– 2028ರಲ್ಲೂ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತೆ
– ರಾಜು ಕಾಗೆ ಪ್ರತ್ಯೇಕ ರಾಜ್ಯ ಕೇಳೋದು ತಪ್ಪು ಎಂದ ಸಚಿವ
ಬೆಂಗಳೂರು: ಬಿಹಾರದಲ್ಲಿ NDA ಅಧಿಕಾರಕ್ಕೆ ಬಂದರೆ ಅದು ನಮ್ಮ ದೇಶದ, ಬಿಹಾರ ಜನರ ದುರಾದೃಷ್ಟ ಅಂತ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಬೇಸರ ಹೊರಹಾಕಿದರು.
ಬಿಹಾರ ಚುನಾವಣೆ (Bihar Elections 2025) ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಎಲ್ಲಾ ಸಮೀಕ್ಷೆಯಲ್ಲಿ NDA ಮುನ್ನಡೆ ಕೊಡಲಾಗಿದೆ. ಒಂದು ವೇಳೆ ಬಿಹಾರದಲ್ಲಿ NDA ಬಂದ್ರೆ ಅದು ನಮ್ಮ ದೇಶದ, ಬಿಹಾರ ಜನರ ದುರಾದೃಷ್ಟ. ಬಿಹಾರದಲ್ಲಿ 20 ವರ್ಷಗಳಿಂದ NDA ಅವರು ಆಡಳಿತ ಮಾಡ್ತಿದ್ದಾರೆ. ಆದರೂ ಬಿಹಾರ ಅಭಿವೃದ್ಧಿ ಆಗಿಲ್ಲ. ಬಿಜೆಪಿ ಬಂದ ಮೇಲೆ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಜಾಸ್ತಿ ಆಗ್ತಿದೆ. ಕೇಂದ್ರ ಸರ್ಕಾರ ಯಾಕೆ ಗಮನ ಕೊಡ್ತಿಲ್ಲ ಅಂತ ಕಿಡಿಕಾರಿದರು.
ಬಿಹಾರದ ಜನರು ಬೆಂಗಳೂರಿಗೆ (Bengaluru) ಬಂದು ಕೆಲಸ ಮಾಡ್ತಿದ್ದಾರೆ. ಅಲ್ಲಿ ಕೆಲಸ ಸಿಗದೇ ಇರೋದಕ್ಕೆ ಬರ್ತಿದ್ದಾರೆ. ಇದು ಅಭಿವೃದ್ಧಿ ಅಗ್ತಿಲ್ಲ ಅನ್ನೋದಕ್ಕೆ ಉದಾಹರಣೆ. ಬಿಹಾರ ರಾಜ್ಯ ಅಭಿವೃದ್ಧಿ ಆಗಿಲ್ಲ. ನಿರುದ್ಯೋಗ ಜಾಸ್ತಿ ಆಗಿದೆ. ಒಂದು ವೇಳೆ NDA ಅಧಿಕಾರಕ್ಕೆ ಬಂದ್ರೆ ಅದು ಬಿಹಾರ ಜನರ ದುರಾದೃಷ್ಟ ಅಂತ ಲೇವಡಿ ಮಾಡಿದ್ರು.
2028ರಲ್ಲೂ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ
ಇನ್ನೂ ಕಾಂಗ್ರೆಸ್ ಸರ್ವನಾಶ ಆಗುತ್ತೆ ಎಂಬ ಮಾಜಿ ಸಚಿವ ರಾಜಣ್ಣ ಹೇಳಿಕೆಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನೇತೃತ್ವದಲ್ಲಿ 2028ರಲ್ಲೂ ಕಾಂಗ್ರೆಸ್ ಪಕ್ಷವೇ (Congress Party) ಅಧಿಕಾರಕ್ಕೆ ಬರುತ್ತದೆ ಎಂದು ನುಡಿದರು.
