ನವದೆಹಲಿ: ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಕ್ಕೆ ಈ ಹಿಂದೆ ವಜಾಗೊಂಡಿದ್ದ ಪ್ರಾಧ್ಯಾಪಕನೊಬ್ಬನನ್ನು ಅಲ್ ಫಲಾಹ್ ವಿಶ್ವವಿದ್ಯಾಲಯ ಮತ್ತೆ ನೇಮಕ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ದೆಹಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಫರಿದಾಬಾದ್‌ನಲ್ಲಿರುವ ಅಲ್ ಫಲಾಹ್ ವಿವಿ ಕೂಡ ತನಿಖೆಗೆ ಒಳಪಟ್ಟಿದೆ. ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಕ್ಕಾಗಿ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್‌ರಿಂದ ಪ್ರಾಧ್ಯಾಪಕನೊಬ್ಬ ವಜಾಗೊಂಡಿದ್ದ. ಆದರೆ, ಈ ವಿವಿ ಆತನನ್ನು ಮತ್ತೆ ನೇಮಕ ಮಾಡಿಕೊಂಡಿತ್ತು.
ಅಲ್-ಫಲಾಹ್ ವಿಶ್ವವಿದ್ಯಾಲಯದ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ. ನಿಸಾರ್-ಉಲ್-ಹಸನ್‌ನನ್ನು 2023 ರಲ್ಲಿ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಸಂವಿಧಾನದ 311(2)(ಸಿ) ವಿಧಿಯ ಅಡಿಯಲ್ಲಿ ವಜಾಗೊಳಿಸಿದ್ದರು. ರಾಜ್ಯದ ಭದ್ರತೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಇಲಾಖಾ ವಿಚಾರಣೆಯಿಲ್ಲದೆ ಸಾರ್ವಜನಿಕ ಸೇವಕನನ್ನು ವಜಾಗೊಳಿಸಲು ಈ ನಿಬಂಧನೆ ಸರ್ಕಾರಕ್ಕೆ ಅವಕಾಶ ನೀಡುತ್ತದೆ.
ಡಾ. ನಿಸಾರ್-ಉಲ್-ಹಸನ್ ವಜಾಗೊಳ್ಳುವ ಮೊದಲು ಶ್ರೀನಗರದ ಶ್ರೀ ಮಹಾರಾಜ ಹರಿ ಸಿಂಗ್ (SMHS) ಆಸ್ಪತ್ರೆಯಲ್ಲಿ ಸಹಾಯಕ ವೈದ್ಯಕೀಯ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸುತ್ತಿದ್ದ.
ಭಾರತದ ಸಂವಿಧಾನದ 311 ನೇ ವಿಧಿಯ ಷರತ್ತು (2) ರ ನಿಬಂಧನೆಯ ಉಪ-ಷರತ್ತು (ಸಿ) ಅಡಿಯಲ್ಲಿ, ರಾಜ್ಯದ ಭದ್ರತೆಯ ಹಿತದೃಷ್ಟಿಯಿಂದ ಶ್ರೀನಗರದ ಎಸ್‌ಎಂಹೆಚ್‌ಎಸ್ ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕ (ವೈದ್ಯಕೀಯ) ಡಾ. ನಿಸಾರ್-ಉಲ್-ಹಸನ್ ಪ್ರಕರಣದಲ್ಲಿ ತನಿಖೆ ನಡೆಸುವುದು ಸೂಕ್ತವಲ್ಲ ಎಂದು ಲೆಫ್ಟಿನೆಂಟ್ ಗವರ್ನರ್ ಆದೇಶದಲ್ಲಿ ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ವಜಾಗೊಳಿಸಿದ ನಂತರ, ಡಾ. ನಿಸಾರ್-ಉಲ್-ಹಸನ್‌ನನ್ನು ಫರಿದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯವು ನೇಮಕ ಮಾಡಿಕೊಂಡಿದೆ. ಆತನನ್ನು ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ವಿಭಾಗದಲ್ಲಿ ಪ್ರಾಧ್ಯಾಪಕನನ್ನಾಗಿ ನೇಮಿಸಲಾಗಿದೆ. 2014 ರಲ್ಲಿ ಸ್ಥಾಪನೆಯಾದ ಅಲ್-ಫಲಾಹ್ ವಿಶ್ವವಿದ್ಯಾಲಯವು ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದೆ ಎಂಬ ಆರೋಪವನ್ನು ನಿರಾಕರಿಸಿದೆ.

