ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ (Delhi) ಕೆಂಪುಕೋಟೆ (Redfort Blast) ಬಳಿ ಕಾರ್ ಬ್ಲಾಸ್ ಪ್ರಕರಣದ ತನಿಖೆ ತೀವ್ರಗೊಂಡಿದೆ. ಸ್ಫೋಟದ ಸ್ಥಳ ಪರಿಶೀಲನೆ ವೇಳೆ 2 ಜೀವಂತ ಕಾಟ್ರಿಡ್ಜ್ ಅನ್ನು ಎಫ್‌ಎಸ್‌ಎಲ್ (FSL) ತಂಡ ವಶಕ್ಕೆ ಪಡೆದಿದೆ. ಇನ್ನೂ ಪ್ರಕರಣದಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.
ಪ್ರಕರಣ ಸಂಬಂಧ ಸ್ಥಳ ಪರಿಶೀಲನೆ ವೇಳೆ ಎರಡು ವಿಭಿನ್ನ ರೀತಿಯ ಸ್ಫೋಟಕಗಳ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಒಂದು ಅಮೋನಿಯಂ ನೈಟ್ರೇಟ್‌ಗೆ ಹೋಲುವ ಸ್ಫೋಟಕ ಸಂಗ್ರಹವಾಗಿದ್ರೆ, ಇನ್ನೊಂದು ಸ್ಫೋಟಕ ಅಮೋನಿಯಂ ನೈಟ್ರೇಟ್‌ಗಿಂತ ಪ್ರಬಲವಾಗಿದೆ ಎಂಬುದು ತಿಳಿದುಬಂದಿದೆ. ಸ್ಫೋಟದ ಸ್ಥಳದಿಂದ ಒಟ್ಟು 42 ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿದ್ದು, ಅದರಲ್ಲಿ 20 ವಸ್ತುಗಳು ವಾಹನಗಳ ಭಾಗಗಳಾಗಿವೆ. ಇದರಲ್ಲಿ ಟೈರ್‌ಗಳು, ಚಾಸಿಸ್, ಸಿಎನ್‌ಜಿ ಸಿಲಿಂಡರ್ ಮತ್ತು ಬಾನೆಟ್‌ನ ಭಾಗಗಳು ಸೇರಿವೆ. ಇಂದು ಎಲ್ಲಾ ವಸ್ತುಗಳ ಮಾದರಿ ಬಗ್ಗೆ ವಿಶ್ಲೇಷಣಾ ಕಾರ್ಯ ಶುರುವಾಗಲಿದೆ.ಇದನ್ನೂ ಓದಿ: ಬಂಧಿತ ಉಗ್ರ, ವೈದ್ಯ ಆದಿಲ್‌ಗೆ ಸಿಗುತ್ತಿತ್ತು ತಿಂಗಳಿಗೆ 5 ಲಕ್ಷ ರೂ. ಸಂಬಳ!
ಇದರ ಜೊತೆಗೆ ಕೆಂಪುಕೋಟೆ ಬಳಿ ಸ್ಫೋಟಗೊಂಡ ಕಾರಿನ ಬಗ್ಗೆ ಮತ್ತಷ್ಟು ಡೀಟೈಲ್ಸ್ ಹುಡುಕುವ ಕೆಲಸ ಮುಂದುವರಿದಿದೆ. ಇದೊಂದು ಆತ್ಮಾಹುತಿ ದಾಳಿಯಲ್ಲ, ಶಂಕಿತ ಉಗ್ರ ಡಾ. ಉಮರ್ ಮೊಹಮದ್ ಗಲಿಬಿಲಿಗೊಂಡು ಸ್ಫೋಟಗೊಳಿಸಿರುವ ಶಂಕೆ ಇದೆ. ಜೊತೆಗೆ ಕಾರಿನಲ್ಲಿ ಯಾವುದೇ ಸುಧಾರಿತ ಸ್ಫೋಟಕಗಳು ಇರಲಿಲ್ಲ, ಇದೊಂದು ಅಪಕ್ವ, ಸುಧಾರಿತವಲ್ಲದ ಸ್ಫೋಟಕಗಳು ಎಂಬ ಮಾಹಿತಿ ಲಭ್ಯವಾಗಿದೆ. ಈ ಎಲ್ಲಾ ಅಂಶಗಳ ವಿಚಾರವಾಗಿ ಗುಪ್ತಚರ ಇಲಾಖೆಯಿಂದ ತನಿಖೆ ಮುಂದುವರಿದಿದೆ.
