ಬೆಂಗಳೂರು/ತುಮಕೂರು: ವೃಕ್ಷಮಾತೆ, ರಸ್ತೆ ಬದಿಯಲ್ಲಿ ಮರಗಳನ್ನು ನೆಡುತ್ತಲೇ ಖ್ಯಾತಿಯಾಗಿದ್ದ ಸಾಲುಮರದ ತಿಮ್ಮಕ್ಕ ಕೊನೆಯುಸಿರೆಳೆದಿದ್ದಾರೆ.
ಇಂದು (ನ.14) ಬೆಂಗಳೂರಿನ ಜಯನಗರದ (Jayanagar) ಅಪೋಲೋ ಆಸ್ಪತ್ರೆಯಲ್ಲಿ (Apollo Hospital) ಬಹುಅಂಗಾಂಗ ವೈಫಲ್ಯದಿಂದಾಗಿ 114ನೇ ವಯಸ್ಸಿಯಲ್ಲಿ ನಿಧನ ಹೊಂದಿದ್ದಾರೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ 1911 ಜೂನ್ 30ರಂದು ಜನಿಸಿದ್ದ ಅವರು, ವೃಕ್ಷಮಾತೆ ಎಂದೇ ಪ್ರಸಿದ್ಧಿ ಪಡೆದಿದ್ದರು. ಮರ, ಗಿಡಗಳನ್ನು ತಮ್ಮ ಮಕ್ಕಳಂತೆಯೇ ಪ್ರೀತಿಸುತ್ತಿದ್ದರು. ತಿಮ್ಮಕ್ಕ ಅವರಿಗೆ 1995ರಲ್ಲಿ ರಾಷ್ಟ್ರೀಯ ಪೌರ ಪ್ರಶಸ್ತಿ, 1997ರಲ್ಲಿ ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ, ವೀರಚಕ್ರ ಪ್ರಶಸ್ತಿ, 2019ರಲ್ಲಿ ಪದ್ಮಶ್ರೀ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಪ್ರಶಸ್ತಿ ಹಾಗೂ 2020ರಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ನೀಡಿ, ಗೌರವಿಸಲಾಗಿದೆ.
ಇನ್ನೂ 2000ರಲ್ಲಿ ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ, 2006ರಲ್ಲಿ ಗಾಡ್‌ಫ್ರಿ ಫಿಲಿಪ್ಸ್ ಧೀರತೆ ಪ್ರಶಸ್ತಿ, ಪಂಪಾಪತಿ ಪರಿಸರ ಪ್ರಶಸ್ತಿ, ಬಾಬಾಸಾಹೇಬ್ ಅಂಬೇಡ್ಕರ್ ಪ್ರಶಸ್ತಿ, ವನಮಾತೆ ಪ್ರಶಸ್ತಿ, ಮಾಗಡಿ ವ್ಯಕ್ತಿ ಪ್ರಶಸ್ತಿ, ಶ್ರೀಮಾತಾ ಪ್ರಶಸ್ತಿ, ಹೆಚ್.ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ, ಕರ್ನಾಟಕ ಪರಿಸರ ಪ್ರಶಸ್ತಿ, ಮಹಿಳಾರತ್ನ ಪ್ರಶಸ್ತಿ, ನ್ಯಾಷನಲ್ ಸಿಟಿಜನ್ ಪ್ರಶಸ್ತಿ, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ವಿಶಾಲಾಕ್ಷಿ ಪ್ರಶಸ್ತಿ ಸೇರಿದಂತೆ ಕರ್ನಾಟಕ ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆಯಿಂದ ಪ್ರಮಾಣ ಪತ್ರ, ಭಾರತೀಯ ವೃಕ್ಷ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯಿಂದ ಶ್ಲಾಘನೆಯ ಪ್ರಮಾಣ ಪತ್ರ ನೀಡಿದೆ.

