ್ಫೋಟಕ (Delhi Red Fort Explosion) ಪ್ರಕರಣದ ಕುರಿತು ಇನ್ನಷ್ಟು ರೋಚಕ ಸಂಗತಿಗಳು ಹೊರಬಿದ್ದಿವೆ. 2 ಲಕ್ಷ ನಗದು ನೀಡಿ ಐ20 ಖರೀದಿ ಮಾಡಿದ್ದ ಡಾ.ಉಮರ್ (Bomber Dr. Umar) ಜಮ್ಮು-ಕಾಶ್ಮೀರದ ಡ್ರೈವಿಂಗ್ ಲೈಸೈನ್ಸ್ ಅನ್ನು ದಾಖಲೆಗೆ ನೀಡಿದ್ದ.
ಇನ್ನೂ ವಿಧಿವಿಜ್ಞಾನ ತಜ್ಞರು (FSL) ಹೇಳುವಂತೆ, ಕಾರು ಸ್ಫೋಟಗೊಂಡ ಸ್ಥಳದಲ್ಲಿ ಕಂಡುಬಂದ ತೆಳುವಾದ ತಂತಿಗಳು ಸ್ಫೋಟವನ್ನ ಪ್ರಚೋದಿಸಲು ಡಿಟೋನೇಟರ್ ಮತ್ತು ಇಂಧನ ತೈಲಕ್ಕೆ ಲಿಂಕ್ ಮಾಡಲಾದ ಟೈಮರ್ ಬಳಸುವುದನ್ನ ಸೂಚಿಸಿವೆ. ಅಲ್ಲದೇ ಬಾಂಬ್ ಎಕ್ಸ್‌ಪರ್ಟ್ ಆಗಿದ್ದ ಆತ್ಮಾಹುತಿ ಬಾಂಬರ್ ಡಾ.ಉಮರ್, ಕಾರು ಪಾರ್ಕ್ ಮಾಡಿದ್ದಾಗಲೇ ಬಾಂಬ್ ತಯಾರಿಸಿದ್ನಾ? ಅನ್ನೋ ಅನುಮಾನವೂ ಮೂಡಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಭೀಕರ ಸ್ಫೋಟ – ಇಬ್ಬರು ಅಧಿಕಾರಿಗಳು ಸೇರಿ 9 ಮಂದಿ ಸಾವು

ಕೆಂಪು ಕೋಟೆ ಬಳಿ 3 ಗಂಟೆ ನಿಂತಲ್ಲೇ ನಿಂತಿದ್ದ ಐ20 ಕಾರಿನಲ್ಲಿ 5-10 ನಿಮಿಷದಲ್ಲೇ ಬಾಂಬ್ ತಯಾರಿಸಿದ್ನಾ? ಇದೇ ಕಾರಣಕ್ಕೆ ಕಾರು 3 ಗಂಟೆ ಪಾರ್ಕ್ ಮಾಡಿದ್ನಾ ಅನ್ನೋ ಅನುಮಾನವೂ ಮೂಡಿದೆ. ಈ ಬಗ್ಗೆ ಫಾರೆನ್ಸಿಕ್ ತನಿಖೆಯ ವೇಳೆ ಸ್ಫೋಟಕ ಮಾಹಿತಿ ಸಿಕ್ಕಿದೆ. ಇದನ್ನೂ ಓದಿ: ಫರಿದಾಬಾದ್‌ನಲ್ಲಿ ಜಪ್ತಿ ಮಾಡಿದ್ದ ಸ್ಫೋಟಕ ಶ್ರೀನಗರ ಠಾಣೆಯಲ್ಲಿ ಸ್ಫೋಟ – ಇದು ಆಕಸ್ಮಿಕ ಘಟನೆ; ಗೃಹಸಚಿವಾಲಯ, ಡಿಜಿಪಿ ಸ್ಪಷ್ಟನೆ
ಬಾಂಬ್ ಜೊತೆಗೆ ಪೆಟ್ರೋಲ್ ಟ್ಯಾಂಕ್ ಕೂಡಾ ಸ್ಫೋಟ!
ಇಂಧನ ತೈಲ ಮತ್ತು ಟ್ರಾನ್ಸ್‌ಫಾರ್ಮರ್‌ಗೆ ಬಳಸುವ ಆಯಿಲ್‌ನೊಂದಿಗೆ ಬೆರೆಸಿದ ಅಮೋನಿಯಂ ನೈಟ್ರೇಟ್ ಬಳಸಿ, ಪ್ರಬಲವಾದ ಸ್ಫೋಟಕ ಸಾಧನವನ್ನ ಉಮರ್ ತಯಾರು ಮಾಡಿದ್ದ. ಬಾಂಬ್ ಅನ್ನು 3 MM ಅಥವಾ 9 MM ಬ್ಯಾಟರಿ-ಚಾಲಿತ ಟೈಮಿಂಗ್ ಸಾಧನಕ್ಕೆ ತೆಳುವಾದ ಕೇಬಲ್‌ಗಳೊಂದಿಗೆ ಸಂಪರ್ಕಿಸಲಾಗಿತ್ತು. ಸರ್ಕ್ಯೂಟ್‌ಗೆ ಹಸ್ತಚಾಲಿತ ಸ್ವಿಚ್ ಅಗತ್ಯವಿತ್ತು, ಉಮರ್ ಸ್ಫೋಟವನ್ನ ಪ್ರಚೋದಿಸಲು ಮನೆಯ ಆನ್-ಆಫ್ ಸ್ವಿಚ್‌ನಂತೆ ಕಾರ್ಯನಿರ್ವಹಿಸಲು ರೆಡಿ ಮಾಡಿದ್ದ. ಈ ಬಾಂಬ್ ಜೋಡಣೆ ಪ್ರಕ್ರಿಯೆಯು ಕೇವಲ 5 ರಿಂದ 10 ನಿಮಿಷದಲ್ಲೇ ಮಾಡಿದ್ದ. ಜೊತೆಗೆ ಸ್ಫೋಟಕ್ಕೆ ಬಳಸುವ ಡಿಟೋನೇಟರ್‌ಗಳನ್ನ ಸಾಮಾನ್ಯ ಕಲ್ಲಿದ್ದಲು ಗಣಿಗಳಿಂದ ಸುಲಭವಾಗಿ ಪಡೆಯಬಹುದು ಎನ್ನಲಾಗಿದೆ. ಮೂರು ಗಂಟೆ ಪಾರ್ಕಿಂಗ್ ನಲ್ಲಿ ಕೂತಾಗಲೇ ಇದನ್ನೆಲ್ಲ ಉಮರ್ ಸೆಟ್ ಮಾಡಿಕೊಂಡಿರಬಹುದು ಎಂದು ಅಧಿಕಾರಿಗಳು ಅನುಮಾನಿಸಿದ್ದಾರೆ.