ಕಾರು ಬ್ಲಾಸ್ಟ್ನಲ್ಲಿ ಡಾಕ್ಟರ್‌ಗಳ ಕೈವಾಡವಿರುವ ಶಂಕೆ ಹಿನ್ನೆಲೆ ವಿವಿಧ ಆಯಾಮಗಳಲ್ಲಿ ತನಿಖೆ ಚುರುಕುಗೊಂಡಿದೆ. ಅದರಲ್ಲೂ ಪ್ರಮುಖವಾಗಿ ಕಳೆದ ಅಕ್ಟೋಬರ್‌ನಲ್ಲಿ ಡಾಕ್ಟರ್ ಉಮರ್ ದೆಹಲಿಗೆ ಭೇಟಿ ನೀಡಿದ್ದ. ಈ ಮಧ್ಯೆ ಆತ ಶ್ರೀನಗರಕ್ಕೆ ಹೋಗಿದ್ಯಾಕೆ? ಅಲ್ಲದೇ ಅಕ್ಟೋಬರ್ 5 ರಿಂದ 9ರವರೆಗೆ ಶ್ರೀನಗರದಲ್ಲಿಯೇ ಇದ್ದ ಎಂಬ ಮಾಹಿತಿ ಲಭ್ಯವಾಗಿದೆ. ಆವಂತಿಪೊರಾ, ಬತ್ಮಾಲೂಗೂ ಭೇಟಿ ನೀಡಿ, ಆವಂತಿಪೊರಾದಲ್ಲಿ ಜೈಶ್ ಸಂಘಟನೆ ಪರ ಇರುವವರ ಜೊತೆ ಕ್ಲೋಸ್ಡ್ ಡೋರ್ ಮೀಟಿಂಗ್ ಮಾಡಿದ್ದ ಎನ್ನಲಾಗಿದೆ. ಅಲ್ಲಿಯೇ ಉಮರ್ ಕಾರು ಖರೀದಿಸಿದ್ದ ಎಂಬುದರ ಬಗ್ಗೆ ಮಾಹಿತಿ ಸಿಕ್ಕಿದೆ. ಇನ್ನು ಪ್ರಿಪ್ಲ್ಯಾನ್ ಮಾಡಿಯೇ ಸ್ಫೋಟಕ್ಕೆ ಕಾರು ಖರೀದಿಸಿರುವ ಶಂಕೆ ವ್ಯಕ್ತವಾಗಿದೆ.
ಕೆಂಪುಕೋಟೆ ಬಳಿ ಅಟ್ಟಹಾಸ ಮೆರೆದವರ ಬೆನ್ನತ್ತಿರುವ ತನಿಖಾ ತಂಡ ಒಬ್ಬೊಬ್ಬರೇ ಶಂಕಿತರನ್ನು ವಶಕ್ಕೆ ಪಡೆಯುತ್ತಿದ್ದಾರೆ. ಅದರಂತೆ ಶೋಪಿಯಾನ್‌ನಲ್ಲಿ ಮೌಲ್ವಿ ದಂಪತಿ ಸೆರೆ ಹಿಡಿಯಲಾಗಿದ್ದು, 5 ಮೊಬೈಲ್ ಫೋನ್‌ಗಳನ್ನು ತನಿಖಾ ತಂಡ ವಶಕ್ಕೆ ಪಡೆದಿದೆ. ಮೌಲ್ವಿ ಇಮಾಮ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮುಜಮ್ಮಿಲ್ ಜೊತೆ ನಂಟು ಇರುವುದು ಬಹಿರಂಗವಾಗಿದೆ. ಅಲ್ಲದೇ ಪಾಕಿಸ್ತಾನ ಟೀಂ ಜೊತೆ ಟೆಲಿಗ್ರಾಂ ಮೂಲಕ ನಿರಂತರ ಸಂಪರ್ಕದಲ್ಲಿರುವುದು ತಿಳಿದುಬಂದಿದೆ.ಇದನ್ನೂ ಓದಿ: ರೋಗಿಗಳಿಂದ ದೂರು, ಕೆಲಸಕ್ಕೆ ಚಕ್ಕರ್, ಕೊನೆಗೆ ವಜಾ – ಇದು ಕಾರ್ ಬಾಂಬರ್ ವೈದ್ಯನ ಅಸಲಿ ಮುಖ

