– ಉಗ್ರ ಸಂಘಟನೆಯ ಮಹಿಳಾ ಬ್ರಿಗೇಡ್ ಹೊಣೆ ಹೊತ್ತಿದ್ದ ವೈದ್ಯೆ
ನವದೆಹಲಿ: ಕೆಂಪು ಕೋಟೆ ಬಳಿ ನಡೆದ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು, ಡಾ. ಶಾಹೀನ ಸಯೀದ್, ಜೈಶ್ ಕಮಾಂಡರ್ ಮತ್ತು ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಉಮರ್ ಫಾರೂಕ್ ಪತ್ನಿ ಅಫಿರಾ ಬೀಬಿ ಜೊತೆ ಸಂಪರ್ಕದಲ್ಲಿರುವುದನ್ನು ಪತ್ತೆ ಹಚ್ಚಿದ್ದಾರೆ.
2019ರ ಪುಲ್ವಾಮಾ ದಾಳಿಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ನ 40 ಸಿಬ್ಬಂದಿ ಸಾವನ್ನಪ್ಪಿದ ನಂತರ ನಡೆದ ಎನ್‌ಕೌಂಟರ್‌ನಲ್ಲಿ ಜೈಶ್ ಮುಖ್ಯಸ್ಥ ಮಸೂದ್ ಅಜರ್‌ನ ಸೋದರಳಿಯ ಉಮರ್ ಫಾರೂಕ್ ಸಾವನ್ನಪ್ಪಿದ್ದ. ಈತನ ಪತ್ನಿ ಅಫಿರಾ ಬೀಬಿ, ಜೈಶ್ ಉಗ್ರ ಸಂಘಟನೆ ಹೊಸದಾಗಿ ಪ್ರಾರಂಭಿಸಿದ ಮಹಿಳಾ ಬ್ರಿಗೇಡ್ ಜಮಾತ್-ಉಲ್-ಮೊಮಿನಾತ್‌ನ ಸಲಹಾ ಮಂಡಳಿ ಶುರಾದಲ್ಲಿ ಕೆಲಸ ಮಾಡುತ್ತಿದ್ದಾಳೆ. ಮಸೂದ್ ಅಜರ್‌ನ ತಂಗಿ ಸಾದಿಯಾ ಅಜರ್ ಸಹ ಇಲ್ಲೇ ಕೆಲಸ ಮಾಡುತ್ತಿದ್ದು, ಇಬ್ಬರೂ ಶಾಹೀನ ಸಯೀದ್ ಜೊತೆ ಸಂಪರ್ಕದಲ್ಲಿದ್ದರು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಡಾಕ್ಟರ್ ಐಪಿಎಸ್ ಆಗಿ… ಟೆರರ್ ಡಾಕ್ಟರ್‌ಗಳನ್ನ ಹಿಡಿದ ಸ್ಟೋರಿ
ಫರಿದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ಹಿರಿಯ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದ ಶಾಹೀನ ಕಾರಿನಲ್ಲಿ ಅಸಾಲ್ಟ್ ರೈಫಲ್‌ಗಳು ಮತ್ತು ಇತರ ಮದ್ದುಗುಂಡುಗಳು ಪತ್ತೆಯಾಗಿದ್ದವು. ಇದರ ಬೆನ್ನಲ್ಲೇ ಆಕೆಯನ್ನು ಬಂಧಿಸಲಾಗಿತ್ತು. ಜಮಾತ್-ಉಲ್-ಮೊಮಿನಾತ್‌ನ ವಿಭಾಗವನ್ನು ಭಾರತದಲ್ಲಿ ಸ್ಥಾಪಿಸುವ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಮಹಿಳೆಯರನ್ನು ನೇಮಿಸುವ ಕೆಲಸವನ್ನು ಆಕೆಗೆ ವಹಿಸಲಾಗಿತ್ತು ಎಂದು ತನಿಖೆಯಿಂದ ತಿಳಿದು ಬಂದಿದೆ.