ಸ್ಫೋಟದ ತೀವ್ರತೆಗೆ ನಲುಗಿದ ಮೆಟ್ರೋ ಸ್ಟೇಷನ್
ಕೆಂಪು ಕೋಟೆಯ ಬಳಿ ಸಂಭವಿಸಿದ ಸ್ಫೋಟದ ತೀವ್ರತೆಯ ಇನ್ನಷ್ಟು ವಿಡಿಯೋಗಳು ಈಗ ಹೊರ ಬರುತ್ತಿದೆ. ಹೊರ ಬಂದಿರುವ ವಿಡಿಯೋದಲ್ಲಿ ಬಾಂಬ್ ಸ್ಫೋಟಗೊಳ್ಳುತ್ತಿದ್ದಂತೆ ಇಡೀ ಮೆಟ್ರೋ ನಿಲ್ದಾಣದಲ್ಲಿ ಭೂಕಂಪನದ ಅನುಭವ ಉಂಟಾಗಿತ್ತು ಅನ್ನೋದು ವಿಡಿಯೋದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: Delhi Blast | ಸ್ಫೋಟದ ರೂವಾರಿ ಉಮರ್‌ನ ನಿವಾಸ ಉಡೀಸ್
ಇಂದಿನಿಂದ ಕೆಂಪುಕೋಟೆ ರಸ್ತೆ ಸಂಚಾರಕ್ಕೆ ಮುಕ್ತ
ಇನ್ನು ಘಟನೆ ನಡೆದು 5 ದಿನಗಳ ಬಳಿಕ ಕೆಂಪುಕೋಟೆ ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ. ಕಾರು ಸ್ಫೋಟ ಸಂಭವಿಸಿದಾಗಿನಿಂದಲೂ ರಸ್ತೆಯನ್ನು ಬಂದ್ ಮಾಡಲಾಗಿತ್ತು. ಇಂದಿನಿಂದ ವಾಹನ ಸಂಚಾರಕ್ಕೆ ಪೊಲೀಸರು ಅನುವುಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ: ಪುಣೆ-ಬೆಂಗಳೂರು ಹೆದ್ದಾರಿ; ನಿಯಂತ್ರಣ ತಪ್ಪಿ ವಾಹನಗಳಿಗೆ ಕಂಟೇನರ್ ಟ್ರಕ್ ಡಿಕ್ಕಿ – 6 ಮಂದಿ ಸಾವು
39 ವಾಯ್ಸ್ ಕಾಲ್, 43 ವಾಟ್ಸಪ್ ಕಾಲ್ ಪತ್ತೆ
ಈ ನಡುವೆ ದೆಹಲಿಯಲ್ಲಿನ ಭಯೋತ್ಪಾದಕ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಡಾ. ಮುಜಮ್ಮಿಲ್ ಫೋನ್ ಕರೆಗಳ ಬಗ್ಗೆ ತನಿಖಾ ತಂಡಗಳು ಮಾಹಿತಿ ಕಲೆ ಹಾಕಿವೆ. ಪ್ರಮುಖ ಶಂಕಿತರಾದ ಡಾ. ಶಾಹೀನ್, ಡಾ.ಮುಜಮ್ಮಿಲ್ ಮತ್ತು ಡಾ.ಆರಿಫ್ ನಡುವೆ ವ್ಯಾಪಕ ಸಂವಹನ ಪತ್ತೆಯಾಗಿದೆ. ನವೆಂಬರ್ 1 ಮತ್ತು ನವೆಂಬರ್ 7ರ ನಡುವೆ, ಡಾ. ಆರಿಫ್ ಮತ್ತು ಡಾ. ಶಾಹೀನ್ ಹಲವು ಬಾರಿ ಮಾತುಕತೆ ನಡೆಸಿದ್ದಾರೆ. 39 ಧ್ವನಿ ಕರೆಗಳು. 43 ವಾಟ್ಸಪ್ ಕರೆಗಳು, ಸುಮಾರು 200 ಪಠ್ಯ ಸಂದೇಶಗಳ ವಿನಿಮಯ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೇಂದ್ರೀಯ ಸಂಸ್ಥೆಗಳು ತೀವ್ರ ತನಿಖೆ ನಡೆಸುತ್ತಿವೆ.