ನಾವು ಅಭಿವೃದ್ದಿ ಕೆಲಸ ಮಾಡಿದ್ದೇವೆ, ಅದು ನಮಗೆ ಶ್ರೀರಕ್ಷೆ. ಬಿಜೆಪಿ-ಜೆಡಿಎಸ್ ವಿಪಕ್ಷದಲ್ಲಿ ನಾಯಕತ್ವ ಕೊರತೆ ಇದೆ. ಬಿಜೆಪಿ ಸೊರಗಿ ಹೋಗ್ತಿದೆ. ಬಿಜೆಪಿಗೆ ಈಗ ಇರೋ ಸ್ಥಾನವೂ ಮುಂದಿನ ಚುನಾವಣೆಯಲ್ಲಿ ಬರೊಲ್ಲ. ನಮ್ಮ ಪಕ್ಷ 136 ಸ್ಥಾನಕ್ಕಿಂತ ಜಾಸ್ತಿ ಸ್ಥಾನ ಬರ್ತೀವಿ ಎಂದರು. ಇದೇ ವೇಳೆ 2028ಕ್ಕೆ ರಾಮಲಿಂಗಾರೆಡ್ಡಿ ಸಿಎಂ ಸ್ಥಾನದ ಆಕಾಂಕ್ಷಿ ಆಗ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ನಾನು ಯಾವತ್ತೂ ಸಿಎಂ ಆಗೊಲ್ಲ ಎಂದರು.
ನವೆಂಬರ್ ಕ್ರಾಂತಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಯಾವ ಕ್ರಾಂತಿಯೂ ಇಲ್ಲ ಏನೂ ಇಲ್ಲ. ಬಿಜೆಪಿ ಅವರು ಸುಳ್ಳು ಮಾಹಿತಿ ಕೊಡ್ತಾರೆ. ನೀವು ತೋರಿಸ್ತೀರಾ ಅದಕ್ಕೆ ಬಿಜೆಪಿ ಅವರು ಮಾತಾಡ್ತಾರೆ. ಯಾವ ಕ್ರಾಂತಿಯೂ ಇಲ್ಲ ಅಂತ ಕುಟುಕಿದರು.
ರಾಜು ಕಾಗೆ ಪ್ರತ್ಯೇಕ ರಾಜ್ಯ ಕೇಳೋದು ತಪ್ಪು
ಇದೇ ವೇಳೆ ಶಾಸಕ ರಾಜು ಕಾಗೆ (Raju Kage) ಪ್ರತ್ಯೇಕ ರಾಜ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಶಾಸಕ ರಾಜುಕಾಗೆ ಅವರು ಪ್ರತ್ಯೇಕ ಉತ್ತರ ರಾಜ್ಯದ ಬೇಕು ಅನ್ನೋದು ತಪ್ಪು. 1956 ರಲ್ಲಿ ನಮ್ಮ ರಾಜ್ಯ ಉದಯ ಆಯ್ತು. 78 ವರ್ಷಗಳಲ್ಲಿ ಉತ್ತರ ಕರ್ನಾಟಕ ಸಾಕಷ್ಟು ಅಭಿವೃದ್ಧಿ ಆಗಿದೆ. ರಾಜು ಕಾಗೆ ಅವರಿಗೆ ಇನ್ನು ಅಭಿವೃದ್ಧಿ ಆಗಬೇಕು ಅಂತ ಇರಬೇಕು. ಕಾಂಗ್ರೆಸ್ ಉತ್ತರ ಕರ್ನಾಟಕಕ್ಕೆ ಸಾಕಷ್ಟು ಅಭಿವೃದ್ಧಿ ಮಾಡಿದೆ. ಕರ್ನಾಟಕವನ್ನ ಎರಡು ಮಾಡಬೇಕು ಅನ್ನೋದು ತಪ್ಪು. ಬೇರೆ ರಾಜ್ಯ ಮಾಡೋ ಬಗ್ಗೆ ಮಾತಾಡೋದು ಸೂಕ್ತ ಅಲ್ಲ ಅಂತ ತಿಳಿವಳಿಕೆ ಹೇಳಿದರು.
ಅಭಿವೃದ್ಧಿ ಮಾಡಬೇಕು ಅಂತ ಕೇಳಲಿ ತಪ್ಪಲ್ಲ. ಆದರೆ ಪ್ರತ್ಯೇಕ ರಾಜ್ಯ ಕೇಳೋದು ತಪ್ಪು. ಉತ್ತರ ಕರ್ನಾಟಕ ಎಲ್ಲಾ ಸರ್ಕಾರದಲ್ಲೂ ಅಭಿವೃದ್ಧಿ ಆಗಿದೆ. ಹೆಚ್ಚು ಅನುದಾನ ಕೇಳೋದು ತಪ್ಪಲ್ಲ. ಸರ್ಕಾರ ಅದಕ್ಕೆ ಸ್ಪಂದನೆ ನೀಡಬೇಕು ಅಂತ ತಿಳಿಸಿದರು.




