ನವದೆಹಲಿ: ಇಲ್ಲಿನ ಕೆಂಪುಕೋಟೆಯ (Redfort) ಬಳಿ ಸಂಭವಿಸಿದ್ದ ಸ್ಫೋಟ ಪ್ರಕರಣದ ತನಿಖೆ ಚುರುಕುಗೊಂಡಿದೆ. ಪೊಲೀಸರು ಫರೀದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದ ದಾಳಿ ನಡೆಸಿದ್ದು, ಜೈಶ್ ಮಹಿಳಾ ವಿಂಗ್‌ನ ಭಾರತದ ನಾಯಕಿ, ವೈದ್ಯೆಯಾಗಿರುವ ಶಾಹಿನಾ ಶಾಹಿದ್ (Shaheena Shahid) ಬಂಧಿಸಿದ್ದಾರೆ.
ಸೋಮವಾರ (ನ.10) ಜಮ್ಮು ಕಾಶ್ಮೀರ ಮತ್ತು ಫರೀದಾಬಾದ್ ಪೊಲೀಸರು ಜಂಟಿ ಕಾರ್ಯಾಚರಣೆ ವೇಳೆ 2,900 ಕೆ.ಜಿ ಸ್ಫೋಟಕಗಳನ್ನು ಪತ್ತೆ ಹಚ್ಚಿ, ಎಂಟು ಜನರನ್ನು ಬಂಧಿಸಿದ್ದರು. ಅದರ ಬೆನ್ನಲ್ಲೇ ಇದೀಗ ಅಲ್-ಫಲಾಹ್ ವಿಶ್ವವಿದ್ಯಾಲಯದ ಮೇಲೆ ದಾಳಿ ನಡೆಸಿ, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೂ ವೈದ್ಯೆ ಶಾಹಿನಾ ಕಾರಿನಲ್ಲಿ ರೈಫಲ್, ಮದ್ದುಗುಂಡುಗಳು ಪತ್ತೆಯಾಗಿವೆ.ಇದನ್ನೂ ಓದಿ: ದೆಹಲಿ ಸ್ಫೋಟಕ್ಕೆ ಛಿದ್ರಗೊಂಡ ಕುಟುಂಬಗಳ ಕನಸು – ಸಂತ್ರಸ್ತರ ಮನೆಯ ಕಣ್ಣೀರ ಕತೆ
ಬಂಧಿತ ವೈದ್ಯೆ ಜೈಶ್ ಮಹಿಳಾ ವಿಂಗ್‌ಗೆ ಭಾರತದ ನಾಯಕಿಯಾಗಿದ್ದು, ಜೆಇಎಂ ಸಂಸ್ಥಾಪಕ ಮಸೂದ್ ಅಜರ್‌ನ ಸಹೋದರಿ ಸಾದಿಯಾ ಅಜರ್ ನೇತೃತ್ವದ ಜೆಇಎಂನ ಮಹಿಳಾ ವಿಭಾಗವಾದ ಜಮಾತ್ ಉಲ್-ಮೊಮಿನಾತ್‌ನ ಕಮಾಂಡ್ ಜವಾಬ್ದಾರಿಯನ್ನು ಕೂಡ ಆರೋಪಿತೆಗೆ ವಹಿಸಲಾಗಿತ್ತು. ಜೊತೆಗೆ ಸಾದಿಯಾ ಅಜರ್ ಪತಿ ಯೂಸುಫ್ ಅಜರ್ 1996ರ ಕಂದಹಾರ್ ಹೈಜಾಕ್‌ನ ಸೂತ್ರಧಾರಿಯಾಗಿದ್ದ ಎಂದು ಮೂಲಗಳು ತಿಳಿಸಿವೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ಶಾಹಿನಾ ಶಾಹಿದ್ ಲಕ್ನೋದ ಲಾಲ್‌ಬಾಗ್ ನಿವಾಸಿಯಾಗಿದ್ದು, ಬಂಧಿತ ಕಾಶ್ಮೀರಿ ವೈದ್ಯ ಮುಜಮ್ಮಿಲ್ ಗನೈ ಅಲಿಯಾಸ್ ಮುಸೈಬ್ ಜೊತೆಗೆ ನಿಕಟ ಸಂಬಂಧ ಹೊಂದಿದ್ದರು ಎಂದು ತಿಳಿದುಬಂದಿದೆ.
ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಗೇಟ್ 1ರ ಬಳಿ ಸೋಮವಾರ (ನ.10) ಸಂಜೆ 6:45ರ ಸುಮಾರಿಗೆ ಸಂಭವಿಸಿದ ಭಾರೀ ಸ್ಫೋಟದಲ್ಲಿ ಎಂಟು ಜನರು ಸಾವನ್ನಪ್ಪಿದ್ದು, 24 ಜನರು ಗಾಯಗೊಂಡಿದ್ದಾರೆ. ಸ್ಫೋಟದಿಂದಾಗಿ ಆರು ಕಾರುಗಳು, ಎರಡು ಇ-ರಿಕ್ಷಾಗಳು ಮತ್ತು ಒಂದು ಆಟೋರಿಕ್ಷಾ ಬೆಂಕಿಗಾಹುತಿಯಾಗಿವೆ. ಸದ್ಯ ರಾಜಧಾನಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಫೋಟದ ಕಾರಣ ಮತ್ತು ಉದ್ದೇಶವನ್ನು ಪತ್ತೆಹಚ್ಚಲು ಎನ್‌ಐಎ ತನಿಖೆ ನಡೆಸುತ್ತಿದೆ.ಇದನ್ನೂ ಓದಿ: ಉಮರ್ 2 ತಿಂಗಳ ಹಿಂದೆ ಮನೆಗೆ ಬಂದಿದ್ದ – ದೆಹಲಿ ಸ್ಫೋಟದಿಂದ ನಮಗೂ ಆಘಾತವಾಗಿದೆ ಎಂದ ಅತ್ತಿಗೆ