ಲಕ್ನೋ ಮೂಲದ ಶಾಹೀನ ಸಯೀದ್, ಅಲ್-ಫಲಾಹ್ ವಿಶ್ವವಿದ್ಯಾಲಯಕ್ಕೆ ಸೇರುವ ಮೊದಲು ಹಲವಾರು ವೈದ್ಯಕೀಯ ಕಾಲೇಜುಗಳಲ್ಲಿ ಕೆಲಸ ಮಾಡಿದ್ದಳು. ಇದುವರೆಗಿನ ತನಿಖೆಯ ಪ್ರಕಾರ, ಸೆಪ್ಟೆಂಬರ್ 2012 ರಿಂದ ಡಿಸೆಂಬರ್ 2013 ರವರೆಗೆ ಕಾನ್ಪುರದ ವೈದ್ಯಕೀಯ ಕಾಲೇಜಿನಲ್ಲಿ ಔಷಧಶಾಸ್ತ್ರ ವಿಭಾಗದ ಮುಖ್ಯಸ್ಥಳಾಗಿದ್ದಳು. ಆಕೆಯ ಪಾಸ್‌ಪೋರ್ಟ್ ವಿವರಗಳ ಪ್ರಕಾರ 2016 ರಿಂದ 2018 ರವರೆಗೆ ಎರಡು ವರ್ಷಗಳ ಕಾಲ ಯುಎಇಯಲ್ಲಿ ವಾಸವಾಗಿದ್ದಳು ಎಂದು ತಿಳಿದುಬಂದಿದೆ.
ಶಾಹೀನ ಡಾ. ಹಯಾತ್ ಜಾಫರ್ ಎಂಬ ವೈದ್ಯರನ್ನು ವಿವಾಹವಾಗಿದ್ದಳು. 2012 ರಲ್ಲಿ ಇಬ್ಬರೂ ದೂರಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ, ಅವರು ಡಾ. ಜಾಫರ್ ಅವರೊಂದಿಗೆ ವಾಸಿಸುತ್ತಿದ್ದಾರೆ. ಮಾಜಿ ಪತಿಯಿಂದ ಬೇರ್ಪಟ್ಟಾಗಿನಿಂದ ಇಬ್ಬರು ಸಂಪರ್ಕದಲ್ಲಿರಲಿಲ್ಲ. ಅಲ್ಲದೇ ಅವಳು ಯಾರಿಗೂ ತಿಳಿಸದೇ ಆಗಾಗ ಕೆಲಸ ಬಿಟ್ಟುಬಿಡುತ್ತಿದ್ದಳು ಎಂದು ಆಕೆಯ ಸಹೋದ್ಯೋಗಿಗಳು ತಿಳಿಸಿದ್ದಾರೆ.
ಶಾಹಿನ ತಂದೆ ಈ ಬಗ್ಗೆ ಪ್ರತಿಕ್ರಿಯಿಸಿ, ಅವಳು ಎಂದಿಗೂ ಮೂಲಭೂತವಾದಿ ಆಗಿರಲಿಲ್ಲ. ಉದಾರವಾದಿಯಾಗಿದ್ದಳು. ಆಸ್ಟ್ರೇಲಿಯಾ ಅಥವಾ ಯುರೋಪಿನಲ್ಲಿ ನೆಲೆಸಬೇಕೆಂದು ಬಯಸಿದ್ದಳು. ಆಸ್ಟ್ರೇಲಿಯಾಕ್ಕೆ ಹೋಗುವ ಬಗ್ಗೆ ನಮಗೆ ಭಿನ್ನಾಭಿಪ್ರಾಯಗಳಿದ್ದವು. ಅವಳು ಶ್ವಾಸಕೋಶಶಾಸ್ತ್ರದ (Pulmonology) ಪ್ರಾಧ್ಯಾಪಕಿಯಾಗಿದ್ದಳು. ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿರಬಹುದು ಎಂದು ನಂಬುವುದಿಲ್ಲ ಎಂದಿದ್ದಾರೆ.
ವೈದ್ಯ ಶಾಹೀನ, ಮುಜಮ್ಮಿಲ್ ಮತ್ತು ಉಮರ್ ಫರಿದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದರು. ಶಾಹೀನ ಮತ್ತು ಮುಜಮ್ಮಿಲ್ ಬಂಧನದ ಬಳಿಕ ಉಮರ್ ಸೋಮವಾರ (ನ.10) ಕೆಂಪು ಕೋಟೆಯ ಬಳಿ ಕಾರು ಸ್ಫೋಟಿಸಿದ್ದ. ಈ ಘಟನೆಯಲ್ಲಿ 13 ಜನರು ಸಾವನ್ನಪ್ಪಿ, 20 ಜನರು ಗಾಯಗೊಂಡಿದ್ದರು. ಇದನ್ನೂ ಓದಿ: ಅಲ್ ಫಲಾಹ್ ವಿವಿಯ 17ನೇ ಬಿಲ್ಡಿಂಗ್, ರೂಮ್ ನಂ.13ರ ರಹಸ್ಯ ಬಹಿರಂಗ – ʻಆಪರೇಷನ್ ಡೈರಿʼಯಲ್ಲಿ ಏನಿತ್ತು?



